Advertisement

ಐಸಿಸಿ ವನಿತಾ ಟಿ20 : ಭಾರತಕ್ಕೆ ಇಂದು ಬಾಂಗ್ಲಾ ಸವಾಲು

10:06 AM Feb 25, 2020 | sudhir |

ಪರ್ತ್‌: ಐಸಿಸಿ ವನಿತಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು 17 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿರುವ ಭಾರತವು ಸೋಮವಾರ ನಡೆಯುವ “ಎ’ ಬಣದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದಕ್ಕಿಂತ ಮೊದಲು ಆಸ್ಟ್ರೇಲಿಯ ತಂಡವು ಶ್ರೀಲಂಕಾ ವಿರುದ್ಧ ಸೆಣಸಾಟ ನಡೆಸಲಿದೆ.

Advertisement

“ಎ’ ಬಣದಲ್ಲಿ ತನ್ನ ಮೊದಲ ಪಂದ್ಯವನ್ನಾಡಲಿರುವ ಬಾಂಗ್ಲಾ ಸವಾಲನ್ನು ಮೆಟ್ಟಿನಿಂತರೆ ಭಾರತದ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಬಲಿಷ್ಠ ಭಾರತ
ಭಾರತವು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವನ್ನು ಅವರದೇ ನೆಲದಲ್ಲಿ ಉರುಳಿಸಿರುವುದು ಇದಕ್ಕೆ ಸಾಕ್ಷಿ. ಬಿಗು ಬೌಲಿಂಗ್‌ ದಾಳಿಯ ಬಲದಿಂದ ಭಾರತ ಅಲ್ಪ ಮೊತ್ತದ ಈ ಸೆಣಸಾಟದಲ್ಲಿ ಆಸ್ಟ್ರೇಲಿಯನ್ನು 17 ರನ್ನುಗಳಿಂದ ಕೆಡಹಿ ಅಮೋಘ ಪರಾಕ್ರಮ ಮೆರೆದಿದೆ.

ಆಸೀಸ್‌ ನೆಲದಲ್ಲಿ ಸ್ಪಿನ್‌ ದಾಳಿ ಸಂಘಟಿಸುವುದು ಅಷ್ಟು ಸುಲಭದ ಮಾತಲ್ಲ. ಮೂವರು ಸ್ಪಿನ್ನರ್‌ಗಳಿರುವುದು ಭಾರತಕ್ಕೆ ಪ್ಲಸ್‌ ಪಾಯಿಂಟ್‌. ಈ ಮೂವರ ಬಲದಿಂದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಆಸೀಸ್‌ ವಿರುದ್ಧದ ಗೆಲುವೇ ಉತ್ತಮ ನಿದರ್ಶನ.

ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ ಮತ್ತು ಶಿಖಾ ಪಾಂಡೆ ಅವರ ಘಾತಕ ಬೌಲಿಂಗ್‌ ದಾಳಿಯನ್ನು ಈ ಪಂದ್ಯದಲ್ಲಿಯೂ ನಿರೀಕ್ಷಿಸಲಾಗಿದೆ. ಉಳಿದಂತೆ ಕೀಪರ್‌ ತನಿಯಾ ಭಾಟಿಯ ಅವರ ಮಿಂಚಿನ ಸ್ಟಂಪಿಂಗ್‌ ಕೂಡ ಭಾರತಕ್ಕೆ ಸಹಕಾರಿಯಾಗಲಿದೆ. ಕಳೆದ ಪಂದ್ಯದಲ್ಲಿ ಫೀಲ್ಡಿಂಗ್‌ ನಡೆಸುವಾಗ ಎಡ ಬುಜಕ್ಕೆ ಗಾಯ ಮಾಡಿಕೊಂಡ ಸ್ಮತಿ ಮಂಧನಾ ಸಂಪೂರ್ಣ ಚೇತರಿಸಿಕೊಂಡಿದ್ದು ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

Advertisement

ಅನುಭವಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬ್ಯಾಟಿಂಗ್‌ ಬರ ಅನುಭವಿಸುತ್ತಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಈ ಆಟಗಾರರು ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದೇ ಆದಲ್ಲಿ ಭಾರತಕ್ಕೆ ಗೆಲುವು ನಿಶ್ಚಿತ. ಉಳಿದಂತೆ ಶಫಾಲಿ ವರ್ಮ ಮತ್ತು ದೀಪ್ತಿ ಶರ್ಮ ಉತ್ತಮ ಫಾರ್ಮ್ ನಲ್ಲಿರುವುದು ಭಾರತಕ್ಕೆ ಬಲ ತಂದಿದೆ.

ಅಪಾಯಕಾರಿ ಬಾಂಗ್ಲಾ
ಬಾಂಗ್ಲಾದೇಶವನ್ನು ಅಷ್ಟೊಂದು ಸುಲಭವಾಗಿ ಕಡೆಗಣಿಸುವಂತಿಲ್ಲ. ಬಾಂಗ್ಲಾ ಕೂಡ ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವ ಅನುಭವಿ ತಂಡವಾಗಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಭಾರತ ಯಾವ ರೀತಿಯಲ್ಲಿ ಆಡಿದೆ ಎನ್ನುವುದನ್ನು ಗಮನಿಸಿದ ಬಾಂಗ್ಲಾ ಭಾರತವನ್ನು ಕಟ್ಟಿಹಾಕಲು ಉತ್ತಮ ತಂತ್ರವನ್ನು ರೂಪಿಸಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗಾಗಿ ಭಾರತ ಎಚ್ಚರಿಕೆಯಿಂದ ಆಡವಾಡುವುದು ಅಗತ್ಯ.

ದುರ್ಬಲರೆಂದು ಕಡೆಗಣಿಸಿದರೆ ಆಪತ್ತು ಎದುರಾ ಗುವುದು ಖಚಿತ.
ಬಾಂಗ್ಲಾದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗ ಸಮರ್ಥ ವಾಗಿದೆ. ಆರಂಭಿಕ ಆಟಗಾರ್ತಿ ಯರಾದ ಆಯಿಸಾ ರೆಹಮಾನ್‌ ಮತ್ತು ವಿಕೆಟ್‌ ಕೀಪರ್‌ ನಿಗರ್‌ ಸುಲ್ತಾನ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ ನಲ್ಲಿದ್ದಾರೆ. ಉಳಿದಂತೆ ನಾಯಕಿ ಸಲ್ಮಾ ಖಾತುನ್‌, ಫ‌ರ್ಗಾನ ಹೋಕ್‌ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್‌ನಲ್ಲಿ ಫಾತಿಮಾ ಖಾತುನ್‌, ಖದಿಜಾ ಕುರ್ಬ, ಜಹಾನರ ಆಲಂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಬ್ಯಾಟಿಂಗ್‌ ಬಗ್ಗೆ ಗಮನ
ಭಾರತ ಮತ್ತು ಬಾಂಗ್ಲಾ ನಡುವೆ ಈ ಹಿಂದೆ ನಡೆದ ಐದು ಪಂದ್ಯಗಳಲ್ಲಿ ಭಾರತ 3ರಲ್ಲಿ ಜಯಿಸಿದ್ದರೆ ಎರಡರಲ್ಲಿ ಸೋತಿದೆ. ವಿಶ್ವಕಪ್‌ಗೆ
ಮುಂಚಿತವಾಗಿ ನಡೆದ ತ್ರಿಕೋನ ಸರಣಿಯ ಕೆಲವು ಪಂದ್ಯಗಳನ್ನು ಹೊರತುಪಡಿಸಿ ಇನ್ನುಳಿದ ಪಂದ್ಯಗಳಲ್ಲಿ ಭಾರತೀಯ ತಂಡ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದೆ. ಇದು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲೂ ಸಾಬೀತಾಗಿದೆ. ಆದರೆ ಉತ್ತಮ ಬೌಲಿಂಗ್‌ನಿಂದಾಗಿ ಭಾರತ ಅಲ್ಪ ಮೊತ್ತವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ವಿಶ್ವಕಪ್‌ ಗೆಲ್ಲಬೇಕಾದರೆ ಬ್ಯಾಟಿಂಗ್‌ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಮತ್ತು ಇನ್ನಷ್ಟು ಬಲಿಷ್ಠಗೊಳ್ಳಲು ಪ್ರಯತ್ನಿಸಬೇಕಾಗಿದೆ.

ಲಂಕಾ-ಆಸೀಸ್‌ ಮುಖಾಮುಖೀ
ದಿನದ ಮೊದಲ ಪಂದ್ಯದಲ್ಲಿ ಆಸೀಸ್‌ ಮತ್ತು ಲಂಕಾ ಮುಖಾಮುಖೀಯಾಗಲಿದ್ದು ಇತ್ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಮೊದಲ ಪಂದ್ಯವನ್ನು ಸೋತಿರುವ ಎರಡೂ ತಂಡಗಳು ಈ ಪಂದ್ಯದಲ್ಲಿ ಗೆದ್ದರಷ್ಟೆ ಸೆಮಿಫೈನಲ್‌ ರೇಸ್‌ ಜೀವಂತವಾಗಿರಿಸಲು ಸಾಧ್ಯ. ಈಗಾಗಲೇ “ಎ’ ವಿಭಾಗದಲ್ಲಿ ಕಿವೀಸ್‌ ಮತ್ತು ಭಾರತ ತಲಾ ಎಂದು ಪಂದ್ಯವನ್ನು ಗೆದ್ದು ಮೊದಲ ಮತ್ತು ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯ ಅತ್ಯಂತ ರೋಚಕವಾಗಿ ಸಾಗುವ ಸಾಧ್ಯತೆ ಹೆಚ್ಚಿದೆ.

ದಕ್ಷಿಣ ಆಫ್ರಿಕಾಕ್ಕೆ ಗೆಲುವು
ಪರ್ತ್‌, ಫೆ. 23: ದಕ್ಷಿಣ ಆಫ್ರಿಕಾದ ವನಿತೆಯರು ಐಸಿಸಿ ವನಿತಾ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದರು. ಇಂಗ್ಲೆಂಡ್‌ 8 ವಿಕೆಟಿಗೆ 123 ರನ್‌ ಗಳಿಸಿದ್ದರೆ ದಕ್ಷಿಣ ಆಫ್ರಿಕಾ ವನಿತೆಯರು 19.4 ಓವರ್‌ಗಳಲ್ಲಿ 4 ವಿಕೆಟಿಗೆ 127 ರನ್‌ ಗಳಿಸಿ ಜಯಭೇರಿ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next