Advertisement

ಡ್ಯಾನ್ಸರ್‌ ಆಗಬೇಕಿದ್ದ ಮಿಥಾಲಿ ಕ್ರಿಕೆಟರ್‌ ಆದ ಕತೆ…

03:45 AM Jul 10, 2017 | |

ಚೆನ್ನೈ: ಭಾರತ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕಿರಿಯ ವಯಸ್ಸಿನಲ್ಲಿ ಡ್ಯಾನ್ಸರ್‌ ಆಗುವ ಕನಸು ಕಂಡಿದ್ದರು. ಆದರೆ ಬಳಿಕ ಆದದ್ದು ಕ್ರಿಕೆಟರ್‌. ವಿಶ್ವವೇ ಬೆರಗುಗೊಳಿಸುವ ರೀತಿಯಲ್ಲಿ ಅವರು ಬ್ಯಾಟಿಂಗ್‌ ಮಾಡುತ್ತಿದ್ದಾರೆ.

Advertisement

ಸಣ್ಣ ವಯಸ್ಸಿನಲ್ಲಿ ಡ್ಯಾನ್ಸರ್‌ ಆಗಿದ್ದ ಅವರು ಕ್ರಿಕೆಟರ್‌ ಆಗಿ ಬೆಳೆದದ್ದು ಹೇಗೆ, ರನ್‌ ಮಳೆ ಹರಿಸಿ ಸಾಧನೆಗಳ ಮೇಲೆ ಸಾಧನೆ ಮಾಡುತ್ತಿರುವುದು ಹೇಗೆ… ಮಿಥಾಲಿ ತಂದೆ ದೊರೈ ರಾಜ್‌ ಈ ಕುತೂಹಲವನ್ನು ಅಭಿಮಾನಿಗಳ ಮುಂದೆ ತೆರೆದಿರಿಸಿದ್ದಾರೆ.

“ನನ್ನ ಮಗನನ್ನು ಕ್ರಿಕೆಟ್‌ ತರಬೇತಿ ಶಿಬಿರಕ್ಕೆ ಹಾಕಿದ್ದೆ. ಮಗಳು ಮಿಥಾಲಿ ಸ್ವಲ್ಪ ಸೋಮಾರಿ ಸ್ವಭಾವದವಳು. ಅವಳನ್ನು ಬೆಳಗ್ಗೆ ಬೇಗ ಏಳಿಸುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ ಅವಳ ಸಹೋದರನ ಜತೆಗೆ ಇವಳನ್ನೂ ಕ್ರಿಕೆಟ್‌ ಶಿಬಿರಕ್ಕೆ ಸೇರಿಸಿದೆ. ನನ್ನ ಸ್ನೇಹಿತರಾಗಿರುವ ಜ್ಯೋತಿ ಪ್ರಕಾಶ್‌ ಮಾರ್ಗದರ್ಶನದಲ್ಲಿ ಅವರು ಪಳಗಿದರು. ಅನಂತರ ಅವಳು ಹಿಂದೆ ತಿರುಗಿ ನೋಡಿದ ಪ್ರಶ್ನೆಯೇ ಇಲ್ಲ’ ಎಂದು ಅವರ ತಂದೆ ದೊರೈ ರಾಜ್‌ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಯಿ ಲೀಲಾ, “ಆರಂಭದಲ್ಲಿ ಮಗಳು ಕ್ರಿಕೆಟ್‌ ಆಡಲು ಹೋಗುವುದನ್ನು ನಾನು ವಿರೋಧಿಸಿದ್ದೆ. ಮುಖಕ್ಕೆ ಗಾಯವಾದರೆ ಮದುವೆ ಮಾಡಿಕೊಳ್ಳಲು ಯಾರು ಮುಂದಕ್ಕೆ ಬರುತ್ತಾರೆ ಎಂದು ಎಲ್ಲರೂ ನನ್ನನ್ನು ಪ್ರಶ್ನಿಸುತ್ತಿದ್ದರು. ಸಹಜವಾಗಿಯೇ ನಾನು ಆತಂಕಕ್ಕೊಳಗಾದೆ. ಈಗ ಮಗಳು ಬೆಳೆದಿರುವ ರೀತಿ ನೋಡಿ ಸಂತೋಷವಾಗುತ್ತದೆ…’ ಎಂದರು.

“ಒಮ್ಮೆ ಮಿಥಾಲಿ ಹುಡುಗರ ತಂಡದ ಜತೆ ಕ್ರಿಕೆಟ್‌ ಆಡುತ್ತಿದ್ದಳು. ಮುಖಕ್ಕೆ ಚೆಂಡು ಬಡಿದು ಗಂಭೀರ ಗಾಯವಾಯಿತು. 4 ಹೊಲಿಗೆ ಕೂಡ ಹಾಕಲಾಯಿತು. ಆದರೆ ಮರುದಿನವೇ ಅವಳು ಅಂಗಳಕ್ಕಿಳಿದು ಮತ್ತೆ ಕ್ರಿಕೆಟ್‌ ಆಡತೊಡಗಿದಳು…’ ಎಂದು ತಂದೆ ದೊರೈರಾಜ್‌ ಅಂದಿನ ಘಟನೆಯೊಂದನ್ನು ನೆನಪಿಸಿಕೊಂಡರು.

Advertisement

ಈಗ ಮಿಥಾಲಿ ರಾಜ್‌ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಜತೆಗೆ ಮಿಥಾಲಿ ಸಾಧನೆಯೂ ಗಮನಾರ್ಹ ಮಟ್ಟದಲ್ಲಿದೆ. ಸರ್ವಾಧಿಕ ರನ್ನಿನ ವಿಶ್ವದಾಖಲೆಯ ಸಮೀಪದಲ್ಲಿದ್ದಾರೆ. ಭಾರತ ತಂಡದ ಸೆಮಿಫೈನಲ್‌ ಸಾಧ್ಯತೆಯೂ ಉಜ್ವಲಗೊಂಡಿದೆ. ಉಳಿದ ಲೀಗ್‌ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯ ವಿರುದ್ಧ ಗೆದ್ದು ಅಧಿಕಾರಯುತವಾಗಿ ಮಿಥಾಲಿ ಪಡೆ ಉಪಾಂತ್ಯ ಪ್ರವೇಶಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next