ಧಾರವಾಡ: ಸಂಚಿತ ವೇತನಕ್ಕಾಗಿ ಆಗ್ರಹಿಸಿ ಕವಿವಿ ಸಫಾಯಿ ಕರ್ಮಚಾರಿಗಳು ವಿವಿ ಆಡಳಿತ ಕಚೇರಿ ಎದುರು ಮಂಗಳವಾರದಿಂದ ಧರಣಿ ಆರಂಭಿಸಿದ್ದು, ಮೊದಲ ದಿನವೇ ರಕ್ತ ಪತ್ರ ಚಳವಳಿ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರ ಕಾರ್ಮಿಕರ ಹಾಗೂ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಕೈಗೊಂಡಿರುವ ಕವಿವಿಯಲ್ಲಿ ಕೆಲಸ ಮಾಡುವ 70 ಸಫಾಯಿ ಕರ್ಮಚಾರಿಗಳು ರಕ್ತದಿಂದ ಪತ್ರ ಬರೆದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರಿಗೆ ಪತ್ರಗಳನ್ನು ರವಾನಿಸಿದ್ದಾರೆ.
ಕವಿವಿ ಕುಲಪತಿ ಹಾಗೂ ಕುಲಸಚಿವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಕಾರಣದಿಂದ ಸಫಾಯಿ ಕರ್ಮಚಾರಿಗಳನ್ನು ಸಂಚಿತ ವೇತನದಿಂದ ವಂಚಿತಗೊಳಿಸಿ ದೂರ ಇಡಲಾಗಿದೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರೇ 3 ಸಲ ಸಭೆ ಕೈಗೊಂಡು ಸರಕಾರದ ಆದೇಶದ ಅನ್ವಯ ಸಂಚಿತ ವೇತನ ನೀಡುವಂತೆ ಸೂಚಿಸಿದ್ದರೂ ಈವರೆಗೂ ಕವಿವಿ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಲಕ್ಷéವಹಿಸಿಲ್ಲ ಎಂದು ದೂರಲಾಗಿದೆ.
ಕಾರ್ಮಿಕರಿಗೆ ಈವರೆಗೂ ಬಾಕಿ ವೇತನ ನೀಡದೇ ಕಾರ್ಮಿಕ ಕಾಯ್ದೆ ಸಹ ಅನುಷ್ಠಾನಗೊಳಿಸದೇ ಸೌಲಭ್ಯಗಳಿಂದ ವಂಚಿತಗೊಳಿಸಲಾಗಿದೆ. ಇದೆಲ್ಲದರ ಕುರಿತು ಎಸ್‌ಸಿ, ಎಸ್‌ಟಿ ಆಯೋಗ, ಸಚಿವರು ಹಾಗೂ ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಗೂ ಮನವಿ ಸಲ್ಲಿಸಲಾಗಿದೆ.
ಸರಕಾರ ಆದೇಶ ನೀಡಿದ್ದರೂ ಅದಕ್ಕೆ ಮಣೆ ಹಾಕದೇ ವಿವಿ ಹೊಸದಾಗಿ ಟೆಂಡರ್ ಕರೆದು ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿರುವ ದಲಿತ ಕಾರ್ಮಿಕ ಹಾಗೂ ಕುಟುಂಬಗಳನ್ನು ಬೀದಿ ಪಾಲು ಮಾಡುವ ಸಂಚು ರೂಪಿಸಿದೆ ಎಂದು ಆರೋಪಿಸಲಾಗಿದೆ. ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಯ್ಯ ಸಾಕೇನವರ, ಸುನಂದಾ ಮಾದರ, ಗಂಗಾಧರ ಪೆರೂರ, ಲಕ್ಷ್ಮಣ ಬಕ್ಕಾಯಿ, ಚಿಂತಮ್ಮ ಮಾದರ ಇದ್ದರು.