Advertisement

ಭಾರತದ ದಾಳಿಗೆ ದಿಕ್ಕು ತಪ್ಪಿದ ಇಂಗ್ಲೆಂಡ್‌

12:30 AM Feb 23, 2019 | Team Udayavani |

ಮುಂಬಯಿ: ಐಸಿಸಿ ವನಿತಾ ಚಾಂಪಿಯನ್‌ ಶಿಪ್‌ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಇಂಗ್ಲೆಂಡನ್ನು 66 ರನ್ನುಗಳಿಂದ ಪರಾಭವಗೊಳಿಸಿದೆ. ಸಣ್ಣ ಮೊತ್ತದ ಈ ಸೆಣಸಾಟ ದಲ್ಲಿ ಭಾರತದ ಬೌಲಿಂಗ್‌ ಪಡೆ ಘಾತಕ ದಾಳಿ ಸಂಘಟಿಸಿ ಪ್ರವಾಸಿ ಗರನ್ನು ಕಟ್ಟಿಹಾಕಿತು. 

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 49.4 ಓವರ್‌ಗಳಲ್ಲಿ 202 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಇಂಗ್ಲೆಂಡ್‌ 41 ಓವರ್‌ಗಳಲ್ಲಿ 136ಕ್ಕೆ ಸರ್ವಪತನ ಕಂಡಿತು. ಎಡಗೈ ಸ್ಪಿನ್ನರ್‌ ಏಕ್ತಾ ಬಿಷ್ಟ್ 25 ರನ್ನಿತ್ತು 4 ವಿಕೆಟ್‌ ಉಡಾಯಿಸಿದರೆ, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್‌ ಉರುಳಿಸಿ ಆಂಗ್ಲರ ಆಟ ಮುಗಿಸಿದರು.

ನಿಧಾನ ಗತಿಯ ಚೇಸಿಂಗ್‌ ನಡೆಸಿದ ಇಂಗ್ಲೆಂಡ್‌ 14ನೇ ಓವರ್‌ ವೇಳೆ 38 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಕುಂಟುತ್ತಿತ್ತು. ನಾಯಕಿ ಹೀತರ್‌ ನೈಟ್‌ (ಔಟಾಗದೆ 39) ಮತ್ತು ನಥಾಲಿ ಸಿವರ್‌ (44) 31ನೇ ಓವರ್‌ ತನಕ ಕ್ರೀಸಿನಲ್ಲುಳಿದು 73 ರನ್‌ ಜತೆಯಾಟ ನಡೆಸಿದರು. ಆಗ ಇಂಗ್ಲೆಂಡಿಗೆ ಗೆಲುವಿನ ಭರವಸೆ ಇತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್‌ ನಾಟಕೀಯ ಕುಸಿತ ಕಂಡಿತು. 25 ರನ್‌ ಅಂತರದಲ್ಲಿ ಕೊನೆಯ 7 ವಿಕೆಟ್‌ ಹಾರಿಹೋಯಿತು. ನಾಯಕಿ ನೈಟ್‌ಗೆ ಇನ್ನೊಂದು ಕಡೆಯಿಂದ ಬೆಂಬಲ ಸಿಗಲೇ ಇಲ್ಲ.

ಉತ್ತಮ ಆರಂಭ, ಬಳಿಕ ಕುಸಿತ
ಎಂದಿನಂತೆ ಆರಂಭಿಕರಾದ ಸ್ಮತಿ ಮಂಧನಾ-ಜೆಮಿಮಾ ರೋಡ್ರಿಗಸ್‌ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನವಿತ್ತರು. ನಿಧಾನ ಗತಿಯ ಆಟವಾಡಿದರೂ ಮೊದಲ ವಿಕೆಟಿಗೆ 15.1 ಓವರ್‌ಗಳಿಂದ 69 ರನ್‌ ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು. ಜೆಮಿಮಾ 58 ಎಸೆತಗಳಿಂದ 48 ರನ್‌ ಹೊಡೆದು ಭಾರತೀಯ ಸರದಿಯ ಸರ್ವಾಧಿಕ ಸ್ಕೋರರ್‌ ಎನಿಸಿದರು. ಇದು 8 ಬೌಂಡರಿಗಳನ್ನು ಒಳಗೊಂಡಿತ್ತು. ಮಂಧನಾ 42 ಎಸೆತ ಎದುರಿಸಿ 24 ರನ್‌ ಮಾಡಿದರು (3 ಬೌಂಡರಿ). ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಕ್ಷಿಪ್ರ ಕುಸಿತ ಕಂಡಿತು. 22 ಓವರ್‌ ಮುಕ್ತಾಯಕ್ಕೆ 95 ರನ್ನಿಗೆ 5 ವಿಕೆಟ್‌ ಉರುಳಿತು. ದೀಪ್ತಿ ಶರ್ಮ 7 ರನ್‌, ಹಲೀìನ್‌ ಡಿಯೋಲ್‌ 2 ರನ್ನಿಗೆ ಔಟಾದರೆ, ಮೋನಾ ಮೆಶ್ರಮ್‌ ಖಾತೆಯನ್ನೇ ತೆರೆಯಲಿಲ್ಲ.

ನೆರವಿಗೆ ನಿಂತ ಮಿಥಾಲಿ
ಈ ಹಂತದಲ್ಲಿ ತಂಡದ ನೆರವಿಗೆ ಬಂದವರು ನಾಯಕಿ ಮಿಥಾಲಿ ರಾಜ್‌. 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಮಿಥಾಲಿ 42ನೇ ಓವರ್‌ ತನಕ ಆಂಗ್ಲರ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿ 74 ಎಸೆತಗಳಿಂದ 44 ರನ್‌ ಹೊಡೆದರು (4 ಬೌಂಡರಿ). 

Advertisement

ಅನುಭವಿ ಜೂಲನ್‌ ಗೋಸ್ವಾಮಿ 30 ರನ್‌ (37 ಎಸೆತ, 3 ಬೌಂಡರಿ, ಪಂದ್ಯದ ಏಕೈಕ ಸಿಕ್ಸರ್‌), ವಿಕೆಟ್‌ ಕೀಪರ್‌ ತನಿಯಾ ಭಾಟಿಯಾ 25 ರನ್‌ ಹೊಡೆದು ಭಾರತದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮಿಥಾಲಿ-ತನಿಯಾ ಜೋಡಿಯಿಂದ 6ನೇ ವಿಕೆಟಿಗೆ 54 ರನ್‌ ಹರಿದು ಬಂತು. ತಲಾ 2 ವಿಕೆಟ್‌ ಉರುಳಿಸಿದ ಜಾರ್ಜಿಯಾ ಎಲ್ವಿಸ್‌, ನಥಾಲಿ ಸಿವರ್‌ ಮತ್ತು ಸೋಫಿ ಎಕ್‌ಸ್ಟೋನ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌ಗಳು. 

ಸರಣಿಯ 2ನೇ ಪಂದ್ಯ ಸೋಮವಾರ ಇದೇ ಅಂಗಳದಲ್ಲಿ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರ್‌: ಭಾರತ-49.4 ಓವರ್‌ಗಳಲ್ಲಿ 202 (ಜೆಮಿಮಾ 48, ಮಿಥಾಲಿ 44, ಜೂಲನ್‌ 30, ತನಿಯಾ 25, ಮಂಧನಾ 24, ಎಕ್‌ಸ್ಟೋನ್‌ 27ಕ್ಕೆ 2, ಸಿವರ್‌ 29ಕ್ಕೆ 2, ಎಲ್ವಿಸ್‌ 45ಕ್ಕೆ 2).
ಇಂಗ್ಲೆಂಡ್‌-41 ಓವರ್‌ಗಳಲ್ಲಿ 136 (ಸಿವರ್‌ 44, ನೈಟ್‌ ಔಟಾಗದೆ 39, ಬಿಷ್ಟ್ 25ಕ್ಕೆ 4, ಪಾಂಡೆ 21ಕ್ಕೆ 2, ದೀಪ್ತಿ 33ಕ್ಕೆ 2).
 

Advertisement

Udayavani is now on Telegram. Click here to join our channel and stay updated with the latest news.

Next