ದುಬಾೖ: ಭಾರತ-ಪಾಕಿಸ್ಥಾನ ಒಳಗೊಂಡ ನಾಲ್ಕು ರಾಷ್ಟ್ರಗಳ ಸರಣಿ ನಡೆಸಬೇಕು ಎಂಬ ಪಾಕಿಸ್ಥಾನದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.
ಈ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ಐಸಿಸಿ ಮುಂದೆ ಒಂದು ಪ್ರಸ್ತಾವನೆ ಇಟ್ಟಿದ್ದರು. ಭಾರತ-ಪಾಕಿಸ್ಥಾನ ಹೊರತುಪಡಿಸಿ ಬೇರೊಂದು ಕಡೆಯಲ್ಲಿ ನಾಲ್ಕು ರಾಷ್ಟ್ರಗಳನ್ನು ಒಳಗೊಂಡ ಸರಣಿ ನಡೆಸಬೇಕು ಎಂಬುದು ರಾಜಾ ಅವರ ಬೇಡಿಕೆಯಾಗಿತ್ತು. ಆದರೆ, ಇಂಥ ಸರಣಿ ನಡೆಸಲು ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ.
ರವಿವಾರ ಮುಗಿದ ಐಸಿಸಿ ಸಭೆಯಲ್ಲಿ ಬೇರೆ ಕೆಲವು ನಿರ್ಧಾರಗಳೂ ಹೊರಬಿದ್ದಿವೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಐಸಿಸಿ ಕ್ರಿಕೆಟ್ ಕಮಿಟಿಯೊಳಗೆ ಸೇರ್ಪಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ಥಾನದ ಪ್ರಸ್ತಾವ ತಳ್ಳಿಹಾಕಿರುವುದು ವಿಶೇಷ.
ಇನ್ನು ಐಸಿಸಿ ಹಾಲಿ ಅಧ್ಯಕ್ಷ ಗ್ರೇಗರ್ ಅವರು ಅಕ್ಟೋಬರ್ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ. ಸದ್ಯ ಇವರು ಪುನರಾಯ್ಕೆ ಬಯಸಿಲ್ಲ. ಇವರ ಸ್ಥಾನಕ್ಕೆ ಕಾರ್ಯದರ್ಶಿ ಜಯ್ ಶಾ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ, ಐಸಿಸಿ ನೇತೃತ್ವ ವಹಿಸಿಕೊಳ್ಳಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲೂ ಭಾರತಕ್ಕೆ ಸಮಯ ಸಿಕ್ಕಂತಾಗಿದೆ. ಅಲ್ಲದೆ, ನ್ಯಾ| ಲೋಧಾ ಕಮಿಟಿಯ ಶಿಫಾರಸಿನಂತೆ ಅಲ್ಲಿಯವರೆಗೆ ಸೌರವ್ ಗಂಗೂಲಿ ಮತ್ತು ಜಯ್ ಶಾ ಹುದ್ದೆಯಲ್ಲಿ ಇರುತ್ತಾರೆಯೇ ಎಂಬುದನ್ನೂ ನೋಡಬೇಕಾಗಿದೆ. ಏಕೆಂದರೆ, ಈ ಸೆಪ್ಟಂಬರ್‌ಗೆà ಇವರ ಅವಧಿ ಮುಗಿಯಲಿದೆ.