ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ನೂತನ ವನಿತಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತದ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಬ್ಯಾಟಿಂಗ್ ವಿಭಾಗದಲ್ಲಿ ನಂ. ವನ್ ಸ್ಥಾನ ಅಲಂಕರಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಮತಿ ಮಂಧನಾ 4ನೇ ಶತಕ ಹಾಗೂ ಅಜೇಯ 90 ರನ್ ಸಿಡಿಸಿ ಭಾರತದ ಸರಣಿ ಗೆಲುವಿಗೆ ಕಾರಣರಾಗಿದ್ದರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಮಂಧನಾ ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಹಾಗೂ ಮೆಗ್ ಲ್ಯಾನ್ನಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಮತಿ ಮಂಧನಾ ಕೆಲವು ದಿನಗಳ ಹಿಂದೆ ಐಸಿಸಿ ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದರು.
ಭಾರತ ವಿರುದ್ಧದ ಸರಣಿಯಲ್ಲಿ ಸತತ ಅರ್ಧಶತಕ ಬಾರಿಸಿದ ನ್ಯೂಜಿಲ್ಯಾಂಡ್ ತಂಡದ ಆ್ಯಮಿ ಸ್ಯಾಟರ್‌ವೈಟ್ 10 ಸ್ಥಾನಗಳ ಏರಿಕೆ ಕಂಡು 4ನೇ ಸ್ಥಾನ ಸಂಪಾದಿಸಿದ್ದರೆ, ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಒಂದು ಸ್ಥಾನ ಜಾರಿ 5ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 81 ರನ್ ಬಾರಿಸಿದ ಭಾರತ ತಂಡದ ಯುವ ಆಟಗಾರ್ತಿ ಜೆಮಿಮಿ ರೋಡ್ರಿಗಸ್ 6ನೇ ಸ್ಥಾನದಲ್ಲಿದ್ದಾರೆ.
ಈ ಮೂಲಕ ಭಾರತೀಯ ಪುರುಷರಂತೆ ವನಿತೆಯರೂ ರ್‍ಯಾಂಕಿಂಗ್‌ನಲ್ಲಿಯೂ ಪ್ರಾಬಲ್ಯ ಮೆರೆದಿದ್ದಾರೆ. ಪುರುಷರ ರ್‍ಯಾಂಕಿಂಗ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ಪೂನಮ್ ಯಾದವ್ ಹಾಗೂ ದೀಪ್ತಿ ಶರ್ಮ 5 ಸ್ಥಾನಗಳ ಏರಿಕೆ ಕಂಡಿದ್ದು, ಕ್ರಮವಾಗಿ 8 ಹಾಗೂ 9 ಸ್ಥಾನದಲ್ಲಿದ್ದಾರೆ. ಏಕ್ತಾ ಬಿಷ್ಟಾ 9 ಸ್ಥಾನ ಜಿಗಿತ ಕಂಡು 13 ಸ್ಥಾನದಲ್ಲಿದ್ದಾರೆ. ಜೂಲನ್ ಗೋಸ್ವಾಮಿ ಒಂದು ಸ್ಥಾನ ಏರಿಕೆಯೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
ಟಾಪ್ 5 ಬ್ಯಾಟ್ಸ್‌ವುಮನ್
1. ಸ್ಮತಿ ಮಂಧನಾ 751
2. ಎಲ್ಲಿಸ್ ಪೆರ್ರಿ 681
3. ಮೆಗ್ ಲ್ಯಾನ್ನಿಂಗ್ 675
4. ಆ್ಯಮಿ ಸ್ಯಾಟರ್‌ವೈಟ್ 669
5. ಮಿಥಾಲಿ ರಾಜ್ 669
ಟಾಪ್ 5 ಬೌಲರ್
1. ಸನಾ ಮಿರ್ 663
2. ಮೇಘನಾ ಷಟ್ 660
3. ಮರಿಜಾನ್ನೆ ಕಾಪ್ 643
4. ಜೂಲನ್ ಗೋಸ್ವಾಮಿ 639
5. ಜೆಸ್ ಜೊನಾಸ್ಸೆನ್ 636