Advertisement

ಆದರ್ಶ ಗ್ರಾಮ ಯೋಜನೆ ಹಣ ಬಳಕೆಗೆ ಗ್ರಾಮಸ್ಥರ ಒತ್ತಾಯ

09:20 PM Jul 05, 2019 | Lakshmi GovindaRaj |

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮವು ಪ್ರಧಾನ ಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದೆ. ಆದರೆ, ಇದಾಗಿ ವರ್ಷಗಳೇ ಉರುಳಿದರೂ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ಹಣ ಎಲ್ಲಿದೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಾಗಿ ಇದರ ಬಳಕೆಗೆ ಶಾಸಕರು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಹೊನ್ನೂರು ಗ್ರಾಮಸ್ಥರು ಒತ್ತಾಯಿಸಿದರು.

Advertisement

ಹೊನ್ನೂರು ಗ್ರಾಪಂ ಆವರಣದಲ್ಲಿ ಶುಕ್ರವಾರ ಶಾಸಕ ಎನ್‌. ಮಹೇಶ್‌ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಸಿದರು. ಇದಕ್ಕೆ ಶಾಸಕರು, ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಕೇಳಿದರು.

ಯೋಜನೆಗೆ 44 ಲಕ್ಷ ರೂ. ನಿಗದಿ: ಇಒ ಬಿ.ಎಸ್‌. ರಾಜು ಮಾತನಾಡಿ, ಈ ಯೋಜನೆಯಲ್ಲಿ ಒಟ್ಟು 44 ಲಕ್ಷ ರೂ.ಗಳನ್ನು ನಿಗದಿಗೊಳಿಸಲಾಗಿದೆ. ಇದರಲ್ಲಿ 20 ಲಕ್ಷ ರೂ. ರಸ್ತೆ, ಚರಂಡಿ ಅಭಿವೃದ್ಧಿಗೆ, 4 ಲಕ್ಷ ರೂ. ಕುಡಿಯುವ ನೀರಿಗೆ, 10.20 ಲಕ್ಷ ರೂ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇನ್ನುಳಿದ ಹಣವನ್ನು ಸೋಲಾರ್‌ ವಿದ್ಯುತ್‌, ವಿದ್ಯುತ್‌ ಕಂಬ,

ದೀಪಗಳ ದುರಸ್ತಿ ಹಾಗೂ 20 ಫ‌ಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲು ಬಳಸಲಾಗುವುದು. ರಸ್ತೆ, ಚರಂಡಿ ಹೊರತುಪಡಿಸಿ ಇತರೆ ಹಣ ಇನ್ನೂ ಬಾರದ ಕಾರಣ ಕಾಮಗಾರಿ ವಿಳಂಬವಾಗಿದ್ದು, ಆದಷ್ಟು ಬೇಗ ಇದನ್ನು ಪೂರ್ಣಗೊಳಿಸುವ ಭರವಸೆ ನೀಡಿದರು.

ಮಳೆ ನೀರಿನ ಕಾಲುವೆ ದುರಸ್ತಿಪಡಿಸಿ: ಗ್ರಾಮದಲ್ಲಿ ಮಳೆ ನೀರಿನ ಕಾಲುವೆಗಳು ಮುಚ್ಚಿ ಹೋಗಿವೆ. ಇದರಿಂದ ಇಲ್ಲಿನ ಕೆರೆಗಳಿಗೆ ನೀರು ತುಂಬುತ್ತಿತ್ತು. ಆದರೆ, ಇದೆಲ್ಲವನ್ನೂ ಕಬಿನಿ ಕಾಲುವೆಗೆ ಸಂಪರ್ಕ ಕೊಟ್ಟಿರುವುದರಿಂದ ಮಳೆಗಾಲದಲ್ಲಿ ನೀರು ಹರಿದು ಕಾವೇರಿ ನದಿಯಿಂದ ತಮಿಳುನಾಡಿಗೆ ಸೇರುತ್ತಿದೆ.

Advertisement

ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಇದರ ದುರಸ್ತಿಗೆ ಕ್ರಮ ವಹಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ದೂರಿದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಕ್ಷಣ ಇದಕ್ಕೆ ಕ್ರಮ ವಹಿಸಿ, ಮಳೆ ನೀರು ಪೋಲಾಗದೆ ಕೆರೆಯಲ್ಲೇ ನಿಲ್ಲುವಂತೆ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.

ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ: ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸಗಳನ್ನು ಮಾಡದಿದ್ದಲ್ಲಿ, ಸೌಲಭ್ಯ ಒದಗಿಸಲು ನಿರಾಕರಿಸಿದ್ದಲ್ಲಿ ಅವರ ವಿರುದ್ಧವೂ ದೂರು ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕರಿಗೆ ಇಂತಹ ಸಭೆಗಳಲ್ಲಿ ಅರಿವು ಮೂಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೊನ್ನೂರು ಮಹಾದೇವಸ್ವಾಮಿ ಸಲಹೆ ನೀಡಿದರು.

ಇಂತಹ ಸಭೆಗಳಲ್ಲಿ ಪ್ರತಿ ಇಲಾಖೆ ಅಧಿಕಾರಿಗಳ ಹಾಜರಾತಿ, ಜನಪ್ರತಿನಿಧಿಗಳ ಹಾಜರಾತಿ ಪಡೆದುಕೊಳ್ಳಬೇಕು. ಆ ಮೂಲಕ ಸಾರ್ವಜನಿಕ ಕೆಲಸಗಳನ್ನು ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಸ್ಪಂಧಿಸಿದ ಶಾಸಕರು ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ತಾಪಂ ಅಧ್ಯಕ್ಷ ನಿರಂಜನ್‌, ಗ್ರಾಪಂ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಆರ್‌. ಪುಟ್ಟಬಸವಯ್ಯ, ಗೀತಾ, ಶಿಲ್ಪಾ, ರಾಘವೇಂದ್ರ ಪ್ರಸಾದ್‌, ಮಹಾದೇವಸ್ವಾಮಿ, ಸಿದ್ದಶೆಟ್ಟಿ, ಶೋಭಾ, ಸರೋಜಮ್ಮ, ಗಾಯತ್ರಿ, ತಹಶೀಲ್ದಾರ್‌ ವರ್ಷಾ, ಇಒ ಬಿ.ಎಸ್‌. ರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next