Advertisement

ವಿಚಾರಧಾರೆ, ಭಾವುಕತೆಯ ಶ್ರೀ ಕೃಷ್ಣ ಪರಂಧಾಮ

05:28 PM May 16, 2019 | mahesh |

ಕೃಷ್ಣನಾಗಿ ಡಾ.ವಿನಾಯಕ ಭಟ್‌ ಗಾಳಿ ಮನೆಯವರು ಕೃಷ್ಣ ಆದರ್ಶ ಪುರುಷನಾಗಿ, ತಾಯಿಗೆ ಪ್ರೀತಿಯ ಮಗನಾಗಿ ,ಉತ್ತಮ ಸ್ನೇಹಿತನಾಗಿ, ಸಹೋದರನಾಗಿ, ಭಕ್ತರ ಭಕ್ತನಾಗಿ, ದೇವ ದೇವೋತ್ತಮನಾಗಿ ತನ್ಮೂಲಕ ಇಡೀ ಜೀವಮಾನದುದ್ದಕ್ಕೂ ತತ್ವಸಾರ ಬೋಧಕನಾಗಿ ಪರಿಪೂರ್ಣ ಅವತಾರದ ಸಾರ್ಥಕತೆಯನ್ನು ಮಾರ್ಮಿಕವಾಗಿ ಹೇಳಿದರು.ಇದು ತನ್ನ ಜೀವನಕ್ಕೆ ಬಂದೊದಗಿದ ವೃದ್ಧಾವಸ್ಥೆ ಎಂದು ಈ ಆಖ್ಯಾನಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದರು.

Advertisement

ಮೂಡಬಿದ್ರಿಯ ಸಮಾಜಮಂದಿರದಲ್ಲಿ ಯಕ್ಷೊಪಾಸನಮ್‌ ಮತ್ತು ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್‌ (ರಿ.) ಸದಸ್ಯರ ಒಗ್ಗೂಡುವಿಕೆಯಲ್ಲಿ ಮೇ 5ರಂದು “ಶ್ರೀ ಕೃಷ್ಣ ಪರಂಧಾಮ’ ಎಂಬ ತಾಳಮದ್ದಲೆ ಕೂಟ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತಲ್ಲದೆ ಬಹುಕಾಲ ನೆನಪಿನಲ್ಲಿ ಉಳಿಯುವ ಪ್ರಸಂಗ ಇದಾಯಿತು.

ಶ್ರೀ ಕೃಷ್ಣನಾಗಿ ಡಾ.ವಿನಾಯಕ ಭಟ್‌ ಗಾಳಿಮನೆಯವರು ಕೃಷ್ಣ ಆದರ್ಶ ಪುರುಷನಾಗಿ,ತಾಯಿಗೆ ಪ್ರೀತಿಯ ಮಗನಾಗಿ ,ಉತ್ತಮ ಸ್ನೇಹಿತನಾಗಿ, ಸಹೋದರನಾಗಿ, ಭಕ್ತರ ಭಕ್ತನಾಗಿ, ದೇವ ದೇವೋತ್ತಮನಾಗಿ ತನ್ಮೂಲಕ ಇಡೀ ತನ್ನ ಜೀವಮಾನದುದ್ದಕ್ಕೂ ತತ್ವಸಾರ ಬೋಧಕನಾಗಿ ಹೀಗೆ ಪರಿಪೂರ್ಣ ಅವತಾರದ ಸಾರ್ಥಕತೆಯನ್ನು ಅತ್ಯಂತ ಮಾರ್ಮಿಕವಾಗಿ,ಮನೋಜ್ಞವಾಗಿ ಅರ್ಥ ಹೇಳಿದರು.ಬೇಡನಾದ ಜರನು ತಾನು ಬಿಟ್ಟ ಬಾಣ ಶ್ರೀ ಕೃಷ್ಣನ ಕಾಲಿಗೆ ತಾಗಿ ರಕ್ತದ ಓಕುಳಿ ಹರಿಯುವಾಗ, ನೋವು ತಡೆಯಲಾರದೆ ಕೃಷನು ಅಮ್ಮನ ಆರ್ತನಾದ ಮಾಡಿದ ಸಂದರ್ಭ, ಇತ್ತ ಮಾತೆ ಹೃದಯವು ಸ್ಪಂದಿಸಿದಾಗ, ಯಶೋದೆಯು ಓಡೋಡಿ ಬಂದು ತನ್ನ ಮಗನ ಅವಸ್ಥೆ ನೋಡಿ ಕಣ್ಣೀರು ಮಿಡಿಯುವ ದೃಶ್ಯ,ನೋವನ್ನು ನುಂಗಿ ಕೃಷ್ಣನು ಅಮ್ಮನನ್ನು ಸಮಾಧಾನ ಪಡಿಸುವ ಮಾತು, ಇದು ತನ್ನ ಅವಸ್ಥೆಯಲ್ಲ,ವ್ಯವಸ್ಥೆಯ ಪರಿ. ತನಗೆ ಬಂದದ್ದು ವೃದ್ಧಾವಸ್ಥೆಯಲ್ಲ ಇದು ತನ್ನ ಜೀವನಕ್ಕೆ ಬಂದೊದಗಿದ ವೃದ್ಧಾವಸ್ಥೆ ಎಂದು ಭಾವುಕನಾಗಿ ಹೇಳಿ ಈ ಆಖ್ಯಾನಕ್ಕೆ ಹೊಸ ವ್ಯಾಖ್ಯಾನವನ್ನೇ ವಿನಾಯಕ ಭಟ್ಟರು ನೀಡಿದರು. ಯಶೋದೆಯಾಗಿ ಸುಜಾತಾ ತಂತ್ರಿ ಉತ್ತಮವಾಗಿ ಪಾತ್ರ ನಿರ್ವಹಿಸಿದರು. ಬೇಡ ಜರನಾಗಿ ಮಲ್ಲಿಕಾ ಹೇರಳೆ ಸಂದಭೋìಚಿತವಾಗಿ ಮಾತನಾಡಿದರು. ಶ್ರೀ ಕೃಷ್ಣ-ದೂರ್ವಾಸ ಮುನಿ ಸಂವಾದವೂ ಭಕ್ತಿ,ಆತಿಥ್ಯ, ವಿಚಾರಗಳ ಸುಧೆಯಾಗಿ ಹರಿದು ಬಂತು. ದೂರ್ವಾಸನಾಗಿ ಬಾಲಕೃಷ್ಣ ಭಟ್‌ ಪುತ್ತಿಗೆ ತಮ್ಮ ಪಾಂಡಿತ್ಯದ ದರ್ಶನಗೈದರು. ಬಲರಾಮನಾಗಿ ಹಿರಿಯ ಅರ್ಥಧಾರಿ ದಾಮೋದರ ಸಫ‌ಲಿಗ ಅವರು ತಮ್ಮ ಗಾಂಭೀರ್ಯದ ಮಾತಿನಿಂದ ಸೈ ಎನಿಸಿಕೊಂಡರು.

ದೂರ್ವಾಸನನ್ನು ಕೆಣಕುವ ಯಾದವರ ಪಾತ್ರದಲ್ಲಿ ಯಕ್ಷಗಾನ ವಿಮರ್ಶಕ ಎಂ.ಶಾಂತಾರಾಮ ಕುಡ್ವ ಅವರು ಮತ್ತು ರಜನೀಶ್‌ ಹೊಳ್ಳ ಯಾವುದೇ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರಿಸಾಟಿ ಎಂಬಂತೆ ದೂರ್ವಾಸರನ್ನು ಹಾಸ್ಯದ ಮಾತುಗಳಲ್ಲಿ ಕಟ್ಟಿ ಹಾಕಿ ನಿಂದಿಸಿ,ಅಪಹಾಸ್ಯ ಮಾಡಿ ಕೋಪ ಬರಿಸಿ ಶಾಪಕ್ಕೆ ತುತ್ತಾಗುವವಲ್ಲಿಯವರೆಗೆ ಜನರನ್ನು ನಗೆಗೇಡಿನಲ್ಲಿ ತೇಲಿಸಿದರು.

ನಾರಾದನಾಗಿ ಕುಶಲಾ ಬದಿಯಾರ್‌ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು.ಅರ್ಜುನನ ಅರ್ಥದಾರಿ ಪ್ರಶಾಂತ್‌ ಕುಮಾರ್‌ರವರು ಕೃಷ್ಣನ ನಿರ್ಯಾಣ ಕಾಲದ ಸಂದರ್ಭದ ಕೃಷ್ಣ-ಅರ್ಜುನ ಸಂವಾದ ಭಕ್ತಿ ಪರಾಕಾಷ್ಠೆಯ ಹಂತ ತಲುಪಿ ನೈಜ ಭಾವುಕತೆಯ ಹೊಳೆಯನ್ನೇ ಹರಿಸಿ ಅರ್ಜುನನ ಪರಕಾಯ ಪ್ರವೇಶವೆಂಬಂತೆ ನರ ನಾರಾಯಣರ ಸಂವಾದದಲ್ಲಿ ಪ್ರಶಾಂತ್‌ ಕುಮಾರರವರ ಕಣ್ಣುಗಳು ತೇವಗೊಂಡು ಪ್ರಸಂಗದ ಕೊನೆಯ ಘಟ್ಟದಲ್ಲಿ ಕೃಷ್ಣನಿಗೆ ತಂಬಿಗೆ ನೀರನ್ನು ನೀಡಿ ತನ್ಮೂಲಕ ದೇವರನ್ನು ಬೀಳ್ಕೊಟ್ಟ ದ್ರಶ್ಯ ದ್ವಾಪರಾಯುಗದ ಅಂತ್ಯದ ದೃಶ್ಯ ಕಣ್ಣೆದುರಿಗೆ ಕಟ್ಟಿ ನಿಂತು ನೆರೆದ ಪ್ರೇಕ್ಷಕರ ಕಣ್ಣನ್ನೂ ತೋಯಿಸಿದವು.

Advertisement

ಭಾಗವತರಾಗಿ ಭಟ್ಟಮೂಲೆ ಲಕ್ಷ್ಮೀನಾರಾಯಣ ಭಟ್ಟ,ಮಾಧವ ಆಚಾರ್ಯ ಸಂಪಿಗೆ,ಡಾ| ಸುಬ್ರಹ್ಮಣ್ಯ ಪದ್ಯಾಣ ಸುಶ್ರಾವ್ಯವಾಗಿ ಭಾಗವತಿಕೆ ನಡೆಸಿ ಮೆಚ್ಚುಗೆಗೆ ಪಾತ್ರರಾದರು.ಚೆಂಡೆ ಮದ್ದಳೆಯಲ್ಲಿ ವೇದವ್ಯಾಸ ಕುತ್ತೆತ್ತೂರು,ರಾಮ ಹೊಳ್ಳ,ಪುರುಷೋತ್ತಮ ತುಳುಪುಳೆ ,ಚಕ್ರತಾಳದಲ್ಲಿ ಶ್ರವಣ ಕುರ್ಮಾ ಸಹಕರಿಸಿದರು.

ಎಂ.ರಾಘವೇಂದ್ರ ಭಂಡಾರ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next