Advertisement

ಶ್ರೀ ಭುವನೇಂದ್ರ ಕಾಲೇಜಿಗೆ ಐಸಿಟಿ ಅಕಾಡೆಮಿ ಸದಸ್ಯತ್ವ ಪ್ರದಾನ

08:45 AM Oct 14, 2017 | Karthik A |

ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜು ಭಾರತ ಸರಕಾರದ ಇನ್‌ಫರ್ಮೇಶನ್‌ ಆ್ಯಂಡ್‌ ಕಮ್ಯುನಿಕೇಶನ್‌ ಟೆಕ್ನಾಲಜಿ ಅಕಾಡೆಮಿಯ (ಐಸಿಟಿ) ಸದಸ್ಯತ್ವವನ್ನು ಪಡೆದುಕೊಂಡಿದ್ದು, ಬುಧವಾರ ಕಾಲೇಜಿನಲ್ಲಿ ಜರಗಿದ ಸಮಾರಂಭದಲ್ಲಿ ಸದಸ್ಯತ್ವ ಪ್ರದಾನ ಮಾಡಲಾಯಿತು. ಐಸಿಟಿ ಅಕಾಡೆಮಿಯ ಕರ್ನಾಟಕ ವ್ಯಾಪ್ತಿಯ ಮುಖ್ಯಸ್ಥ ವಿಷ್ಣುಪ್ರಸಾದ ಅವರು ಸದಸ್ಯತ್ವ ಪ್ರಮಾಣಪತ್ರವನ್ನು ಶ್ರೀ ಭುವನೇಂದ್ರ ಕಾಲೇಜಿನ ವಿಶ್ವಸ್ತಮಂಡಳಿ ಸದಸ್ಯ ಡಾ| ಭರತೇಶ ಎ. ಅವರಿಗೆ ಹಸ್ತಾಂತರಿಸಿದರು. ಉನ್ನತ ಶಿಕ್ಷಣದಲ್ಲಿ ಔದ್ಯೋಗಿಕ ಕ್ಷೇತ್ರದ ಅಗತ್ಯಕ್ಕನುಗುಣವಾದ ಜ್ಞಾನ ಮತ್ತು ಕೌಶಲಗಳ ಕೊರತೆಯನ್ನು ವಿಶೇಷ ತರಬೇತಿಗಳ ಮೂಲಕ ನೀಗಿಸುವ ನಿಟ್ಟಿನಲ್ಲಿ ಐಸಿಟಿ ಸದಸ್ಯತ್ವವನ್ನು ನೀಡಲಾಗುತ್ತದೆ.

Advertisement

ಉತ್ಕೃಷ್ಟ ಸಾಧನೆಗೆ ಅವಕಾಶ
ಕಾಲೇಜಿನ ಪ್ರಾಚಾರ್ಯ ಡಾ| ಮಂಜುನಾಥ ಕೋಟ್ಯಾನ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಲೇಜಿನ ಬೋಧನಾ ಗುಣಮಟ್ಟದ ವೃದ್ಧಿಯಾಗಿ ಯುಜಿಸಿಯಿಂದ ಉತ್ಕೃಷ್ಟ ಸಾಧನೆಗೆ ಸಾಧ್ಯವಿರುವ ಸಂಸ್ಥೆಯಾಗಿ ಕಾಲೇಜು ಗುರುತಿಸಿಕೊಳ್ಳಲಿದೆ ಎಂದರು. ಕಾಲೇಜಿನ ಆಂತರಿಕ ಗುಣಮಟ್ಟ ಪ್ರಕೋಷ್ಠದ ಸಂಯೋಜಕ ಪ್ರೊ| ನಾಗಭೂಷಣ ಎಚ್‌.ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಐಸಿಟಿ ಸದಸ್ಯತ್ವದ ಲಾಭವೇನು?
ಐಸಿಟಿ ಸದಸ್ಯತ್ವದಿಂದ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಜ್ಞಾನ, ತಂತ್ರಜ್ಞಾನ ಮತ್ತು ಕೌಶಲಗಳ ತರಬೇತಿ ಸಾಧ್ಯವಾಗಲಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸುವ ಹಲವು ಅವಕಾಶಗಳನ್ನು ಪಡೆಯಲಿದ್ದಾರೆ. ಕಾರ್ಪೊರೇಟ್‌ ಕಂಪೆನಿಗಳ ಉನ್ನತ ಅಧಿಕಾರಿಗಳೂ ಐಸಿಟಿ ಅಕಾಡೆಮಿಯ ಆಡಳಿತ ಮಂಡಳಿಯಲ್ಲಿದ್ದು ಅಗತ್ಯವಾದ ಜ್ಞಾನ, ತಂತ್ರಜ್ಞಾನ ಮತ್ತು ಕೌಶಲಗಳನ್ನು ಪಠ್ಯಕ್ರಮದೊಂದಿಗೆ ಪರಿಚಯಿಸಲು ಇದರಿಂದ ಸಾಧ್ಯವಾಗಲಿದೆ. ಪ್ರಾಧ್ಯಾಪಕರಿಗೆ ಬೋಧನಾ ಕೌಶಲ ವೃದ್ಧಿ ಮತ್ತು ಬೋಧಿಸುವ ವಿಷಯಗಳ ಸಮಕಾಲೀನ ಬೆಳವಣಿಗೆಗಳ ಜ್ಞಾನಾರ್ಜನೆಗೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಕಾಡೆಮಿ ಆರು ಸಂಶೋಧನಾ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದ್ದು ಪ್ರಾಧ್ಯಾಪಕರ ಸಂಶೋಧನಾ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟಿಸಬಹುದಾಗಿದೆ.
– ವಿಷ್ಣುಪ್ರಸಾದ, ಐಸಿಟಿ ಅಕಾಡೆಮಿ ಕರ್ನಾಟಕ ವ್ಯಾಪ್ತಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next