ಕಲಬುರಗಿ: ಹೊಸ ವರ್ಷದಲ್ಲಿ ಕೋವಿಡ್ ಸೋಂಕಿಗೆ ಮದ್ದು ಸಿಗುವ ನಿರೀಕ್ಷೆ ಹೊಂದಲಾಗಿದೆ. ಇದೇ ಭರವಸೆಯೊಂದಿಗೆ ಮಹಾಮಾರಿ ರೋಗ ತೆಡೆಯಲು ಜೀವದ ಹಂಗು ತೊರೆದು ಹೋರಾಡಿದ ವಾರಿಯರ್ಸ್‌ಗೆ ಮೊದಲು ಲಸಿಕೆ ವಿತರಣೆಗೆ ಸರ್ಕಾರ ನಿರ್ಧರಿಸಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಆದ್ಯತಾವಾರು ಲಸಿಕೆ ಪಡೆಯುವವರ ಪಟ್ಟಿ ಸಿದ್ಧಪಡಿಸಿದೆ. ಜತೆಗೆ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ.
ಕೋವಿಡ್ ಲಸಿಕೆ ಸಂಗ್ರಹ, ಹಂಚಿಕೆ ಸಂಬಂಧ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಸರ್ಕಾರದ ಸೂಚನಾನುಸಾರ ಲಸಿಕೆಸಿದ್ಧವಾಗಿ ಜಿಲ್ಲೆಗೆ ಆಗಮಿಸಿದ ಪ್ರಥಮ ಹಂತದಲ್ಲಿ ಕೋವಿಡ್ ವಾರಿಯರ್ಸ್‌ಗೆ ನೀಡಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ.
25 ಸಾವಿರ ವಾರಿಯರ್ಸ್: ದೇಶದಲ್ಲೇ ಕೋವಿಡ್ ಮಹಾಮಾರಿಗೆ ಮೊದಲ ಬಲಿಯಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ. ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದಸೋಂಕಿನ ವಿರುದ್ಧ ಎದೆಗುಂದದೆ ಹೋರಾಟನಡೆಸಿದವರು ವಾರಿಯರ್ಸ್. ಇದರಲ್ಲಿ ಕೊರೊನಾಪೀಡಿತರ ಆರೈಕೆಯಲ್ಲಿ ತೊಡಗಿರುವ ಆರೋಗ್ಯಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ಸಿಗಲಿದೆ. ವೈದ್ಯರು, ನರ್ಸ್‌ಗಳು, ಆರೋಗ್ಯ ಸಹಾಯಕ, ಸಹಾಯಕಿಯರು, ಪ್ರಯೋಗಾಲಯ ತಜ್ಞರು, ಆಸ್ಪತ್ರೆಗಳಲ್ಲಿ ಕೋವಿಡ್ ಕಾರ್ಯಕ್ಕೆ ನಿಯೋಜನೆಗೊಂಡ ಸ್ವತ್ಛತಾ ಸಿಬ್ಬಂದಿ, ಆಂಬ್ಯುಲೆನ್ಸ್‌ಗಳ ಚಾಲಕರ ಪಟ್ಟಿಯಲ್ಲಿ ಸೇರಿದ್ದಾರೆ. ಸರ್ಕಾರಿ ಜತೆಗೆ ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಯನ್ನು ಸೇರಿಸಲಾಗುತ್ತಿದೆ. ರೀತಿ ಆಶಾ ಕಾರ್ಯಕರ್ತೆಯರು, ಅಂಗನವಾಡಿಕಾಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್‌ಸಿಬ್ಬಂದಿ ಹಾಗೂ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಹೀಗೆ ಯಾರು ಕೊರೊನಾ ನಿಯಂತ್ರಣದಲ್ಲಿ ತೊಡಗಿದ್ದಾರೋ ಅವರ ಪಟ್ಟಿ ತಯಾರಾಗುತ್ತಿದೆ.
ಪ್ರಥಮ ಹಂತದಲ್ಲಿ ಯಾರಿಗೆ ಲಸಿಕೆ ನೀಡಬೇಕು ಎಂದು ಗುರುತಿಸುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಪ್ರಾಥಮಿಕ ಆರೋಗ್ಯ, ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ ಸೇರಿ ಪಟ್ಟಿ ತಯಾರಾಗುತ್ತಿದೆ. ಪ್ರತಿ ಕೋವಿಡ್ ಲಸಿಕಾ ಫಲಾನುಭವಿಗಳೊಂದಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ಮಾಡಲಾಗುತ್ತಿದೆ. ಜಿಲ್ಲಾದ್ಯಂತ 22ರಿಂದ 25 ಸಾವಿರ ಮುಂಚೂಣಿ ಕೋವಿಡ್ ವಾರಿಯರ್ಸ್‌ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜಶೇಖರ ಮಾಲಿ “ಉದಯವಾಣಿ’ಗೆ ತಿಳಿಸಿದ್ದಾರೆ.
1.20 ಕೋಟಿ ಡೋಸ್ ಸಂಗ್ರಹ ಸಾಮರ್ಥ್ಯ : ಕೋವಿಡ್ ಲಸಿಕೆ ಸಂಗ್ರಹಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಈಗಾಗಲೇ ಕೈಗೊಂಡಿದೆ. ಡಿಎಚ್‌ಒ ಕಚೇರಿ ಆವರಣದಲ್ಲೇ ಲಸಿಕೆ ಸಂಗ್ರಹ ವ್ಯವಸ್ಥೆ ಇದೆ. ಸುಮಾರು 1.20 ಕೋಟಿ ಡೋಸ್‌ಗಳನ್ನು ಸಂಗ್ರಹ ಸಾಮರ್ಥ್ಯದ ಕೋಲ್ಡ್ ಸೋrರೇಜ್‌ಗಳು ಲಭ್ಯ ಇವೆ. ಅಲ್ಲದೇ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ರೆಫ್ರಿಜರೇಟ್ ಗಳು ಲಭ್ಯವಿವೆ. ಪ್ರತಿ ಪ್ರಾಥಮಿಕ ಹಾಗೂ ಸಮುದಾಯ ಕೇಂದ್ರಗಳಲ್ಲಿ ಸುಮಾರು 5ರಿಂದ 6 ಸಾವಿರ ಡೋಸ್ ಲಸಿಕೆ ಸಂಗ್ರಹ ಸಾಮರ್ಥ್ಯ ಹೊಂದಲಾಗಿದೆ ಎಂಬುವುದು ಡಾ| ರಾಜಶೇಖರ ಮಾಲಿ ತಿಳಿಸಿದ್ದಾರೆ.
ಮೂರು ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಇದರ ನಡುವೆಯೂ ಜಿಲ್ಲಾದ್ಯಂತ ಶನಿವಾರದ ವರೆಗೆ ಬರೋಬ್ಬರಿ 3,02,779 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. 20,433 ಜನರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. 2,79,860 ಮಂದಿಗೆ ಸೋಂಕಿಲ್ಲ ಎಂದು ದೃಢಪಟ್ಟಿದೆ. ಇನ್ನೂ, 2,486 ಜನ ವರದಿಗಳ ಬಾಕಿ ಇವೆ. ಇಲ್ಲಿಯವರೆಗೆ 319 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 253 ಸಕ್ರಿಯ ರೋಗ ಪೀಡಿತರಿದ್ದು, ಬಹುಪಾಲು ಸೋಂಕಿತರು (209) ತಮ್ಮ ಮನೆಗಳಲ್ಲೇ ಐಸೋಲೇಷನ್ ಗೆ ಒಳಗಾಗಿದ್ದಾರೆ. ಕೇವಲ 37 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಲಸಿಕೆ ಸಂಗ್ರಹ ಮತ್ತುವಿತರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ 22ರಿಂದ 25 ಸಾವಿರ ಮುಂಚೂಣಿ ಕೋವಿಡ್ ವಾರಿಯರ್ಸ್‌ಗಳನ್ನು ಗುರುತಿಸಲಾಗಿದೆ. ನಕಲಿ ಫಲಾನುಭವಿಗಳ ತಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡಲಾಗುತ್ತಿದೆ.
–ಡಾ| ರಾಜಶೇಖರ ಮಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
-ರಂಗಪ್ಪ ಗಧಾರ