ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕೂಟದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಅವರು ಇನ್ನೂ ಪೂರ್ಣವಾಗಿ ಚೇತರಿಕೆ ಕಂಡಿಲ್ಲ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಅವರು ಮುಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅ.19ರಂದು ಬಾಂಗ್ಲಾದೇಶ ವಿರುದ್ಧದ ಪುಣೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಜಾರಿ ಬಿದ್ದ ಪರಿಣಾಮ ಅವರ ಎಡಪಾದಕ್ಕೆ ಗಂಭೀರ ಏಟು ಬಿದ್ದಿತ್ತು. ಕೇವಲ 3 ಎಸೆತ ಎಸೆಯುವಷ್ಟರಲ್ಲಿ ಈ ದುರಂತ ಸಂಭವಿಸಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕರೆದೊಯ್ಯಲಾಯಿತು.
ಬುಧವಾರ ಲಭಿಸಿದ ಮಾಹಿತಿ ಪ್ರಕಾರ ಅವರ ಪಾದದ ನೋವು ಇನ್ನೂ ಸಂಪೂರ್ಣ ವಾಸಿಯಾಗಿಲ್ಲ. “ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಊತ ಕಡಿಮೆ ಆಗುತ್ತಿದೆ. ಆದರೆ ಬೌಲಿಂಗ್ ನಡೆಸಲು ವಾರಾಂತ್ಯದ ತನಕ ಕಾಯಬೇಕು. ಅವರ ಚೇತರಿಕೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕಾದ ಅಗತ್ಯವಿದೆ’ ಎಂಬುದಾಗಿ ಎನ್‌ಸಿಎ ಮೂಲಗಳು ಪಿಟಿಐಗೆ ತಿಳಿಸಿವೆ.
ಇದನ್ನೂ ಓದಿ:Wildlife Protection Act:ವನ್ಯಜೀವಿ ಕೂದಲು, ನವಿಲಿನ ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ…
ಅ.22ರಂದು ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡಿರಲಿಲ್ಲ. ಭಾರತದ ಮುಂದಿನ ಪಂದ್ಯ ಇರುವುದು ಭಾನುವಾರಕ್ಕೆ. ಎದುರಾಳಿ ಇಂಗ್ಲೆಂಡ್. ಈ ಪಂದ್ಯಕ್ಕೆ ಪಾಂಡ್ಯ ಲಭ್ಯರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಹುಸಿಯಾಗಿದೆ. ನ.2ರಂದು ಭಾರತ-ಶ್ರೀಲಂಕಾ ಮುಖಾಮುಖೀಯಾಗಲಿದ್ದು, ಈಗಿನ ಸ್ಥಿತಿಯಂತೆ ಪಾಂಡ್ಯ ಈ ಪಂದ್ಯದಲ್ಲಿ ಆಡುವುದೂ ಅನುಮಾನ.
ಶಮಿ ಡೌಟು: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಶಮಿ ಐದು ವಿಕೆಟ್ ಕಿತ್ತು ಮಿಂಚಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಶಮಿ ಆಡುವುದು ಅನುಮಾನ ಎನ್ನಲಾಗಿದೆ. ಲಕ್ನೋ ಪಿಚ್ ನಿಧಾನಗತಿಯಿಂದ ಕೂಡಿದ ಕಾರಣ ಶಮಿ ಬದಲು ಆರ್.ಅಶ್ವಿನ್ ಅವರನ್ನು ಆಡಿಸಬಹುದು ಎನ್ನಲಾಗಿದೆ.