Advertisement

‘ವೈಚಾರಿಕ ಬೆಳವಣಿಗೆಗೆ ಉತ್ತಮ ಸಾಹಿತ್ಯ ಕೃತಿ ಅಗತ್ಯ’

10:33 AM May 10, 2019 | Suhan S |

ಬದಿಯಡ್ಕ, ಮೇ 9: ವ್ಯಕ್ತಿತ್ವ ವಿಕಸನದೊಂದಿಗೆ ಸಾಮಾಜಿಕ, ಧಾರ್ಮಿಕ, ವೈಚಾರಿಕ ಬೆಳವಣಿಗೆಗಳಿಗೆ ಉತ್ತಮ ಸಾಹಿತ್ಯ ಕೃತಿಗಳು ಬೆಂಬಲ ನೀಡುತ್ತದೆ. ನಶಿಸುತ್ತಿರುವ ಪರಂಪರೆ, ನಂಬಿಕೆಗಳನ್ನು ಸುದೃಢಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳು ಮೂಡಿಬರಬೇಕು. ಭಕ್ತಿಯ ಶಕ್ತಿಯನ್ನು ಪ್ರಚುರಪಡಿಸುವ ಕೆಲಸ ಸಾಹಿತ್ಯ ಕೃತಿಗಳಿಂದ ಸಾಧ್ಯ ಎಂದು ಶ್ರೀಮದ್‌ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳು ತಿಳಿಸಿದರು.

Advertisement

ಎಡನೀರು ಶ್ರೀ ಮಠದಲ್ಲಿ 2018ರಲ್ಲಿ ನಡೆದ ನಡೆದ ಶ್ರೀಗಳ 58ನೇ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಏರ್ಪಡಿಸಲಾಗಿದ್ದ ಕವಿಗೋಷ್ಠಿಯ ವಾಚಿಸಲ್ಪಟ್ಟ ಕವನಗಳನ್ನು ಒಗ್ಗೂಡಿಸಿ ಪ್ರಕಟಿಸಲಾದ ಸ್ಮೃತಿ ಸಂಪದದ ಅನುಬಂಧ ರೂಪದಲ್ಲಿ ಹೊರತರಲಾದ ಕಾವ್ಯ ಸೌರಭ ಕವನ ಸಂಗ್ರಹ ಹೊತ್ತಗೆಯನ್ನು ಶ್ರೀ ಮಠದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಶ್ರೀಗಳು ಅನುಗ್ರಹ ಆಶೀರ್ವಚನ ನೀಡಿದರು. ಚಾತುರ್ಮಾಸ್ಯ ವ್ರತಾನುಷ್ಠಾನದ ಧಾರ್ಮಿಕ ವ್ಯವಸ್ಥೆಯಲ್ಲಿ ಸಾಹಿತ್ಯ ವೇದಿಕೆಯೊಂದು ಒದಗಿಬಂದದ್ದು ಅತ್ಯಂತ ಅರ್ಥಪೂರ್ಣವಾದುದು. ಜತೆಗೆ ಕವಿಗೋಷ್ಠಿಯ ಕವನಗಳ ಆಗ್ರಹವೂ ಒಂದು ದಾಖಲೆಯಾಗಿದೆ ಎಂದು ಶ್ರೀಗಳು ಈ ಸಂದರ್ಭ ತಿಳಿಸಿದರು.

ಕೃತಿಯ ಸಂಪಾದಕ, ಸಾಹಿತಿ, ಕಲಾವಿದ ಡಾ| ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ಉಪಸ್ಥಿತರಿದ್ದರು. ವೆಂಕಟ್ ಭಟ್ ಎಡನೀರು ವಂದಿಸಿದರು.

ಚಾತುರ್ಮಾಸ್ಯ ಕವಿಗೋಷ್ಠಿಯಲ್ಲಿ ಡಾ| ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಡಾ| ವಸಂತಕುಮಾರ್‌ ಪೆರ್ಲ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಎಸ್‌.ವಿ. ಭಟ್, ಡಾ| ರತ್ನಾಕರ ಮಲ್ಲಮೂಲೆ, ಟಿ.ಎನ್‌.ಎ.ಖಂಡಿಗೆ, ವಿರಾಜ್‌ ಅಡೂರು, ವಿಜಯಲಕ್ಷ್ಮೀ ಶ್ಯಾನುಭೋಗ್‌, ಸತ್ಯವತಿ ಎಸ್‌.ಭಟ್ ಕೊಳಚ್ಚಪ್ಪು, ಡಾ| ನರೇಶ್‌ ಮುಳ್ಳೇರಿಯ, ಪುರುಷೋತ್ತಮ ಭಟ್ ಕೆ, ಹ.ಸು. ಒಡ್ಡಂಬೆಟ್ಟು, ಡಾ| ರಾಧಾಕೃಷ್ಣ ಬೆಳ್ಳೂರು, ವೆಂಕಟ್ ಭಟ್ ಎಡನೀರು ಕವಿತೆಗಳನ್ನು ವಾಚಿಸಿದ್ದು, ಅವರ ಕವಿತೆಗಳು ಹೊತ್ತಗೆಯಲ್ಲಿ ಒಳಗೊಂಡಿದೆ. ಬಳಿಕ ಮಾಸ್ತರ್‌ ವಿಷ್ಣು ಭಟ್ ರಚಿಸಿದ್ದ ಪಾಂಚಜನ್ಯ ಯಕ್ಷಗಾನ ಪ್ರಸಂಗದ ಪ್ರದರ್ಶನ ಶ್ರೀ ಎಡನೀರು ಮೇಳದಿಂದ ಪ್ರಸ್ತುತಿಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next