Advertisement
ಇಂಗ್ಲೆಂಡನ್ನೇ ಮಣಿಸಿ ಈ ಬಾರಿಯ ವಿಶ್ವಕಪ್‌ನಲ್ಲಿ “ಕನಸಿನ ಓಟ’ ಆರಂಭಿಸಿದ ಭಾರತ, ಸೆಮಿಫೈನಲ್‌ನಲ್ಲಿ ಹಾಲಿ ಹಾಗೂ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನೇ ಬಗ್ಗುಬಡಿದು ಪ್ರಶಸ್ತಿ ಸುತ್ತಿಗೆ ನೆಗೆದದ್ದು ಅಮೋಘ ಸಾಧನೆಯಾಗಿ ದಾಖಲಾಗಿದೆ. ಈ ಹಾದಿಯಲ್ಲಿ ಪಾಕಿಸ್ಥಾನ, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡಿಗೆ ಸೋಲಿನ ರುಚಿ ತೋರಿಸಿದ ಭಾರತ, ನಡುವಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ಇನ್ನೊಂದೆಡೆ ಇಂಗ್ಲೆಂಡ್ ತಂಡ ಭಾರತದೆದುರು ಎಡವಿದ ಬಳಿಕ ಮತ್ತೆ ಸೋಲಿನ ಮುಖವನ್ನೇ ಕಾಣಲಿಲ್ಲ. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ 4ನೇ ವಿಶ್ವಕಪ್ ಪ್ರಶಸ್ತಿಗೆ ಹೊಂಚು ಹಾಕಿ ಕುಳಿತಿದೆ.
Related Articles
Advertisement
ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ವಿರುದ್ಧ ಸೋತಾಗ ಭಾರತ ಸ್ವಲ್ಪ ಒತ್ತಡಕ್ಕೆ ಸಿಲುಕಿದ್ದು ಸುಳ್ಳಲ್ಲ. ಆದರೆ ನ್ಯೂಜಿಲ್ಯಾಂಡ್ ವಿರುದ್ಧ ಇದನ್ನು ತೋರಿಸಿಕೊಳ್ಳದೇ ಮುನ್ನುಗ್ಗಿತು. ನಾಕೌಟ್ ಪ್ರವೇಶಿಸಬೇಕಾದರೆ ಭಾರತಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು. ಇದನ್ನು ಅಧಿಕಾರಯುತವಾಗಿಯೇ ಸಾಧಿಸಿತು. ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್ ಪಂದ್ಯವಂತೂ ಅವಿಸ್ಮರಣೀಯ. ಹರ್ಮನ್‌ಪ್ರೀತ್ ಎಂಬ ಸುಂಟರಗಾಳಿ ಹಾಲಿ ಚಾಂಪಿಯನ್ನರನ್ನೇ ಗುಡಿಸಿ ಹಾಕಿತು! ಇದೇ ಆಕ್ರಮಣಕಾರಿ ಆಟವನ್ನು ರವಿವಾರದ ಫೈನಲ್‌ನಲ್ಲೂ ತೋರ್ಪಡಿಸಿದರೆ ಭಾರತಕ್ಕೆ ಚಾಂಪಿಯನ್ ಪಟ್ಟ ಖಚಿತ ಎಂಬುದು ಕ್ರಿಕೆಟ್ ಪಂಡಿತರ ಲೆಕಾಚಾರ. ಇಂಥದೊಂದು ಸಾಮರ್ಥ್ಯವನ್ನು ಖಂಡಿತವಾಗಿಯೂ ಮಿಥಾಲಿ ಟೀಮ್ ಹೊಂದಿದೆ.
ಇಂಗ್ಲೆಂಡಿಗೆ ತವರಿನ ಲಾಭ?3 ಬಾರಿಯ ಚಾಂಪಿಯನ್ ಇಂಗ್ಲೆಂಡಿಗೆ ಇದು 7ನೇ ಫೈನಲ್ ಆದರೂ, ತವರಿನಲ್ಲೇ ಫೈನಲ್ ಆಡುವುದಿದ್ದರೂ ಹೀತರ್ ನೈಟ್ ಪಡೆಯನ್ನು ಯಾರೂ ನೆಚ್ಚಿನ ತಂಡವಾಗಿ ಗುರುತಿಸಿಲ್ಲ. ಕಾರಣ ಅನೇಕ. ಇಂಗ್ಲೆಂಡ್ ಈ ಕೂಟದಲ್ಲಿ ಭಾರತದ ವಿರುದ್ಧ ಈಗಾಗಲೇ ಒಂದು ಸೋಲನುಭವಿಸಿದೆ. ತವರಿನ ತಂಡವಾದರೂ ಇದು ಲಾಭವಾಗುವ ಬದಲು ಒತ್ತಡವಾಗಿ ಪರಿಣಮಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಭಾರತ ಹೆಚ್ಚು ಅಪಾಯಕಾರಿಯಾಗಿ ಬೆಳೆದಿರುವುದು ಹಾಗೂ ನಿರ್ಣಾಯಕ ಪಂದ್ಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡುವುದು ಕೂಡ ಇಂಗ್ಲೆಂಡಿಗೆ ಮಾರಕವಾಗಿ ಪರಿಣಮಿಸಬಹುದು. ಇನ್ನೊಂದು ವಾಸ್ತವ ಸಂಗತಿ-ಇಂಗ್ಲೆಂಡ್ ತಂಡ ಆಸ್ಟ್ರೇಲಿಯದಷ್ಟು ಬಲಿಷ್ಠವಲ್ಲ! ಆದರೆ ಇದು ಲಾರ್ಡ್ಸ್‌ನಲ್ಲಿ ನಡೆಯುವ ಮೊದಲ ಪಂದ್ಯವಾದ್ದರಿಂದ ಇಲ್ಲಿನ ಪಿಚ್ ಬಗ್ಗೆ ನಿಖರವಾಗಿ ಅಂದಾಜಿಸಲಾಗುತ್ತಿಲ್ಲ. ಆದರೂ ಭಾರತ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದು 250ರಷ್ಟು ರನ್ ಪೇರಿಸಿದರೆ ಹೆಚ್ಚು ಸುರಕ್ಷಿತ ಎಂಬುದೊಂದು ಲೆಕ್ಕಾಚಾರ. ಭಾರತದ ವನಿತೆಯರಿಗೆ 2ನೇ ಫೈನಲ್
ವನಿತಾ ವಿಶ್ವಕಪ್ ಕ್ರಿಕೆಟ್ ಅಂದರೆ ಅಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನದೇ ಪ್ರಾಬಲ್ಯ. ಈವರೆಗಿನ 10 ವಿಶ್ವಕಪ್ ಕೂಟಗಳಲ್ಲಿ ಆಸ್ಟ್ರೇಲಿಯ ಸರ್ವಾಧಿಕ 6 ಸಲ ಚಾಂಪಿಯನ್ ಆಗಿ ಮೂಡಿಬಂದಿದೆ. ಇಂಗ್ಲೆಂಡ್ 3 ಸಲ ಪ್ರಶಸ್ತಿ ಎತ್ತಿದೆ. ಒಮ್ಮೆ ನ್ಯೂಜಿಲ್ಯಾಂಡ್ ವನಿತೆಯರು ಕಪ್ ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್ ಅಪ್ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಸಮಬಲ ಸಾಧಿಸಿವೆ. ಇವು ತಲಾ 3 ಸಲ ಫೈನಲ್‌ನಲ್ಲಿ ಮುಗ್ಗರಿಸಿವೆ. ಆಸ್ಟ್ರೇಲಿಯ 2 ಸಲ ಪ್ರಶಸ್ತಿ ಸುತ್ತಿಗೆ ಬಂದು ಎಡವಿದೆ. ಉಳಿದಂತೆ ಭಾರತ ಮತ್ತು ವೆಸ್ಟ್ ಇಂಡೀಸ್ ಒಮ್ಮೆ ಫೈನಲ್‌ಗೆ ಲಗ್ಗೆ ಇರಿಸಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿವೆ. ಭಾರತಕ್ಕೆ ಇದು 2ನೇ ಫೈನಲ್. ಇದಕ್ಕೂ ಮುನ್ನ 2005ರ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಸುತ್ತಿಗೆ ನೆಗೆದಿತ್ತು. ಸೆಂಚುರಿಯನ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯ 98 ರನ್ನುಗಳಿಂದ ಗೆದ್ದು ಭಾರತದ ಪ್ರಶಸ್ತಿ ಕನಸನ್ನು ಛಿದ್ರಗೊಳಿಸಿತ್ತು. ಅಂದು ಕೂಡ ಮಿಥಾಲಿ ರಾಜ್ ಅವರೇ ಭಾರತ ತಂಡದ ನಾಯಕಿಯಾಗಿದ್ದರು. ಆಸ್ಟ್ರೇಲಿಯವನ್ನು ಮುನ್ನಡೆಸಿದವರು ಬೆಲಿಂಡಾ ಕ್ಲಾರ್ಕ್. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಕರೆನ್ ರೋಲ್ಟನ್ ಅವರ ಅಮೋಘ ಶತಕ (ಅಜೇಯ 107) ಹಾಗೂ ಲೀಸಾ ಸ್ಥಾಲೇಕರ್ ಅವರ ಅರ್ಧ ಶತಕದ ನೆರವಿನಿಂದ (55) 4 ವಿಕೆಟಿಗೆ 215 ರನ್ ಗಳಿಸಿತು. ಜವಾಬಿತ್ತ ಭಾರತ 46 ಓವರ್‌ಗಳಲ್ಲಿ 117 ರನ್ನಿಗೆ ಕುಸಿಯಿತು. ಇಲ್ಲಿ ಮೇಲುಗೈ ಸಾಧಿಸಿದ್ದು ಕಾಂಗರೂಗಳ ಪ್ರಚಂಡ ಫೀಲ್ಡಿಂಗ್. ಭಾರತದ ನಾಲ್ವರು ರನೌಟಾಗಿ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ಕ್ಯಾಥರಿನ್ ಫಿಟ್ಸ್‌ಪ್ಯಾಟ್ರಿಕ್ ಮತ್ತು ಶೆಲ್ಲಿ ನಿಶೆR ತಲಾ 2 ವಿಕೆಟ್ ಕಿತ್ತರು. ಭಾರತದ ಸರದಿಯಲ್ಲಿ 29 ರನ್ ಮಾಡಿದ ಆರಂಭಿಕ ಆಟಗಾರ್ತಿ ಅಂಜು ಜೈನ್ ಅವರದೇ ಸರ್ವಾಧಿಕ ಗಳಿಕೆ. ಅಮಿತಾ ಶರ್ಮ 22 ರನ್ ಮಾಡಿದರು. 12 ವರ್ಷಗಳ ಹಿಂದೆ ವನಿತಾ ವಿಶ್ವಕಪ್ ಆಡಿದ ಭಾರತದ ತಂಡದ ಇಬ್ಬರು ಸದಸ್ಯರು ಈ ಸಲವೂ ಮುಖ್ಯ ಭೂಮಿಕೆಯಲ್ಲಿರುವುದು ವಿಶೇಷ. ಇವರೆಂದರೆ, ನಾಯಕಿ ಮಿಥಾಲಿ ರಾಜ್ ಮತ್ತು ವೇಗಿ ಜೂಲನ್ ಗೋಸ್ವಾಮಿ. ಉಳಿದಂತೆ ಭಾರತದ ಇತರೆಲ್ಲ ಆಟಗಾರ್ತಿಯರಿಗೂ ಇದು ಮೊದಲ ವಿಶ್ವಕಪ್ ಫೈನಲ್. ತಂಡಗಳು
ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಪೂನಂ ರಾವತ್, ದೀಪ್ತಿ ಶರ್ಮ, ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಪೂನಂ ಯಾದವ್, ಮೋನಾ ಮೆಶ್ರಮ್, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್, ಸುಷ್ಮಾ ವರ್ಮ, ಮಾನ್ಸಿ ಜೋಶಿ, ನುಝತ್ ಪರ್ವೀನ್. ಇಂಗ್ಲೆಂಡ್: ಹೀತರ್ ನೈಟ್ (ನಾಯಕಿ), ಟ್ಯಾಮಿ ಬೇಮಾಂಟ್, ಕ್ಯಾಥರಿನ್ ಬ್ರಂಟ್, ಜಾರ್ಜಿಯಾ ಎಲ್ವಿಸ್, ಜೆನ್ನಿ ಗನ್, ಅಲೆಕ್ಸ್ ಹಾಟಿÉì, ಡೇನಿಯಲ್ ಹ್ಯಾಜೆಲ್, ಬೆತ್ ಲ್ಯಾಂಗ್‌ಸ್ಟನ್, ಲಾರಾ ಮಾರ್ಷ್, ಅನ್ಯಾ ಶ್ರಬೊÕàಲ್, ನತಾಲಿ ಶಿವರ್, ಸಾರಾ ಟಯ್ಲರ್, ಫ್ರಾನ್ ವಿಲ್ಸನ್, ಡೇನಿಯಲ್ ವ್ಯಾಟ್, ಲಾರೆನ್ ವಿನ್‌ಫೀಲ್ಡ್.
ಆರಂಭ: ಮಧ್ಯಾಹ್ನ 3.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್
ವರ್ಷ ಸ್ಥಳ ಫಲಿತಾಂಶ
1973 ಬರ್ಮಿಂಗಂ ಆಸ್ಟ್ರೇಲಿಯ ವಿರುದ್ಧ 92 ರನ್ ಜಯ
1978 ಹೈದರಾಬಾದ್ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ ಸೋಲು
1982 ಕ್ರೈಸ್ಟ್‌ಚರ್ಚ್ ಆಸ್ಟ್ರೇಲಿಯ ವಿರುದ್ಧ 3 ವಿಕೆಟ್ ಸೋಲು
1988 ಮೆಲ್ಬರ್ನ್ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ ಸೋಲು
1993 ಲಾರ್ಡ್ಸ್ ನ್ಯೂಜಿಲ್ಯಾಂಡ್ ವಿರುದ್ಧ 67 ರನ್ ಜಯ
2009 ಸಿಡ್ನಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಜಯ
ಒಟ್ಟು: ಫೈನಲ್-6, ಚಾಂಪಿಯನ್-3, ರನ್ನರ್ ಅಪ್-3 ವಿಶ್ವಕಪ್ ಫೈನಲ್‌ನಲ್ಲಿ ಭಾರತ
ವರ್ಷ ಸ್ಥಳ ಫಲಿತಾಂಶ
2005 ಸೆಂಚುರಿಯನ್ ಆಸ್ಟ್ರೇಲಿಯ ವಿರುದ್ಧ 98 ರನ್ ಸೋಲು
ಒಟ್ಟು: ಫೈನಲ್-1, ಚಾಂಪಿಯನ್-0, ರನ್ನರ್ ಅಪ್-1 ಗೆಲುವಿನ ವಿಶ್ವಾಸದಲ್ಲಿ ಮಿಥಾಲಿ ಕುಟುಂಬ
ವನಿತಾ ವಿಶ್ವಕಪ್‌ನಲ್ಲಿ 2ನೇ ಸಲ ಭಾರತವನ್ನು ಫೈನಲ್‌ಗೆ ತಂದು ನಿಲ್ಲಿಸಿರುವ ನಾಯಕಿ ಮಿಥಾಲಿ ರಾಜ್, ಈ ಬಾರಿ ಕಪ್ ಎತ್ತಿಕೊಂಡೇ ತಾಯ್ನಾಡಿಗೆ ಮರಳುತ್ತಾರೆ ಎಂಬ ವಿಶ್ವಾಸ ಅವರ ಹೆತ್ತವರದ್ದು. ಈ ಸಂದರ್ಭದಲ್ಲಿ ನ್ಯೂಸ್ ಚಾನೆಲ್ ಒಂದರ ಜತೆ ಮಾತಾಡಿದ ಮಿಥಾಲಿ ತಂದೆ ದೊರೈ ರಾಜ್, “ಭಾರತ ತಂಡ ಮೊದಲ ಪಂದ್ಯದಿಂದಲೇ ಅಮೋಘ ಆಟವಾಡುತ್ತ ಬಂದಿದೆ. ಇದು ಈವರೆಗೆ ವಿಶ್ವಕಪ್‌ನಲ್ಲಿ ಪ್ರತಿನಿಧಿಸಿರುವ ಭಾರತದ ತಂಡಗಳಲ್ಲೇ ಅತ್ಯಂತ ಬಲಿಷ್ಠ. ಹೀಗಾಗಿ ಭಾರತ ವಿಶ್ವಕಪ್ ಗೆಲ್ಲುವ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ’ ಎಂದಿದ್ದಾರೆ. “ತಂಡದ ಆಟಗಾರ್ತಿಯರು ಹಿಂದಿನ ಗೆಲುವುಗಳಿಂದ ಅತಿಯಾದ ಆತ್ಮವಿಶ್ವಾಸದಲ್ಲಿ ಮುಳುಗಿರಬಾರದು. ತಂಡದ ಬ್ಯಾಟಿಂಗ್ ಸರದಿ ಸಶಕ್ತವಾಗಿದೆ. ಸ್ಮತಿ, ಮಿಥಾಲಿ, ದೀಪ್ತಿ, ಹರ್ಮನ್‌ಪ್ರೀತ್… ಇವರೆಲ್ಲ ಈವರೆಗೆ ಆಡಿದ ರೀತಿ ನೋಡಿದರೆ ಇಂಗ್ಲೆಂಡಿಗೆ ಕಠಿನ ಸಮಯ ಎದುರಾಗಿದೆ ಎಂದೇ ಹೇಳಬೇಕಾಗುತ್ತದೆ. ಫೈನಲ್‌ನಲ್ಲಿ ಸ್ಮತಿ ಮಂಧನಾ ಅಮೋಘ ಆರಂಭ ಒದಗಿಸಲಿದ್ದಾರೆ ಎಂದು ನನ್ನ 6ನೇ ಇಂದ್ರಿಯ ಹೇಳುತ್ತಿದೆ…’ ಎಂದು ದೊರೈ ರಾಜ್ ಹೇಳಿದರು. ಇಡೀ ತಂಡದ ಸಾಧನೆ ಬಗ್ಗೆ ತನಗೆ ಹೆಮ್ಮೆ ಇದೆ ಎಂದವರು ಮಿಥಾಲಿ ತಾಯಿ ಲೀಲಾ. “ಆಸ್ಟ್ರೇಲಿಯ ವಿರುದ್ಧ ಹರ್ಮನ್‌ಪ್ರೀತ್ ಅದೆಂಥ ಬ್ಯಾಟಿಂಗ್ ನಡೆಸಿದರು! ಎಲ್ಲರೂ ಇದೇ ಸ್ಪಿರಿಟ್‌ನಲ್ಲಿ ಆಡಿದರೆ ಭಾರತಕ್ಕೆ ವಿಶ್ವಕಪ್ ಖಂಡಿತ. ನಮ್ಮವರು ಒಂದು ತಂಡವಾಗಿ ಆಡುತ್ತಿದ್ದಾರೆ. ಇದೊಂದು ಹೆಚ್ಚುಗಾರಿಕೆ. ಫೈನಲ್‌ನಲ್ಲಿ ಎಲ್ಲರೂ ಸ್ವಲ್ಪ ಹೆಚ್ಚಿನ ಶ್ರಮ ಹಾಕಿ ಆಡಬೇಕಿದೆ…’ ಎಂದು ಲೀಲಾ ಹೇಳಿದರು. ಹರ್ಮನ್‌ಪ್ರೀತ್ ಗಾಯಾಳು
ರವಿವಾರ ವಿಶ್ವಕಪ್ ಫೈನಲ್ ಆಡಲಿರುವ ಭಾರತಕ್ಕೆ ಆಘಾತವೊಂದು ಎದುರಾಗಿದೆ. ಆಸ್ಟ್ರೇಲಿಯ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಮನ್‌ಪ್ರೀತ್ ಕೌರ್ ಶನಿವಾರದ ಬ್ಯಾಟಿಂಗ್ ಅಭ್ಯಾಸದ ವೇಳೆ ಬಲ ಭುಜದ ನೋವಿಗೆ ಸಿಲುಕಿದ್ದಾರೆ. ಆದರೆ ಕೌರ್ ಲವಲವಿಕೆಯಿಂದಲೇ ಇದ್ದುದನ್ನು ಕಂಡಾಗ ಇದೇನೂ ಗಂಭೀರ ಸಮಸ್ಯೆ ಅಲ್ಲ ಎಂದೇ ಭಾವಿಸಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ. ರವಿವಾರ ಬೆಳಗ್ಗೆ ಕೌರ್ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬಹುದು.