Advertisement

ಕೋವಿಡ್‌-19 ಶಾಖಕ್ಕೆ ಕರಗಿದ ಐಸ್‌ಕ್ರೀಂ ಉದ್ಯಮ

01:40 AM Apr 19, 2020 | Sriram |

ಹುಬ್ಬಳ್ಳಿ: ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಐಸ್‌ಕ್ರೀಂ ಉದ್ಯಮಕ್ಕೆ ಸುಗ್ಗಿ ಕಾಲ. ಆದರೆ, ಈ ಬಾರಿ ಕೋವಿಡ್‌-19
ಹೊಡೆತಕ್ಕೆ ಸಿಲುಕಿದ ಐಸ್‌ಕ್ರೀಂ ಉದ್ಯಮ ಅಕ್ಷರಶಃ ನಲುಗಿದೆ.

Advertisement

ಕೋವಿಡ್‌-19 ದಿಂದ ಕೇವಲ ಕರ್ನಾಟಕ, ಭಾರತವಷ್ಟೇ ಅಲ್ಲ, ವಿಶ್ವದ ಅನೇಕ ಕಡೆಗಳಲ್ಲಿ ಐಸ್‌ಕ್ರೀಂ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ವಿಶ್ವದಲ್ಲಿ 2022ರ ವೇಳೆಗೆ ಅಂದಾಜು 73.2 ಬಿಲಿಯನ್‌ ಡಾಲರ್‌ನಷ್ಟು ಐಸ್‌ಕ್ರೀಂ ವಹಿವಾಟು ಗುರಿ ಹೊಂದಲಾಗಿತ್ತು. ಅದೇ ರೀತಿ ಭಾರತದಲ್ಲೂ ಆ ವೇಳೆಗೆ ಶೇ.4.1ರ ಸಿಎಜಿಆರ್‌ ಬೆಳವಣಿಗೆ ನಿರೀಕ್ಷೆ ಹೊಂದಲಾಗಿತ್ತು. ಪ್ರಮುಖ ಆರು ಕಂಪೆನಿಗಳು ದೇಶದ ಶೇ.68 ಐಸ್‌ಕ್ರೀಂ ಮಾರುಕಟ್ಟೆ ಪಾಲು ಪಡೆದಿವೆ. ಇದೀಗ ಇದೆಲ್ಲದಕ್ಕೂ ಪೆಟ್ಟು ಬಿದ್ದಂತಾಗಿದೆ.

ಸೀಜನ್‌ ಇದ್ದ ಕಾಲಕ್ಕೆ ದೊಡ್ಡ ಪೆಟ್ಟು
ಐಸ್‌ಕ್ರೀಂ ಬಳಕೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ದೇಶದಲ್ಲಿಯೇ ಮಹತ್ವದ ಸ್ಥಾನವಿದೆ. ನೂರಾರು ಬ್ರ್ಯಾಂಡ್‌ ಹಾಗೂ ಬ್ರ್ಯಾಂಡೇತರವಾಗಿ ಐಸ್‌ಕ್ರೀಂ ಉತ್ಪಾದನೆಯಾಗುತ್ತದೆ.

ಮಾರ್ಚ್‌ನಿಂದ ಮೇ ತನಕ ಮೂರು ತಿಂಗಳು ಐಸ್‌ಕ್ರೀಂ ವಹಿವಾಟಿಗೆ ಸೀಸನ್‌. ಒಟ್ಟಾರೆ ಐಸ್‌ಕ್ರೀಂ ವಹಿವಾಟಿನಲ್ಲಿ ಶೇ.60ರಷ್ಟು ವಹಿವಾಟು ಈ ಮೂರು ತಿಂಗಳಲ್ಲಿ ನಡೆದರೆ, ಶೇ.40ರಷ್ಟು ಉಳಿದ ಒಂಬತ್ತು ತಿಂಗಳಲ್ಲಿ ನಡೆಯುತ್ತದೆ ಎಂಬುದು ಉದ್ಯಮ ವಲಯದ ಅನಿಸಿಕೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಏಳು ರಾಜ್ಯಗಳ ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ರಾಜ್ಯದ ಹಾಂಗ್ಯೋ ಐಸ್‌ಕ್ರೀಂ ಕಂಪನಿ ಏಪ್ರಿಲ್‌ ತಿಂಗಳಲ್ಲಿ ಏಳು ರಾಜ್ಯಗಳಲ್ಲಿ ಸುಮಾರು 15 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಆದರೆ ಕೋವಿಡ್‌-19 ಹೊಡೆತದಿಂದ ಒಂದು ಕೋಟಿ ರೂ. ವಹಿವಾಟಿಗೆ ಸೀಮಿತಗೊಳ್ಳುವಂತಾಗಿದೆ.

Advertisement

ಈಗಾಗಲೇ ಉತ್ಪಾದಿಸಿದ ಐಸ್‌ಕ್ರೀಂನಲ್ಲಿ ಅಂದಾಜು ಮೂರು ಕೋಟಿ ರೂ. ಮೌಲ್ಯದಷ್ಟು ಫ್ಯಾಕ್ಟರಿಯಲ್ಲೇ ಉಳಿದಿದ್ದರೆ, ಮೂರು ಕೋಟಿ ರೂ.ನಷ್ಟು ಉತ್ಪನ್ನ ಸೂಪರ್‌ ಸ್ಟಾಕಿಸ್ಟ್‌ -ಡೀಲರ್‌ಗಳಲ್ಲಿ, ಅದೇ ರೀತಿ ಅಂದಾಜು 2-3 ಕೋಟಿ ರೂ.ನಷ್ಟು ಉತ್ಪನ್ನ ವಿವಿಧ ಮಾರಾಟ ಮಳಿಗೆಗಳಲ್ಲಿ ಉಳಿದುಕೊಂಡಿದೆ. ಲಾಕ್‌ಡೌನ್‌ನಿಂದಾಗಿ ಐಸ್‌ಕ್ರೀಂ ಅಂಗಡಿಗಳು ತೆರೆಯುತ್ತಿಲ್ಲ. ಕೆಲ ಮಾಲ್‌ಗ‌ಳಲ್ಲಿ ಲಭ್ಯವಿದ್ದರೂ, ಖರೀದಿ ಕಡಿಮೆ. ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದ್ದ ಐಸ್‌ಕ್ರೀಂಗಳೂ ಸ್ಥಗಿತಗೊಂಡಿವೆ.

ಐಸ್‌ಕ್ರೀಂ ಸೇವನೆಯಿಂದ ಕೋವಿಡ್‌-19 ಬರಲ್ಲ ಎಂಬುದನ್ನು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದ್ದರೂ, ಜನರು ಮಾತ್ರ ಐಸ್‌ಕ್ರೀಂ ತಿಂದು ಗಂಟಲು ನೋವು, ಕೆಮ್ಮು ಏನಾದರೂ ಬಂದರೆ ವೈದ್ಯರು ಚಿಕಿತ್ಸೆ ನೀಡದೆ ನೇರವಾಗಿ ಕೋವಿಡ್‌-19 ಪರೀಕ್ಷೆಗೆ ಕಳುಹಿಸಿದರೆ ಹೇಗೆಂಬ ಆತಂಕದಿಂದ ಅನೇಕರು ಐಸ್‌ಕ್ರೀಂ ಸೇವನೆಗೆ ಮುಂದಾಗುತ್ತಿಲ್ಲ.
– ಬಿ.ಎಸ್‌. ಡಿ’ಸೋಜ, ಉಪಾಧ್ಯಕ್ಷ, ಹಾಂಗ್ಯೋ ಐಸ್‌ಕ್ರೀಂ ಕಂಪೆನಿ

Advertisement

Udayavani is now on Telegram. Click here to join our channel and stay updated with the latest news.

Next