Advertisement

Iceland is now a hotland!; ಬಾಯ್ತೆರೆದ ಭೂಮಿ, ಸ್ಫೋಟಿಸಿದ ಜ್ವಾಲಾಮುಖಿ

12:36 AM Dec 24, 2023 | Team Udayavani |

ನೀರಿನ ಬುಗ್ಗೆಯಂತೆ ನೆಲದಾಳದಿಂದ ಹೊರಚಿಮ್ಮುತ್ತಿರುವ ಲಾವಾರಸ, ಭೂಕಂಪಗಳ ಸರಣಿ ಬೆನ್ನಲ್ಲೇ ಈಗ ಜ್ವಾಲಾಮುಖಿ ಸ್ಫೋಟ

Advertisement

ಉತ್ತರ ಅಟ್ಲಾಂಟಿಕ್‌ ಹಾಗೂ ಆರ್ಕ್‌ಟಿಕ್‌ ಸಮುದ್ರದ ನಡುವೆ ಇರುವ ಪುಟ್ಟ ದ್ವೀಪ ರಾಷ್ಟ್ರ ಐಸ್‌ಲ್ಯಾಂಡ್‌ನ‌ಲ್ಲಿ ಪ್ರತೀ ವರ್ಷ ಈ ಸಮಯಕ್ಕೆ ಇಡೀ ನಗರವೇ ಕ್ರಿಸ್‌ಮಸ್‌ನ ಬಣ್ಣದ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ಈ ಬಾರಿಯೂ ಇಲ್ಲಿ ಬೆಳಕಿದೆ. ಆದರೆ ಅದು ಕ್ರಿಸ್‌ಮಸ್‌ ದೀಪಗಳಲ್ಲ. ಭೂಮಿಯು ಬಾಯ್ತೆರೆದು ಸ್ಫೋಟಗೊಂಡಿರುವ ಜ್ವಾಲಾಮುಖಿಯ ಬೆಳಕು!. ಭೂಮಿಯ ಮೇಲಿನ ಜ್ವಾಲಾಮುಖಿ ಸಕ್ರಿಯ ಪ್ರದೇಶಗಳಲ್ಲಿ ಒಂದಾದ ಐಸ್‌ಲ್ಯಾಂಡ್‌ನ‌ಲ್ಲಿ ಕಳೆದ ವಾರ ಜ್ವಾಲಾಮುಖಿ ಸ್ಫೋಟಗೊಂಡಿದ್ದು ನಿರಂತರವಾಗಿ ಲಾವಾ ರಸವೂ ಹೊರಹೊಮ್ಮುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಇದರ ವೀಡಿಯೋಗಳನ್ನು ಕಂಡಾಗ ಮೈ ಜುಂ ಎನ್ನಿಸುತ್ತದೆ. ಜ್ವಾಲಾಮುಖಿಯ ಸ್ಫೋಟ ಹಾಗೂ ಲಾವಾ ರಸದ ಹೊರಹೊಮ್ಮುವಿಕೆಯಿಂದ ಆ ಪ್ರದೇಶದಲ್ಲಿ ಜನವಸತಿ ಯನ್ನೇ ಸ್ಥಳಾಂತರಿಸಲಾಗಿದೆ. ಜಾಗತಿಕವಾಗಿಯೂ ಇದು ಅಚ್ಚರಿಗೆ ಕಾರಣವಾಗಿದೆ. ಐಸ್‌ಲ್ಯಾಂಡ್‌ನ‌ಲ್ಲಿ ಏನಾಗುತ್ತಿದೆ? ಇದಕ್ಕೆ ಕಾರಣ ಏನು? ಎಂಬೆಲ್ಲ ವಿಷಯಗಳ ಕುರಿತಂತೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಆಗಿದ್ದೇನು?
ಐಸ್‌ಲ್ಯಾಂಡ್‌ನ‌ ಸೌಥ್‌ವೆಸ್ಟ್‌ ಪ್ರದೇಶದಲ್ಲಿರುವ ರಕ್ಸ್‌ಜೇನಸ್‌ ಪರ್ಯಾಯ ದ್ವೀಪದ ಗ್ರಿಂಡವಿಕ್‌ನಲ್ಲಿ ಭೂಮಿಯು ಬಾಯ್ತೆರೆದು ಜ್ವಾಲಾಮುಖೀಯು ಸ್ಫೋಟಗೊಂಡಿದೆ. ಸುಮಾರು 2.5 ಮೈಲುಗಳಷ್ಟು ಅಂದರೆ 4 ಕಿ.ಮೀ. ಗಳಷ್ಟು ವಿಶಾಲ ಭೂಪ್ರದೇಶ ಬಾಯ್ತೆರೆದು ಲಾವಾ ರಸವು ಹೊಳೆಯಂತೆ ಹರಿಯ ತೊಡಗಿತು. ಸ್ಫೋಟಗೊಂಡ ಮೊದಲ ಎರಡು ಗಂಟೆಗಳು, ಪ್ರತೀ ಸೆಕೆಂಡಿಗೆ 100ರಿಂದ 200 ಕ್ಯುಬಿಕ್‌ ಮೀಟರ್‌ಗಳಷ್ಟು ಲಾವಾ ರಸವು ಹೊರಹೊಮ್ಮುತ್ತಿತ್ತು. ಈ ಜ್ವಾಲಾಮುಖಿ ಅಲ್ಲಿನ ರಾಜಧಾನಿ ರೆಕಾjವಿಕ್‌ನಿಂದ 40 ಕಿ.ಮೀ. ದೂರದಲ್ಲಿ ಕಾಣಿಸಿಕೊಂಡಿದೆ. ಭೂಗರ್ಭದಿಂದ ಹೊರಹೊಮ್ಮುತ್ತಿರುವ ಲಾವಾರಸದ ತೀವ್ರತೆ ಒಂದಿಷ್ಟು ಕಡಿಮೆಯಾಗಿದೆ ಯಾದರೂ ಜ್ವಾಲಾಮುಖಿಯ ದಳ್ಳುರಿ ಇನ್ನೂ ಮುಂದುವರಿದಿದೆ.

ಕಾರಣವೇನು?
ಐಸ್‌ಲ್ಯಾಂಡ್‌ನ‌ ಹವಾಮಾನ ಇಲಾಖೆಯ ಅಧಿಕಾರಿಗಳು ಈ ಜ್ವಾಲಾಮುಖಿಯ ಸ್ಫೋಟವನ್ನು ಮೊದಲೇ ಊಹಿಸಿದ್ದರು. ಇದಕ್ಕೆ ಕಾರಣವೂ ಇದೆ. ಈ ಪ್ರದೇಶದಲ್ಲಿ ಕಳೆದ ಒಂದೆರಡು ತಿಂಗಳಲ್ಲಿ ನಿರಂತರವಾಗಿ ನೂರಾರು ಭೂಕಂಪಗಳು ಸಂಭವಿಸಿವೆ. ಆ ವೇಳೆಯಲ್ಲಿಯೇ ಜ್ವಾಲಾಮುಖಿಯ ಸ್ಫೋಟವನ್ನು ಅಂದಾಜಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಪ್ರದೇಶವು ಮೂರನೇ ಬಾರಿ ದೊಡ್ಡ ಮಟ್ಟದ ಜ್ವಾಲಾಮುಖೀಯ ಸ್ಫೋಟಕ್ಕೆ ಸಾಕ್ಷಿಯಾಗಿದೆ. ಸುಮಾರು 6,000 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಈ ಜ್ವಾಲಾಮುಖೀಯು 2021ರ ಮಾರ್ಚ್‌ನಿಂದ ಮತ್ತೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ಜ್ವಾಲಾಮುಖೀ ಸಕ್ರಿಯ ಪ್ರದೇಶವಾಗಿರುವ ಈ ನಗರವು ಪ್ರತೀ ನಾಲ್ಕರಿಂದ – ಐದು ವರ್ಷ ಕನಿಷ್ಠ ಒಂದು ಜ್ವಾಲಾಮುಖಿಯನ್ನು ಕಾಣುತ್ತದೆ. ಆದರೆ 2021ರಿಂದ ವರ್ಷಕ್ಕೊಂದರಂತೆ ಕಾಣಿಸಿಕೊಳ್ಳುತ್ತಿದೆ.

4 ಸಾವಿರ ಜನರ ಸ್ಥಳಾಂತರ
ಗ್ರಿಂಡವಿಕ್‌, ಇದು ಮೀನುಗಾರಿಕಾ ಪ್ರದೇಶ. ಹೆಚ್ಚೇನು ಜನವಸತಿಯನ್ನು ಈ ಪ್ರದೇಶ ಹೊಂದಿಲ್ಲ. ಕೇವಲ ಸಾವಿರಗಳಲ್ಲಷ್ಟೇ ಇಲ್ಲಿನ ಜನಸಂಖ್ಯೆ. ಭೂಕಂಪದಿಂದ ಜ್ವಾಲಾಮುಖಿಯ ಸ್ಫೋಟವನ್ನು ಊಹಿಸಿದ್ದರಿಂದ ಮುಂಜಾಗ್ರತ ಕ್ರಮವಾಗಿ ಇಲ್ಲಿನ ಸುಮಾರು 4,000 ಜನರನ್ನು ಸ್ಥಳಾಂತರಗೊಳಿಸಲಾಗಿತ್ತು. ಆ ದೇಶದ ತಜ್ಞರ ಪ್ರಕಾರ ಗ್ರಿಂಡವಿಕ್‌ ಪ್ರದೇಶದ ಜ್ವಾಲಾಮುಖೀಯು ಭೂಮಿಯ 800 ಮೀಟರ್‌ ಆಳದಲ್ಲಿ 10 ಕೀ.ಮೀ.ನಷ್ಟು ಉದ್ದದಲ್ಲಿ ಹರಿಯುತ್ತಿದೆ. ಎರಡು ವರ್ಷಗಳ ಹಿಂದೆ ಅಂದರೆ 2021ರಲ್ಲೂ ಈ ಪ್ರದೇಶವು ಇದೇ ತೆರನಾದ ಜ್ವಾಲಾಮುಖಿಯ ಸ್ಫೋಟಕ್ಕೆ ತುತ್ತಾಗಿತ್ತು. ಅಂದು 6 ತಿಂಗಳುಗಳ ಕಾಲ ಜ್ವಾಲಾಮುಖೀಯು ಸಕ್ರಿಯವಾಗಿತ್ತು. ಆ ಬಳಿಕ ಆಗಸ್ಟ್‌ 2022ರಲ್ಲಿ ಕಾಣಿಸಿಕೊಂಡ ಜ್ವಾಲಾಮುಖಿಯು ಮೂರು ವಾರಗಳ ಕಾಲ ಸಕ್ರಿಯವಾಗಿತ್ತು.

Advertisement

140 ಜ್ವಾಲಾಮುಖಿಗಳು
ಒಟ್ಟಾರೆ ಈ ದ್ವೀಪ ದೇಶದ ಜನಸಂಖ್ಯೆ 4 ಲಕ್ಷ. ಜತೆಗೆ ಈ ದ್ವೀಪವು 140 ಜ್ವಾಲಾಮುಖಿಯನ್ನು ಹೊಂದಿದೆ. ಈ 140 ಜ್ವಾಲಾಮುಖೀಗಳಲ್ಲಿ 33 ಜ್ವಾಲಾಮುಖಿಗಳು ಸಕ್ರಿಯವಾಗಿವೆ. ದೇಶವು ಎರಡು ಟೆಕ್ಟೋನಿಕ್‌ ಫ‌ಲಕಗಳ ಮೇಲೆ ಇದೆ. ಟೆಕ್ಟೋನಿಕ್‌ ಫ‌ಲಕಗಳು ಭೂಮಿಯ ಮೇಲ್ಪದರ ಲಿಥೋಸ್ಪಿಯರಿಕ್‌ ಫ‌ಲಕಗಳಿಂದ ನಿರ್ಮಿತವಾದ ಘನವಾದ ಕಲ್ಲಿನ ರೂಪದಲ್ಲಿರುವ ಫ‌ಲಕಗಳು. ಸಮುದ್ರದ ಅಡಿಯಲ್ಲಿರುವ ಪರ್ವತಗಳಿಂದ ಈ ಟೆಕ್ಟೋನಿಕ್‌ ಫ‌ಲಕಗಳು ಬಿಡಿ ಬಿಡಿ ಭಾಗಗಳಾಗಿ ಪರಿವರ್ತನೆಗೊಂಡಿವೆ. ಅಲ್ಲದೇ ಈ ಪರ್ವತಗಳಿಂದ ಅತೀ ಶಾಖದ ಮ್ಯಾಗ್ಮಾ ದ್ರವವು ಆಗ್ಗಾಗೆ ಹೊರಹೊಮ್ಮುತ್ತಿರುತ್ತವೆ. ಈ ಪ್ರದೇಶದಲ್ಲಿರುವ ಅತೀ ದೊಡ್ಡ ಜ್ವಾಲಾಮುಖಿ ಕಟ್ಲಾ ಜ್ವಾಲಾಮುಖಿ. ಕಳೆದ ಕೆಲವು ತಿಂಗಳುಗಳ ಕಾಲ ಸಂಭವಿಸಿದ ಭೂಕಂಪವು ಒಂದು ವೇಳೆ ಕಟ್ಲಾ ಜ್ವಾಲಾಮುಖಿಯ ಬಿಂದುವಿನ ಮೇಲೆ ಪರಿಣಾಮ ಬೀರಿದ್ದರೆ ಅದರ ತೀವ್ರತೆ ಈಗಿರುವ ಪರಿಸ್ಥಿತಿಗಿಂತಲೂ ಹೆಚ್ಚಾಗಿ ಇರುತ್ತಿತ್ತು. ವಿಜ್ಞಾನಿಗಳ ಪ್ರಕಾರ ಈ ಕಟ್ಲಾ ಜ್ವಾಲಾಮುಖಿಯು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ. 1721ರಿಂದ ಇಲ್ಲಿಯವರೆಗೂ ಐದು ಬಾರಿ ಇದು ಸ್ಫೋಟಿಸಿದೆ. 34ರಿಂದ 78 ವರ್ಷಗಳ ಅವಧಿಯ ಅಂತರದಲ್ಲಿ ಇದು ಸಾಮಾನ್ಯವಾಗಿ ಸ್ಫೋಟಗೊಳ್ಳುತ್ತದೆ. ಕೊನೆಯದಾಗಿ ಕಟ್ಲಾ ಜ್ವಾಲಾಮುಖಿ ಸ್ಫೋಟಗೊಂಡಿದ್ದು 1918ರಲ್ಲಿ.

800 ಭೂಕಂಪ
ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಐಸ್‌ಲ್ಯಾಂಡ್‌ ಸರಣಿ ಭೂಕಂಪಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ 14 ಗಂಟೆಯ ಅವಧಿಯಲ್ಲಿ 800 ಭೂಕಂಪಗಳನ್ನು ಕಂಡಿದೆ. ಈ ಕಾರಣದಿಂದ ಆ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಅಕ್ಟೋಬರ್‌ ತಿಂಗಳಿನಿಂದ 24 ಸಾವಿರ ಭೂಕಂಪಗಳು ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನವು ಮಧ್ಯರಾತ್ರಿ 12 ರಿಂದ 2 ಗಂಟೆಯ ಅವಧಿಯಲ್ಲಿ ಸಂಭವಿಸಿವೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ.

ಐಸ್‌ಲ್ಯಾಂಡ್‌ ಯಾಕೆ ಜ್ವಾಲಾಮುಖಿ ಸಕ್ರಿಯ ಪ್ರದೇಶ?
ಜ್ವಾಲಾಮುಖಿ ಸಕ್ರಿಯ ಪ್ರದೇಶವಾಗಿರುವ ಐಸ್‌ಲ್ಯಾಂಡ್‌ 140 ಜ್ವಾಲಾಮುಖಿ ಹಾಟ್‌ಸ್ಪಾಟ್‌ಗಳನ್ನು ಹೊಂದಿದೆ. ಇಲ್ಲೇ ಯಾಕೆ ಇಷ್ಟೊಂದು ಜ್ವಾಲಾಮುಖಿ ಸಂಭವಿಸುತ್ತದೆ ಎಂಬುದಕ್ಕೆ ಎರಡು ಕಾರಣಗಳನ್ನು ನೀಡಬಹುದು. ಒಂದು ಐಸ್‌ಲ್ಯಾಂಡ್‌ ಪ್ರದೇಶವು ವಿಶ್ವ ಅತೀ ಉದ್ದದ ಪರ್ವತ ಶ್ರೇಣಿಯಾದ ಮಿಡ್‌ ಅಟ್ಲಾಂಟಿಕ್‌ ರಿಡ್ಜ್ನ ಪ್ರದೇಶದಲ್ಲಿದೆ. ಈ ಜಾಗದಲ್ಲಿ ಯುರೇಶಿಯನ್‌ ಹಾಗೂ ನಾರ್ಥ್ ಅಮೆರಿಕನ್‌ ಪ್ಲೇಟ್ಸ್‌ಗಳು ಪ್ರತೀ ವರ್ಷ ಸ್ವಲ್ಪ ಸ್ವಲ್ಪವೇ ಸೆಂಟಿ ಮೀಟರ್‌ಗಳಷ್ಟು ಚಲಿಸುತ್ತವೆ. ಈ ಚಲನೆಯು ಜ್ವಾಲಾಮುಖಿ ವಲಯಗಳನ್ನು ರಚಿಸುತ್ತದೆ ಹಾಗೂ ಭೂಮಿಯ ಹೊರಪದರವನ್ನು ಬೇರ್ಪಡಿಸುತ್ತದೆ. ಇದರಿಂದ ಇಲ್ಲಿ ಕರಗಿದ ಕಲ್ಲು ಅಥವಾ ಶಿಲೆಯು ಪಾಕದ ರೂಪದಲ್ಲಿ ಅಥವಾ ದ್ರವ ರೂಪದಲ್ಲಿ ಭೂಮಿಯ ಮೇಲ್ಮೆ„ ಯನ್ನು ತಲುಪಿ ಲಾವಾ ರಸದ ರೂಪದಲ್ಲಿ ಹೊರಹೊಮ್ಮುತ್ತದೆ.

ಇನ್ನೊಂದು ಕಾರಣ ಈ ಫ‌ಲಕಗಳು ಒಂದರರೊಂದರೆಡೆಗೆ ಚಲಿಸುವುದು. ಈ ಚಲನೆಯಿಂದ ಭೂಮಿಯ ಪದರವು ಅತಿಯಾದ ಆಳಕ್ಕೆ ದೂಡಲ್ಪಡುತ್ತದೆ. ಇಲ್ಲಿ ನಿರ್ಮಾಣವಾಗುವ ಅತಿಯಾದ ಶಾಖ ಹಾಗೂ ಒತ್ತಡವು ಪದರದ ಕರಗುವಿಕೆಗೆ ಕಾರಣವಾಗುತ್ತದೆ. ಪದರವು ಕರಗಿ ದ್ರವ ರೂಪದಲ್ಲಿ ಹೊರಸೂಸುತ್ತದೆ.

ಮತ್ತೆ ತೀವ್ರತೆ ಕಂಡುಕೊಳ್ಳುವ ಆತಂಕ
ಕಳೆದ ಕೆಲವು ದಿನಗಳಿಂದ ಮ್ಯಾಗ್ಮಾದ ಹೊರಸೂಸುವಿಕೆಯ ತೀವ್ರತೆಯು ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ. ಆದರೆ ಇದು ನಿಶ್ಚಿಂತೆಯ ವಿಷಯವಲ್ಲ ಎಂದು ತಜ್ಞರು, ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಜ್ವಾಲಾಮುಖಿಯ ಲಾವಾರಸದ ಹೊರಸೂಸುವಿಕೆಯು ತೀವ್ರತೆಯು ಕಡಿಮೆಯಾದಂತೆ ಕಾಣಬಹುದು. ಆದರೆ ಇದು ಅಲ್ಪಾವಧಿಯಷ್ಟೇ. ಇದೇ ಅಂತಿಮವಲ್ಲ. ತೀವ್ರತೆ ಕಡಿಮೆಯಾಗಿದೆ ಎಂದರೆ ಸ್ಫೋಟದ ಮೊದಲ ಹಂತ ಮುಗಿದಿದೆ ಎಂದರ್ಥ. ದಿನಕಳೆದಂತೆ ಒಡಲಾಳದ ಒತ್ತಡ ಹಾಗೂ ಶಾಖವು ಹೆಚ್ಚಿದಂತೆ ಸ್ಫೋಟವು ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next