Advertisement

ಹೋಂ ಗಾರ್ಡನ್ : ಮನೆಗಳಾಗಲಿ ಉಪವನ 

04:26 PM Jul 04, 2021 | Team Udayavani |

ಪರಿವರ್ತನೆ ಜಗದ ನಿಯಮ. ಪರಿವರ್ತನೆಯಾಗುವುದು ಸಹಜ, ಆದರೇ, ಎಂದಿಗೂ ಒಳ್ಳೆಯ ಪರಿವರ್ತನೆ ಕಾಣಬೇಕು.  ನಿರಂತರವಾಗಿ ಬದಲಾಗುತ್ತಿರುವ ಜಗತ್ತು. ಜಾಗತೀಕರಣ, ನಗರೀಕರಣಗಳಿಂದ ನಾವು ವಾಸಿಸುವ ಪರಿಸರವು ಭಿನ್ನವಾಗುತ್ತಾ ಬಂದಿದೆ. ನಮ್ಮಲ್ಲಿ ಶೇ. 60 ರಷ್ಟು ಮಂದಿ ಅಪಾರ್ಟ್ಮೆಂಟ್ ಗಳಲ್ಲಿ ವಾಸವಾಗಿದ್ದಾರೆ.

Advertisement

ಸಸ್ಯಗಳನ್ನು ಬೆಳೆಸಲಾಗಲಿ, ಕೃಷಿ ಮಾಡಲಾಗಲಿ, ತೋಟಗಳನ್ನು, ಭೂಮಿಯನ್ನು  ಹೊಂದಿಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಎಲ್ಲವೂ ಮಾಲಿನ್ಯದಿಂದ ಕಲುಷಿತವಾಗಿದೆ. ಇಂತಹ ಸಂದರ್ಭದಲ್ಲಿ ಪರಿಸರದಲ್ಲಿ ಸಮತೋಲನವನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಟೆರೇಸ್ ಗಾರ್ಡನ್, ಹೋಂ ಗಾರ್ಡನ್ ಒಂದು ಉತ್ತಮ  ಆಲೋಚನೆ.

ಮನೆಯ ಮೇಲ್ಛಾವಣಿಯಲ್ಲಿ, ಬಾಲ್ಕನಿಯಲ್ಲಿ, ಕಿಟಕಿಯಂತಹ ಪುಟ್ಟ ಸ್ಥಳದಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳೊಂದಿಗೆ ಅಲಂಕಾರಿಕ ಸಸ್ಯಗಳನ್ನು ಬೆಳೆಸಬಹುದಾಗಿದೆ.

ಇತ್ತೀಚಿಗೆ ಈ ಪ್ರವೃತ್ತಿ ಬಹಳ ಚಾಲ್ತಿಯಲ್ಲಿರುವುದು ಸಂತೋಷ ಪಡಬೇಕಾದ ವಿಚಾರ. ಮನೆಯಲ್ಲಿಯೇ ಇರುವ, ನಿರುಪಯುಕ್ತವೆಂದೆನಿಸುವ ವಸ್ತುಗಳನ್ನೇ ಬಳಸಿ, ಸಣ್ಣ ಕೈ ತೋಟಗಳನ್ನು ನಿರ್ಮಿಸಬಹುದು. ಬೆಂಗಳೂರಿನಂತಹ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಇದರ ಅವಶ್ಯಕತೆ ಹೆಚ್ಚಿದೆ.

ಇದನ್ನೂ ಓದಿ : ಪಕ್ಷದ ಒಳಗೂ ಟೀಕೆ ಮಾಡುವ ಬೆಳವಣಿಗೆ ಈಗ ಬಿಜೆಪಿಯಲ್ಲೂ ಬಂದಿದೆ: ಈಶ್ವರಪ್ಪ ಬೇಸರ

Advertisement

ತೆಂಗಿನಕಾಯಿ ಚಿಪ್ಪು, ಹಳೆಯ ಪ್ಲಾಸ್ಟಿಕ್ ಬಾಟಲಿಗಳು, ಅಲ್ಯೂಮಿನಿಯಂ ಟಿನ್ ಕ್ಯಾನ್ ಗಳು, ಹಳೆಯ ಡಬ್ಬಿಗಳು, ಮುರಿದ ಪ್ಲಾಸ್ಟಿಕ್ ಬಿಂದಿಗೆ, ಟಬ್ಬುಗಳು, ಉಪಯೋಗಿಸಿದ ಅಡಿಕೆ ತಟ್ಟೆ, ಪ್ಲಾಸ್ಟಿಕ್ ಲೋಟಗಳು ಹೀಗೆ ಕಣ್ಣಿಗೆ ಕಾಣುವ ವಸ್ತುಗಳನ್ನು ಬಳಸಿ ಹೋಂ ಗಾರ್ಡನಿಂಗ್ ಮಾಡಿ ಮನೆಯನ್ನು ಚಂದಗೊಳಿಸಬಹುದು ಮತ್ತು ಪ್ಲಾಸ್ಟಿಕ್ ಮರುಬಳಕೆಗೆ ಇದೊಂದು ಉತ್ತಮ ವಿಧಾನ.

ಹೋಂ ಗಾರ್ಡನ್ ನಲ್ಲಿ ಪ್ರಮುಖವಾಗಿ ಮೂರು ವಿಧಗಳನ್ನು ಕಾಣಬಹುದು. ಒಂದು- ಚಾವಣಿಯ ಮೇಲ್ಭಾಗಕ್ಕೆ ಹುಲ್ಲಿನ ಅಥವಾ ಮಣ್ಣಿನ ಹೊದಿಕೆಯನ್ನು ಹೋದಿಸಿ ಅಲ್ಲಿ ಗಿಡಗಳನ್ನು ಬೆಳೆಸುವುದು. ಎರಡನೆಯದು ಮನೆಯ ಮುಂಭಾಗದಲ್ಲಿ ಬಾಲ್ಕನಿಯಲ್ಲಿರುವ ಗೂಟಗಳಿಗೆ ಮಡಿಕೆ, ಪಾಟ್, ಟಿನ್ ಕ್ಯಾನ್ಗಳಲ್ಲಿ ಸಸ್ಯಗಳನ್ನು ನೆಟ್ಟು ನೇತುಹಾಕಿ ಸಿಂಗರಿಸುವುದು. ಮೂರು- ಮನೆಯ ಒಳಗೆ ಸೂರ್ಯನ ಬೀಳುವ ಜಾಗದಲ್ಲಿ, ಗೋಡೆಗಳ ಮೇಲೆ ವರ್ಟಿಕಲ್ ಗಾರ್ಡನ್ ಮಾಡುವುದು. ಈ ಮೂರರಲ್ಲಿ ಯಾವುದರಲ್ಲಿ ಕೊಂಚ ಆಸಕ್ತಿ  ಇದ್ದರೂ ಸುಲಭವಾಗಿ ಮಾಡಬಹುದು.

ಈ ಸಣ್ಣ ಉದ್ಯಾನದಲ್ಲಿ ಮನೆಗೆ ಅಗತ್ಯವಿರುವ ಹೂವಿನ ಗಿಡಗಳನ್ನು, ತರಕಾರಿಗಳಾದ ಹಸಿಮೆಣಸಿನಕಾಯಿ, ಟೊಮೇಟೊ, ಹುರಳಿಕಾಯಿ, ಬದನೆ ಬೆಳೆಯುವುದಲ್ಲದೆ ಎಲ್ಲಾ ತರಹದ ಸೊಪ್ಪುಗಳನ್ನು ಸ್ವತಃ ನಾವೇ ಬೆಳೆದು ಉಪಯೋಗಿಸಬಹುದಾಗಿದೆ. ಹೋಂ ಗಾರ್ಡನ್ ನಿಂದಾಗಿ ಮನೆಯ ಒಳಗಿನ ತಾಪಮಾನ  ಗಣನೀಯವಾಗಿ ಕಡಿಮೆಯಾಗುವುದರೊಂದಿಗೆ ಶುದ್ಧಗಾಳಿ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತದೆ.

ಮನಸ್ಸಿಗೆ ಉಲ್ಲಾಸ ನೀಡುವ ಹೂಗಿಡಗಳು, ಮನಿ ಪ್ಲಾಂಟ್ ನಂತಹ ಪುಟ್ಟ ಗಿಡಗಳು ಹೀಗೆ ಹಲವಾರು ಜಾತಿಯ ಸಸ್ಯಗಳನ್ನು ಶ್ರಮವಿಲ್ಲದೆ ಮನೆಯ ಅಂಗಳದಲ್ಲಿ ಬೆಳೆಯಬಹುದಾಗಿದೆ. ಲಭ್ಯವಿರುವ ತೆರೆದ ಸ್ಥಳಗಳನ್ನು ಹೀಗೆ ಸದುಪಯೋಗ ಪಡಿಸಿಕೊಂಡು ಪರಿಸರ ಅಸಮತೋಲನವನ್ನು ಕಡಿಮೆ ಮಾಡಬಹುದು.

ಮನೆಯ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ,  ಇಂಧನ ಸಂರಕ್ಷಣೆ, ನೀರಿನ ಸಂರಕ್ಷಣೆ, ಮನೆಯ ಸೌಂದರ್ಯ ವರ್ಧನೆ, ನಿವಾಸಿಗಳ ಆರೋಗ್ಯ ಪ್ರಯೋಜನಗಳು ಮತ್ತು ಪಕ್ಷಿಗಳು ಮತ್ತು ಕೀಟಗಳನ್ನು ಆಕರ್ಷಿಸುವಂತಹ ಅನೇಕ ಪ್ರಯೋಜನಗಳಿವೆ. ನಾವೇ ಬೆಳೆಯುವ ತಾಜಾ ಮತ್ತು ಆರೋಗ್ಯಕರ ತರಕಾರಿಗಳು, ನಾವು ಅದಕ್ಕಾಗಿ ಮಾಡುವ ಖರ್ಚುನ್ನು ಕಡಿಮೆ ಮಾಡುತ್ತವೆ. ಲಭ್ಯವಿರುವ ಕಡಿಮೆ ಸ್ಥಳದಲ್ಲೇ ಈ ತರಹದ ಉಪಯುಕ್ತ ಕೆಲಸ ಮಾಡುವುದರಿಂದ, ಮನಸ್ಸಿಗೆ ಮುದ, ಮನೆಯಲ್ಲಿ ನೆಮ್ಮದಿ, ಮನೆಯ ನಿವಾಸಿಗಳ ಆರೋಗ್ಯ ವೃದ್ಧಿಯಾಗಲಿದೆ. ಇನ್ನು ತಡಮಾಡದೆ ಮನೆಯಿಂದಲೇ ಪರಿಸರ ಸಂರಕ್ಷಣೆ ಪ್ರಾರಂಭಿಸೊಣ.

ಶ್ರೀರಕ್ಷಾ ಶಂಕರ್,

ಎಸ್. ಡಿ. ಎಂ ಕಾಲೇಜು, ಉಜಿರೆ.

ಇದನ್ನೂ ಓದಿ : ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್‍ಗಳಲ್ಲಿ ಬಿಜೆಪಿ ಚಾರಿತ್ರಿಕ ಗೆಲುವು: ನಳಿನ್‍ ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next