ಕಾಸರಗೋಡು: ಸಾಮರಸ್ಯದ ರಾಷ್ಟ್ರೀಯ ಭಾವೈಕ್ಯತೆಯ ಓಣಂ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದ ಕೇರಳೀಯರು ಸಂತೋಷದ ಹೊನಲಿನಲ್ಲಿ ತೇಲಾಡಿದರು. ಇದೇ ವೇಳೆ ಕಾಸರಗೋಡು ಜಿಲ್ಲೆಯ ಇಡಯಿಲೆಕ್ಕಾಡ್‌ನಲ್ಲಿ ವಾನರ ಪಡೆಗೆ “ಓಣಂ ಸದ್ಯ’ ನೀಡಿ ಸಂಭ್ರಮಪಟ್ಟರು.ವಲಿಯಪರಂಬದ ಇಡಯಿಲೆಕ್ಕಾಡ್‌ನ ಬನದಲ್ಲಿ 12 ವಿವಿಧ ಖಾದ್ಯಗಳ ಭೂರಿ ಭೋಜನವನ್ನು ವಾನರ ಪಡೆಗೆ ನೀಡಲಾಯಿತು
ಇಡಯಿಲೆಕ್ಕಾಡ್‌ನ ನವೋದಯ ಗ್ರಂಥಾಲಯ ಮತ್ತು ಬಾಲವೇದಿಯ ನೇತೃತ್ವದಲ್ಲಿ ನಿರಂತರವಾಗಿ 12 ನೇ ವರ್ಷದಲ್ಲೂ ಮಂಗಗಳಿಗೆ ಓಣಂ ಸದ್ಯ ನೀಡಲಾಯಿತು. ಇಡಯಿಲೆಕ್ಕಾಡ್‌ನ ಬನದಲ್ಲಿ ಡೆಸ್ಕ್ ಹಾಗು ಕುರ್ಚಿಗಳನ್ನು ಇರಿಸಿ ಬಾಳೆ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಿದ ಖಾದ್ಯಗಳ ಸವಿಯೊಂದಿಗೆ ಮಂಗಗಳಿಗೆ ಬಾಳೆ ಎಲೆಯಲ್ಲಿ ಭೋಜನ ಇರಿಸಲಾಯಿತು. ಹಲಸಿನ ಹಣ್ಣು, ಪಪ್ಪಾಯಿ, ಚಿಕ್ಕು, ಪೇರಳೆ, ಮುಳ್ಳು ಸೌತೆ, ಟೊಮೆಟೋ, ಅನನಾಸು ಮೊದಲಾದ ಹಣ್ಣು ಹಂಪಲುಗಳನ್ನು ಹಾಗು ಬೆಂಡೆ, ಬೀಟ್‌ರೂಟ್, ಫ್ಯಾಶನ್ ಫ್ರುಟ್, ಅಲಸಂಡೆ, ಕ್ಯಾರೆಟ್‌ಗಳಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಬಾಳೆ ಎಲೆಯಲ್ಲಿ ಬಡಿಸಲಾಗಿತ್ತು.
ಬನದಲ್ಲಿರುವ ವಾನರ ಪಡೆಗೆ ನಿತ್ಯವೂ ಊಟ ಬಡಿಸುವ ಚಾಲಿಲ್ ಮಾಣಿಕಮ್ಮ ಅವರ ನೇತೃತ್ವದಲ್ಲಿ ಓಣಂ ಸದ್ಯವನ್ನು ಬಡಿಸಲಾಯಿತು. ಬೆಳಗ್ಗೆ 10.30 ಕ್ಕೆ ಆರಂಭಿಸಿದ ಓಣಂ ಸದ್ಯ ಬಡಿಸುವ ಕಾರ್ಯ ಹನ್ನೊಂದು ಗಂಟೆಗೆ ಸಂಪನ್ನಗೊಂಡಿತು. ಆ ಬಳಿಕ ಮಂಗಗಳ ಪಡೆ ಅಲ್ಲಿಗೆ ಮುತ್ತಿಗೆ ಹಾಕಿತು. 12 ನೇ ವರ್ಷದ ಓಣಂ ಸದ್ಯದ ಅಂಗವಾಗಿ 12 ಬಗೆಯ ಖಾದ್ಯಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.
ಜೈವ ವೈವಿಧ್ಯ ಸಂಪನ್ನವಾಗಿರುವ ಇಡಯಿಲೆಕ್ಕಾಡ್ ಬನದಲ್ಲಿ ಮಂಗಗಳ ಸಂಖ್ಯೆ ಐದಕ್ಕೆ ಇಳಿದಾಗ ಮಂಗಗಳ ವಂಶ ನಾಶಕ್ಕೆ ಕಾರಣ ಕಂಡುಕೊಳ್ಳಲು ಯತ್ನಿಸಲಾಯಿತು. ಇದರ ಅಂಗವಾಗಿ ತೃಶ್ಶೂರಿನ ಮೃಗಾಲಯದ ಸಹಕಾರದೊಂದಿಗೆ ನಡೆಸಿದ ಅಧ್ಯಯನದಿಂದ ಮಂಗಗಳಿಗೆ ನೀಡುವ ಖಾದ್ಯಗಳಲ್ಲಿ ಉಪ್ಪಿನ ಅಂಶಗಳಿರುವುದರಿಂದ ಸಂತಾನ ಶಕ್ತಿ ಕಡಿಮೆಯಾಗಿರುವುದು ಮಂಗಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಯಿತು ಎಂದು ಕಂಡುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಓಣಂ ಸದ್ಯದಲ್ಲಿ ಉಪ್ಪು ಬೆರಸದೆ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಇತ್ತೀಚಿನ ವರ್ಷಗಳಲ್ಲಿ ರೂಢಿಯಾಯಿತು. ಇದರಿಂದಾಗಿ ಮಂಗಳ ಸಂಖ್ಯೆ ಅಧಿಕವಾಯಿತು. ಇದೀಗ ಈ ಪರಿಸರದಲ್ಲಿ ಸುಮಾರು 40 ರಷ್ಟು ಮಂಗಗಳಿವೆ.
ನವೋದಯ ಗ್ರಂಥಾಲಯದ ಅಧ್ಯಕ್ಷ ಪಿ.ವಿ. ಪ್ರಭಾಕರನ್, ಕಾರ್ಯದರ್ಶಿ ಪಿ.ವೇಣುಗೋಪಾಲನ್, ವಲಿಯಪರಂಬ ಪಂಚಾಯತ್ ಸದಸ್ಯ ಸಿ.ಕೆ. ಕರುಣಾಕರನ್, ಪರಿಸರ ಕಾರ್ಯಕರ್ತ ಆನಂದ ಪೇಕಡಂ, ಬಾಲವೇದಿ ಸಂಚಾಲಕ ಎಂ.ಬಾಬು, ಬಾಲವೇದಿ ಪದಾಧಿಕಾರಿಗಳಾದ ಆರ್ಯ ಎಂ, ಬಾಬು, ವಿ.ಫಿದಲ್ ಮೊದಲಾದವರು ನೇತೃತ್ವ ನೀಡಿದರು.
ಮಂಗಗಳಿಗೆ ಓಣಂ ಸದ್ಯ
ಮಂಗಗಳಿಗೆ ಓಣಂ ಸದ್ಯ ನೀಡುವ ಸಂಭ್ರಮದ ಹಿನ್ನೆಲೆಯಲ್ಲಿ ಇಡಯಿಲೆಕ್ಕಾಡ್‌ನಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ತೆಂಗಿನ ಒಲಿಯಿಂದ ವಿವಿಧ ಆಕೃತಿಗಳಲ್ಲಿ ರಚಿಸಿದ ಹೂಗಳು, ಪಕ್ಷಿಗಳು ಮೊದಲಾದವುಗಳನ್ನು ತೂಗು ಹಾಕಲಾಯಿತು. ಕಾಡಿನ ಹೂಗಳನ್ನು ಬಳಸಲಾಯಿತು. ಬ್ಯಾನರ್ ಸ್ಥಾಪಿಸಲಾಗಿತ್ತು. ಈ ಪ್ರದೇಶದಲ್ಲಿ ಸುಮಾರು 40 ರಷ್ಟು ಮಂಗಗಳಿದ್ದು, ಈ ಪೈಕಿ 30 ಮಂಗಗಳು ಓಣಂ ಸದ್ಯ ಉಂಡು ತೇಗಲು ಬಂದಿದ್ದವು. ಓಣಂ ಸದ್ಯದ ಜತೆಗೆ ಸ್ಟೀಲ್ ಗ್ಲಾಸ್‌ಗಳಲ್ಲಿ ನೀರನ್ನು ಇರಿಸಲಾಗಿತ್ತು. ಮಂಗಗಳಿಗೆ ಓಣಂ ಸದ್ಯ ಬಡಿಸುವ ಸಂಭ್ರಮವನ್ನು ವೀಕ್ಷಿಸಲು ನೂರಾರು ಮಂದಿ ತಲುಪಿದ್ದರು.