ಬೆಂಗಳೂರು: ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಸಾಧಕರು ಇನ್ನೂ, ಎಲೆಮರೆ ಕಾಯಂತಿದ್ದು ಅವರನ್ನು ಗುರುತಿಸಿ ಗೌರವಿಸುವ ಕೆಲಸ ಮತ್ತಷ್ಟು ನಡೆಯಬೇಕಾಗಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಸಂಗೀತ ಗಂಗಾ ಸಂಸ್ಥೆ, ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಗಾಯಕ ಜಿ.ವಿ.ಅತ್ರಿ ಸವಿನೆನಪು, ಸಂಗೀತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಜವಾಬ್ದಾರಿ ಕೂಡ ಹೆಚ್ಚುತ್ತದೆ ಎಂದರು.
ಗಾಯಕ ಜಿ.ವಿ.ಅತ್ರಿ ಅವರ ಸಾಧನೆಯ ಗುಣಗಾನ ಮಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಸಾಹಿತಿ ಡಾ.ಎಚ್.ಎಸ್ ವೆಂಕಟೇಶ್‌ಮೂರ್ತಿ ಮಾತನಾಡಿ, ಯಾವುದೇ ಕಲಾವಿದನಾಗಿರಲಿ ಕಲೆಯ ಬಗ್ಗೆ ಹೆಚ್ಚಿನ ಶ್ರದ್ಧೆ, ಭಕ್ತಿ ಹೊಂದಿರಬೇಕು. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ್ದ ಜಿ.ವಿ.ಅತ್ರಿ ತಮ್ಮ ಮಧುರ ಕಂಠದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಮನಸ್ಸಿಗೆ ಇಂಪು ಮೂಡಿಸಿದ್ದರು. ಇವರ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ರಂಗಕರ್ಮಿ ಕೆ.ವಿ.ನಾಗರಾಜ ಮೂರ್ತಿ ಮಾತನಾಡಿದರು. ನಿವೃತ್ತ ಐಎಸ್‌ಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮಹೇಂದ್ರ ಮುನೋತ್ ಜೈನ್ ಇದ್ದರು. ಇದೇ ವೇಳೆ ವಿವಿಧ ಕಲಾವಿದರು ಜಿ.ವಿ.ಅತ್ರಿ ಅವರು ಸಂಗೀತ ಸಂಯೋಜನೆ ಮಾಡಿ, ಹಾಡಿದ ಗೀತೆಗಳನ್ನು ಹಾಡಿದರು.