Advertisement

ಐಸಿಸಿ ವನಿತಾ ವಿಶ್ವಕಪ್‌: ಭಾರತೀಯ ವನಿತೆಯರಿಗೆ ಸೋಲು

03:55 AM Jul 09, 2017 | |

ಲೆಸ್ಟರ್‌: ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ಭಾರತೀಯ ವನಿತೆಯರು ಮೊದಲ ಸೋಲನ್ನು ಕಂಡಿದ್ದಾರೆ. ಸತತ ನಾಲ್ಕನೇ ಗೆಲುವು ಸಾಧಿಸಿದ್ದ ಭಾರತೀಯ ವನಿತೆಯರು ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 115 ರನ್ನುಗಳಿಂದ ಸೋಲನ್ನು ಕಂಡಿದ್ದಾರೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ಲಿಝೆಲ್‌ ಲೀ ಮತ್ತು ಡೇನ್‌ ವಾನ್‌ ನೀಕೆರ್ಕ್‌ ಅವರ ಅರ್ಧಶತಕದಿಂದಾಗಿ 9 ವಿಕೆಟಿಗೆ 273 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಆರಂಭಿಕ ಕುಸಿತ ಕಂಡ ಭಾರತವು ದೀಪ್ತಿ ಶರ್ಮ ಮತ್ತು ಜೂಲನ್‌ ಗೋಸ್ವಾಮಿ ಅವರ ಪ್ರಯತ್ನದಿಂದಾಗಿ 46 ಓವರ್‌ಗಳವರೆಗೆ ಸಾಗಿ 158 ರನ್‌ ಗಳಿಸಿ ಆಲೌಟಾಯಿತು. ಈ  ಪಂದ್ಯದಲ್ಲಿ ಭಾರತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿತು.

ಆರಂಭಿಕ ಪೂನಂ ರಾವತ್‌, ದೀಪ್ತಿ ಶರ್ಮ, ಜೂಲನ್‌ ಗೋಸ್ವಾಮಿ ಮತ್ತು ಏಕ್ತ ಬಿಷ್ಟ್ ಮಾತ್ರ ಎರಡಂಕೆಯ ಮೊತ್ತ ಗಳಿಸಲು ಯಶಸ್ವಿಯಾದರು. ದ್ವಿತೀಯ ವಿಕೆಟ್‌ ಪತನದ ಬಳಿಕ ನಾಟಕೀಯ ಕುಸಿತ ಕಂಡ ಭಾರತ 65 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಅಂದರೆ 18 ರನ್‌ ಅಂತರದಲ್ಲಿ ತಂಡದ ಆರು ವಿಕೆಟ್‌ ಉರುಳಿತ್ತು. ದೀಪ್ತಿ ಶರ್ಮ ಮತ್ತು ಜೂಲನ್‌ ಗೋಸ್ವಾಮಿ 8ನೇ ವಿಕೆಟಿಗೆ 53 ರನ್‌ ಪೇರಿಸಿದ್ದರಿಂದ ಭಾರತದ ಮೊತ್ತ ನೂರರ ಗಡಿ ದಾಟುವಂತಾಯಿತು. ದೀಪ್ತಿ ಶರ್ಮ 8ನೆಯವರಾಗಿ ಔಟಾಗುವಾಗ 60 ರನ್‌ ಗಳಿಸಿದ್ದರು. 111 ಎಸೆತ ಎದುರಿಸಿದ್ದ ಅವರು 5 ಬೌಂಡರಿ ಬಾರಿಸಿದ್ದರು. ಗೋಸ್ವಾಮಿ 43 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಬ್ಯಾಟಿಂಗ್‌ನಲ್ಲಿ ಅರ್ಧಶತಕ ದಾಖಲಿಸಿದ್ದ ನೀಕೆರ್ಕ್‌ ಬೌಲಿಂಗ್‌ನಲ್ಲಿಯೂ ಬಿಗು ದಾಳಿ ಸಂಘಟಿಸಿದರು. ತನ್ನ 10 ಓವರ್‌ಗಳ ದಾಳಿಯಲ್ಲಿ ಕೇವಲ 22 ರನ್‌ ನೀಡಿ 4 ವಿಕೆಟ್‌ ಕಿತ್ತು ಭಾರತದ ಕುಸಿತಕ್ಕೆ ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next