Advertisement

ಜಿಡಿಪಿ ಕುಸಿದರೂ ಭಯವಿಲ್ಲ  ಚೇತರಿಕೆ ವಿಶ್ವಾಸ ಇದೆಯಲ್ಲ

03:50 AM Feb 23, 2017 | |

ವಾಷಿಂಗ್ಟನ್‌/ನವದೆಹಲಿ: ನೋಟುಗಳ ಅಮಾನ್ಯದಿಂದಾಗಿ ಭಾರತದ ಆರ್ಥಿಕತೆಯಲ್ಲಿ ತಾತ್ಕಾಲಿಕವಾಗಿ ಅಲ್ಲೋಲ ಕಲ್ಲೋಲವಾಗಿದ್ದು, 2016-17ರ ವಿತ್ತೀಯ ಅವಧಿಯಲ್ಲಿ ಪ್ರಗತಿ ದರ ಶೇ.6.6ಕ್ಕೆ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಂದಾಜಿಸಿದೆ. ಆದರೆ, ಮುಂದಿನ ಕೆಲವು ವರ್ಷಗಳಲ್ಲಿ ಮತ್ತೆ ಭಾರತದ ಆರ್ಥಿಕತೆ ಜಿಗಿದು, ಶೇ.8ಕ್ಕಿಂತಲೂ ಹೆಚ್ಚಾಗಲಿದೆ ಎಂಬ ಭರವಸೆಯ ಮಾತುಗಳನ್ನೂ ಐಎಂಎಫ್ ಆಡಿದೆ.

Advertisement

ತನ್ನ ವಾರ್ಷಿಕ ವರದಿಯಲ್ಲಿ ಐಎಂಎಫ್ ಈ ವಿಚಾರ ತಿಳಿಸಿದ್ದು, ಅಪನಗದೀಕರಣದ ಸಂಕಷ್ಟ ಅಲ್ಪಾವಧಿಯದ್ದು ಎಂದು ಸ್ಪಷ್ಟಪಡಿಸಿದೆ. ನ.8ರ ಬಳಿಕ ನೋಟುಗಳ ಅಮಾನ್ಯದಿಂದಾಗಿ ಅನುಭೋಗ ಮತ್ತು ಉದ್ದಿಮೆ ವಹಿವಾಟು ಕುಸಿತಗೊಂಡ ಪರಿಣಾಮ ಪ್ರಗತಿ ದರಕ್ಕೆ ಬ್ರೇಕ್‌ ಬಿದ್ದಿದೆ. ಹೀಗಾಗಿ, 2016-17ರಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವು ಶೇ.6.6 ಆಗಲಿದ್ದು, 2017-18ರಲ್ಲಿ ಶೇ7.2ಕ್ಕೇರಲಿದೆ. ಉತ್ತಮ ಮಳೆ, ತೈಲ ಬೆಲೆಯಲ್ಲಿ ಕುಸಿತ ಮತ್ತಿತರ ಅಂಶಗಳು ದೇಶದ ಪ್ರಗತಿಗೆ ಬಲ ತುಂಬಲಿದೆ ಎಂದು ವರದಿ ತಿಳಿಸಿದೆ. 2015-16ರಲ್ಲಿ ಆರ್ಥಿಕ ಪ್ರಗತಿಯ ದರ ಶೇ.7.6ರಷ್ಟಿತ್ತು. 

ವರವಾಗಲಿದೆ ಜಿಎಸ್‌ಟಿ: ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅನುಷ್ಠಾನವು ಭಾರತದ ಮಧ್ಯಮಾವಯ ಜಿಡಿಪಿ ಪ್ರಗತಿಯನ್ನು ಶೇ.8ಕ್ಕೇ ರಿಸುವ ಸಾಧ್ಯತೆಯಿದೆ ಎಂದೂ ಐಎಂಎಫ್ ಹೇಳಿದೆ. ಜಿಎಸ್‌ಟಿ ಜಾರಿಯಾದರೆ, ದೇಶದಲ್ಲಿ ಏಕ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಸರಕು, ಸೇವೆಗಳ ಪೂರೈಕೆಯೂ ಪರಿಣಾಮಕಾರಿಯಾಗಲಿದೆ ಎಂದೂ ವರದಿ ತಿಳಿಸಿದೆ.

5 ಲಕ್ಷ ಠೇವಣಿಯಿಟ್ಟ ವೃದ್ಧರಿಗೆ ವಿನಾಯ್ತಿ
ನವದೆಹಲಿ: ನೋಟು ಅಮಾನ್ಯದ ಬಳಿಕ ಠೇವಣಿಯಿಟ್ಟವರ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಇದೀಗ ವೃದ್ಧರಿಗೆ ವಿನಾಯ್ತಿ ನೀಡಿದೆ. ನ.9ರಿಂದ ಡಿ.31ರ ಅವಧಿಯಲ್ಲಿ 5 ಲಕ್ಷ ರೂ.ವರೆಗೆ ಠೇವಣಿಯಿಟ್ಟ 70 ವರ್ಷ ದಾಟಿದವರ ಖಾತೆಗಳನ್ನು ಪರಿಶೀಲಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ನಿಮಗೆ 70 ವರ್ಷ ದಾಟಿದ್ದು, ನೀವು 5 ಲಕ್ಷದವರೆಗೆ ಠೇವಣಿಯಿಟ್ಟಿದ್ದರೆ, ನಾವು ಆ ಬಗ್ಗೆ ಹೆಚ್ಚಿನ ಪರಿಶೀಲನೆ ಕೈಗೊಳ್ಳುವುದಿಲ್ಲ. ಆದರೆ, 70 ವರ್ಷದೊಳಗಿವರು 2.5 ಲಕ್ಷ ರೂ.ಗಿಂತ ಹೆಚ್ಚು ಠೇವಣಿಯಿಟ್ಟಿದ್ದರೆ, ಕೂಡಲೇ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಠೇವಣಿಯ ಮೂಲವನ್ನು ವಿವರಿಸಬೇಕು ಎಂದು ಇಲಾಖೆ ಹೇಳಿದೆ.

850 ಷೋಕಾಸ್‌ ನೋಟಿಸ್‌ ಜಾರಿ
ಕರ್ನಾಟಕ ಮತ್ತು ಗೋವಾದಲ್ಲಿ ಟಿಡಿಎಸ್‌ ಮೊತ್ತವನ್ನು ಬೊಕ್ಕಸಕ್ಕೆ ಕಳುಹಿಸಲು ವಿಳಂಬ ಮಾಡಿರುವ 850ರಷ್ಟು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಇನ್ನೊಂದೆಡೆ, ನೋಟು ಅಮಾನ್ಯದ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದವರು ಏನಾದರೂ ಲೋಪ ಎಸಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಹೊಸ ಏಜೆನ್ಸಿಯೊಂದನ್ನು ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ರಾಧಾ ಮೋಹನ್‌ ಸಿಂಗ್‌ ಹೇಳಿದ್ದಾರೆ.

Advertisement

ಬೇನಾಮಿ ಆಸ್ತಿ: 230 ಕೇಸು ದಾಖಲು
ನವದೆಹಲಿ: ನೋಟುಗಳ ಅಮಾನ್ಯಗಳ ನೀತಿ ಜಾರಿಯಾದ ಬಳಿಕ ಬೇನಾಮಿ ವಹಿವಾಟು ಕಾಯ್ದೆಯನ್ವಯ ದೇಶಾದ್ಯಂತ ಸುಮಾರು 230 ಪ್ರಕರಣಗಳನ್ನು ದಾಖಲಿಸಿಕೊಂಡು, 55 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಪನಗದೀಕರಣ ಘೋಷಣೆಯ ನಂತರ, ಬೇನಾಮಿ ಆಸ್ತಿಯೇ ನನ್ನ ಮುಂದಿನ ಟಾರ್ಗೆಟ್‌ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.  ಫೆಬ್ರವರಿ ಮಧ್ಯದವರೆಗೆ ಒಟ್ಟು 235 ಬೇನಾಮಿ ಆಸ್ತಿ ಕೇಸುಗಳನ್ನು ದಾಖಲಿಸಿಕೊಂಡಿದ್ದೇವೆ. 200 ಕೋಟಿ ರೂ.ಗಳಷ್ಟು ಬೇನಾಮಿ ಆಸ್ತಿಯಿರುವ 140 ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದೇವೆ. 55 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಲಾಖೆ ಬುಧವಾರ ಮಾಹಿತಿ ನೀಡಿದೆ. ಬ್ಯಾಂಕ್‌ ಖಾತೆಗಳಲ್ಲಿನ ಠೇವಣಿ, ಕೃಷಿ ಮತ್ತು ಇತರೆ ಭೂಮಿ, ಫ್ಲ್ಯಾಟ್‌ಗಳು ಮತ್ತು ಆಭರಣಗಳು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಸೇರಿವೆ.

ನೋಟುಗಳ ಅಮಾನ್ಯದ ಬಳಿಕ ಮರುಪೂರೈಕೆ ಪ್ರಕ್ರಿಯೆಯು ವೇಗ ಪಡೆದುಕೊಂಡಿದೆ. ಹೀಗಾಗಿ, 4ನೇ ತ್ತೈಮಾಸಿಕದ ವೇಳೆ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಜತೆಗೆ, ಸದ್ಯಕ್ಕೆ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.
ಊರ್ಜಿತ್‌ ಪಟೇಲ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌.

Advertisement

Udayavani is now on Telegram. Click here to join our channel and stay updated with the latest news.

Next