Advertisement

ಇಡಗುಂಜಿ ಮೇಳದ ಓಡುವ ಕುದುರೆ ನೆಬ್ಬೂರು

12:54 AM Jun 03, 2019 | Lakshmi GovindaRaj |

ಬೆಂಗಳೂರು: “ಇಡಗುಂಜಿ ಮೇಳದಲ್ಲಿ ಸತತ ನಾಲ್ಕು ದಶಕಗಳ ಕಾಲ ಎಲ್ಲಿಯೂ ನಿಲ್ಲದೆ, ಓಡುವ ಕುದುರೆಯಂತೆ ನಿಷ್ಠೆ ಕಾಯ್ದುಕೊಂಡವರು ನೆಬ್ಬೂರು ನಾರಾಯಣ’ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ವಿಶ್ಲೇಷಿಸಿದರು.

Advertisement

ನಗರದ ಮಲ್ಲೇಶ್ವರದಲ್ಲಿನ ಹವ್ಯಕ ಭವನದಲ್ಲಿ ಭಾನುವಾರ ಅಖೀಲ ಹವ್ಯಕ ಮಹಾಸಭಾ ಏರ್ಪಡಿಸಿದ್ದ ನೆಬ್ಬೂರು ನಾರಾಯಣ ಭಾಗವತ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನೆಬ್ಬೂರು ಇಡಗುಂಜಿ ಮೇಳದಲ್ಲಿಯೇ ಕೊನೆಯವರೆಗೆ ಇದ್ದು, ನಿಷ್ಠೆ ಕಾಯ್ದುಕೊಂಡಂತಹ ವ್ಯಕ್ತಿ. ಈ ನಿಟ್ಟಿನಲ್ಲಿ ಅವರೊಂದು ಓಡುವ ಕುದುರೆ ಎಂದು ಬಣ್ಣಿಸಿದರು.

ನೆಬ್ಬೂರು ಅವರು ಹಾಡುಗಾರಿಕೆ, ಶಾಸ್ತ್ರೀಯ ಸಂಗೀತ, ತಾಳ ಹಾಗೂ ಯಕ್ಷಗಾನ ಶೈಲಿಯಲ್ಲಿ ಪ್ರವೀಣರಾಗಿದ್ದರು. ಯಾವುದಾದರೂ ಹಾಡು ಹಾಡುವಾಗ ರಸ, ಭಾವದಲ್ಲಿ ತಲ್ಲೀನರಾಗಿ ಸಭೆಯಲ್ಲಿ ನೆರೆದಿರುವವರ ಹೃದಯವನ್ನು ತಟ್ಟುವ ರೀತಿ ಹಾಡುತ್ತಿದ್ದರು.

ಕರುಣರಸದಲ್ಲಿ ಅವರನ್ನು ಮೀರಿಸುವಂತಹ ಶೈಲಿ ಇತರರಲ್ಲಿ ಬರಲು ಸಾಧ್ಯವೇ ಇಲ್ಲ ಎಂದ ಅವರು, ನೆಬ್ಬೂರರು ಆರ್ಥಿಕವಾಗಿ ಬಡವರಾಗಿದ್ದರು. ಆದರೆ, ಅವರಲ್ಲಿ ಹೃದಯವಂತಿಕೆ ಇತ್ತು. ತಾನು ಬಡವ ಎಂದು ಯಾರೊಬ್ಬರ ಬಳಿಯೂ ಹೇಳಿಕೊಂಡವರಲ್ಲ. ಜನರ ಬಳಿ ನಡೆದುಕೊಳ್ಳುವ ರೀತಿ, ತೋರುತ್ತಿದ್ದ ಪ್ರೀತಿ ಬಡತನಕ್ಕೂ ಮೀರಿದ್ದು ಎಂದು ಸ್ಮರಿಸಿದರು.

ಸಭೆಯಲ್ಲಿ ಅಖೀಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಯಕ್ಷಗಾನ ಚಿಂತಕ ಶ್ರೀಪಾದ ಹೆಗಡೆ ಹುಕ್ಲಮಕ್ಕಿ, ಉದ್ಯಮಿ ಸುಧಾಕಿರಣ ಅಧಿಕಶ್ರೇಣಿ, ಮದ್ದಳೆ ವಾದಕ ಅನಂತ ಪದ್ಮನಾಭ ಪಾಠಕ್‌, ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್‌ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ್‌ ಸಂಪ, ಕಾರ್ಯದರ್ಶಿ ಪ್ರಶಾಂತ್‌ ಭಟ್‌,

Advertisement

ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್‌, ಅರ್ಥಶಾಸ್ತ್ರಜ್ಞ ಮೋಹನ್‌ ಭಾಸ್ಕರ ಹೆಗಡೆ, ಹಿರಿಯ ಪತ್ರಕರ್ತ ರವೀಂದ್ರ ಭಟ್‌ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕರಾದ ಸದಾನಂದ ಹೆಗಡೆ ಹಣಜಿಬೈಲ್‌ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಪುಷ್ಪಾಂಜಲಿ, ಕಾವ್ಯಾಂಜಲಿ, ಭಾವಾಂಜಲಿ ಹಾಗೂ ನಾಟ್ಯಾಂಜಲಿ ಎಂಬ ವಿವಿಧ ಪ್ರಾಕಾರಗಳ ಮೂಲಕ ನೆಬ್ಬೂರು ಅವರಿಗೆ ಗೌರವ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next