Advertisement

ಕನಸಿನಲ್ಲಿ ಹೇಳಿದಂತೆ ಬಾಲಕನಿಗೆ ವಿಗ್ರಹ ಸಿಕ್ಕಿದೆಯೇ? ವಿಸ್ಮಯಯೋ, ವದಂತಿಯೋ?

07:23 PM Mar 05, 2021 | Team Udayavani |

ಚೇಳೂರು: ಕೆಲವೊಂದು ಘಟನೆಗಳು ನಿಜವೋ,ಸುಳ್ಳೋ, ಪ್ರಚಾರಕ್ಕಾಗಿಯೋ ಅಥವಾ ಪವಾಡವೋ, ವಿಸ್ಮಯವೋ ಎಂಬಂತೆ ಸುದ್ದಿಯಾಗುತ್ತವೆ. ಕನಸಿನಲ್ಲಿ ಬಂದಿದೆ, ಹೇಳಲಾಗಿದೆ ಎಂಬ ವಿಷಯಗಳು ಕೇಳಿರುತ್ತೇವೆ. ಅದರಂತೆ ತಾಲೂಕಿನಲ್ಲಿ ಇಂತಹ ಒಂದು ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿವಿಧ ಆಯಾಮಗಳಲ್ಲಿ ಅಂತೆ-ಕಂತೆಗಳು ತೇಲಾಡುತ್ತಿವೆ.

Advertisement

ಗ್ರಾಮಸ್ಥರು ಹೇಳುವುದೇನು?: ಶಾಲಾ ಬಾಲಕನಿಗೆ ರಾತ್ರಿ ದೇವರು ಕನಸಿನಲ್ಲಿ ಬಂದ ರೀತಿಯಲ್ಲೇ ಬಂಗಾರದ ವಿಗ್ರಹಗಳು ಸಿಕ್ಕಿವೆ ಎನ್ನಲಾಗಿದ್ದು,ಸರ್ಕಾರಕ್ಕೆ ಒಪ್ಪಿಸದೇ ರಾಜಕೀಯದ ಗಾಳಿಗೆ ಸಿಕ್ಕಿ ಹಾಕಿಕೊಂಡಿರುವ ಕುತೂಹಲಕರ ಘಟನೆ ಚೇಳೂರು ತಾಲೂಕಿನ ಸೋಮನಾಥಪುರ ಗ್ರಾಪಂನ ಶೀಗಲಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕನಸಿನಲ್ಲಿ ವಿಗ್ರಹ ವಿಷಯ: ಶೀಗಲಪಲ್ಲಿ ಗ್ರಾಮದ ಅಂಜಿನಪ್ಪ ಎಂಬುವರ ಮಗ ಎಸ್‌.ಎ.ವಿಷ್ಣು ಸೋಮನಾಥಪುರ ಸರ್ಕಾರಿ ಅನುದಾನಿತ ಶಾಲೆಯಲ್ಲಿ6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿನಿತ್ಯ ಗ್ರಾಮದ ತನ್ನ ಮನೆಯ ಪಕ್ಕದಲ್ಲಿ ಗಿಡ-ಮರಗಳಿಗೆ ನೀರು ಹಾಕುತ್ತಿದ್ದನು. ಒಂದು ತಿಂಗಳ ಹಿಂದೆ ಬಾಲಕನಿಗೆ, ರಾತ್ರಿ ಕನಸಿನಲ್ಲಿ ಬಂದು ಇಂತಹ ಜಮೀನುಗಳಲ್ಲಿ ದೇವರ ವಿಗ್ರಹಗಳಿವೆ. ನಿಮ್ಮ ಜಮೀನು ಪಕ್ಕದಲ್ಲೇ ನನ್ನ ವಿಗ್ರಹಗಳು ಸಿಗುತ್ತೆ. ನೀನು ಬಂದು ನೋಡಿದರೆ ಮೇಲಕ್ಕೆಳುತ್ತವೆಬಾ….ಎಂದು ಕನಸು ಬಿದ್ದಿದೆ ಎನ್ನಲಾಗಿದೆ. ಇದನ್ನುಬಾಲಕ ಪೋಷಕರಿಗೆ ತಿಳಿಸಿದ್ದು, ನೀನು ಚಿಕ್ಕವನು, ಆರೀತಿ ಏನೂ ಇರಲ್ಲ ಎಂದು ಕಿವಿಗೊಟ್ಟಿಲ್ಲ ಎನ್ನಲಾಗಿದೆ.

ಬಾಲಕ ಅನೇಕ ದಿನಗಳು ಸುಮ್ಮನಿದ್ದರೂ ಪದೇಪದೆ ಕನಸು ಬೀಳುತ್ತಿದ್ದರಿಂದ 15 ದಿನಗಳ ಹಿಂದೆ ಹೋಗಿ ಕಟ್ಟಿಗೆಯಿಂದ ಅರ್ಧ ಅಡಿ ಭೂಮಿ ಅಗೆದಾಗ ಮೊದಲು ಅರ್ಧ ಅಡಿಯ ಹತ್ತು ಕೈಗಳಿರುವ ಗದೆ ಹಿಡಿದಿರುವ ಪಂಚಮುಖೀ ಆಂಜನೇಯಸ್ವಾಮಿ ಮತ್ತು ಎರಡು ಅಡಿಯ ನಾಗರಹಾವಿನ ಹೆಡೆ ಎತ್ತಿ ಕುಳಿತಿರುವ ಲಕ್ಷ್ಮೀ ದೇವಿ ವಿಗ್ರಹಗಳು ಎದ್ದೇಳಿವೆ ಎಂಬಸುದ್ದಿ ಹರಿದಾಡುತ್ತಿದೆ.

ಹುಣಸೆ ಮರ ಕೆಳಗೆ ಪೂಜೆ: ಗಾಬರಿಗೊಂಡ ಬಾಲಕ ಅಲ್ಲಿಯೇ ವಿಗ್ರಹಗಳನ್ನು ಹೂಳಲು ಪ್ರಯತ್ನಿಸಿದರೂ ಭೂಮಿಯ ಮೇಲಕ್ಕೆ ಬಂದು ನಿಂತಾಗ, ಅವುಗಳನ್ನ ಹುಲ್ಲಿನ ಬಣವೆಯಲ್ಲಿ ಬಚ್ಚಿಟ್ಟು ಕಳೆದ ಒಂಭತ್ತು ದಿನಗಳಿಂದ ಹುಣಸೇ ಮರದ ಕೆಳಗೆ ಪೂಜೆ ಮಾಡುತ್ತಿದ್ದ ಎನ್ನಲಾಗಿದ್ದು, ತದ ನಂತರ 6 ದಿನಗಳ ತರುವಾಯ ತನ್ನ ಮನೆಯ ಮುಂದೆ ವಿಗ್ರಹಗಳಿಟ್ಟು ಪೂಜೆ ಮಾಡುತ್ತಿರುವುದು ಗ್ರಾಮದ ತುಂಬೆಲ್ಲಾ ಹಬ್ಬಿದೆ.

Advertisement

15 ದಿನಗಳಿಂದ ಬಾಲಕನಿಗೆ ಆಗಾಗ ದೇವರು ಮೈ ಮೇಲೆ ಬಂದು ದೇವಾಲಯ ಕಟ್ಟಿಸಬೇಕಾ?ಬೇಡವಾ? ಎಂಬುದರ ಬಗ್ಗೆ ಸರಿಯಾಗಿ ಹೇಳುತ್ತಿಲ್ಲ.ಇದೇ ಶುಕ್ರವಾರ ಹೇಳುತ್ತೇನೆ ಎಂದು ಹೇಳಿದ್ದಾರೆಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದರು.

ಸರ್ಕಾರದ ವಶಕ್ಕೆ ಕೊಡುವುದಿಲ್ಲ: ಎರಡು ವಿಗ್ರಹಗಳು ಸರ್ಕಾರದ ವಶಕ್ಕೆ ಕೊಡುವುದಿಲ್ಲ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಕೈಜೋಡಿಸಿರುವ ವಿವಿಧ ರಾಜಕೀಯದ ಪಕ್ಷಗಳ ನಾಯಕರು, ಇದೇ ಗ್ರಾಮದಲ್ಲಿ ವಿಗ್ರಹಗಳು ಇಟ್ಟು ದೇವಾಲಯ ಕಟ್ಟಿಕೊಳ್ಳಲಿ. ಸರ್ಕಾರದ ವಶಕ್ಕೆ ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಅಧಿಕಾರಿಗಳಿಗೆ ಹೇಳಿದ್ದು,ಇದರಲ್ಲೂ ರಾಜಕೀಯದ ಗಾಳಿ ಬೀಸಿದೆ. ಬುಧವಾರ ಸಂಜೆ ಬಾಗೇಪಲ್ಲಿ ನೂತನ ತಹಶೀಲ್ದಾರ್‌ ಡಿ.ಎ.ದಿವಾಕರ್‌ ಹಾಗೂ ಪಾತಪಾಳ್ಯ ಪೊಲೀಸ್‌ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಬಾಲಕನ ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆಡೆಗೆ ತೆರಳಿರುವುದು ಕಂಡುಬಂದಿದೆ.

ಲೋಕೇಶ್‌ ಪಿ.ವಿ. 

Advertisement

Udayavani is now on Telegram. Click here to join our channel and stay updated with the latest news.

Next