ಮೌಂಟ್ ಮಾಂಗನಿ: ಮೂರು ಬಾರಿಯ ಚಾಂಪಿಯನ್ ಭಾರತವು “ಬಿ’ ಬಣದಲ್ಲಿ ನಡೆದ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ತಂಡವನ್ನು 10 ವಿಕೆಟ್‌ಗಳಿಂದ ಸದೆಬಡಿದು ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಕೂಟದ ಕ್ವಾರ್ಟರ್‌ಫೈನಲಿಗೇರಿತು.
ನಾಯಕ ಪೃಥ್ವಿ ಶಾ ಅವರ ಆಕರ್ಷಕ ಅರ್ಧಶತಕ ಮತ್ತು ಸ್ಪಿನ್ನರ್ ಅನುಕುಲ್ ರಾಯ್ ಅವರ ಚೊಚ್ಚಲ 5 ವಿಕೆಟ್‌ಗಳ ಸಂಭ್ರಮದಿಂದ ಭಾರತ ಭರ್ಜರಿ ಗೆಲುವು ಕಾಣುವಂತಾಯಿತು. ರಾಯ್ ಅವರ ಮಾರಕ ದಾಳಿಗೆ ತತ್ತರಿಸಿದ ಪುಪುವಾ 21.5 ಓವರ್‌ಗಳಲ್ಲಿ ಕೇವಲ 64 ರನ್ನಿಗೆ ಆಲೌಟಾಯಿತು. ಬಿಗು ದಾಳಿ ಸಂಘಟಿಸಿದ ರಾಯ್ ತನ್ನ 6.5 ಓವರ್‌ಗಳ ದಾಳಿಯಲ್ಲಿ ಕೇವಲ 14 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಅವರು ಪಂದ್ಯ ವೊಂದರಲ್ಲಿ 5 ವಿಕೆಟ್ ಕಿತ್ತಿರುವುದು ಇದೇ ಮೊದಲು.
2014ರ ಬಳಿಕ ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ಆಡಿದ ಪಪುವಾ ನ್ಯೂ ಗಿನಿ ತಂಡವು ಭಾರತದ ತೀಕ್ಷ್ಣ ದಾಳಿಗೆ ನೆಲಕಚ್ಚಿತು. ಕೇವಲ ಮೂವರು ಆಟಗಾರರು ಎರಡಂಕೆಯ ಮೊತ್ತ ತಲುಪಿದರು. ಇದರಿಂದ ತಂಡ 64 ರನ್ ಗಳಿಸಿ ಆಲೌಟಾಯಿತು. ಇದು ಈ ಕೂಟದ ನಿಕೃಷ್ಟ ಮೊತ್ತವಾಗಿದೆ. ಒವಿಯ ಸ್ಯಾಮ್ (15), ನಾಯಕ ಸಿಮೋನ್ ಅಟಾಯ್ (13) ಮತ್ತು ಸಿನಕ ಅರುವ (12) ಎರಡಂಕೆಯ ಮೊತ್ತ ಗಳಿಸಿದ ಆಟಗಾರರಾಗಿದ್ದಾರೆ.
ಗೆಲ್ಲಲು 65 ರನ್ ಗಳಿಸುವ ಅವಕಾಶ ಪಡೆದ ಭಾರತ ಪೃಥ್ವಿ ಶಾ ಭರ್ಜರಿ ಆಟದಿಂದಾಗಿ ಕೇವಲ 8 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು. ಬಿರುಸಿನ ಆಟವಾಡಿದ ಶಾ 39 ಎಸೆತ ಎದುರಿಸಿ 57 ರನ್ ಗಳಿಸಿ ಅಜೇಯರಾಗಿ ಉಳಿದರು. 12 ಬೌಂಡರಿ ಬಾರಿಸಿ ರಂಜಿಸಿದರು. ಇದರಿಂದಾಗಿ ಈ ಪಂದ್ಯ ಕೇವಲ 30 ಓವರ್‌ಗಳಲ್ಲಿಯೇ ಮುಗಿದು ಹೋಯಿತು.
ಭಾರತ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 100 ರನ್ನುಗಳಿಂದ ಸೋಲಿಸಿತ್ತು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತವು ಜ. 19ರಂದು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು; ಪಪುವಾ ನ್ಯೂ ಗಿನಿ 21.5 ಓವರ್‌ಗಳಲ್ಲಿ 64 ಆಲೌಟ್ (ಒವಿಯ ಸ್ಯಾಮ್ 15, ಅನುಕುಲ್ ರಾಯ್ 14ಕ್ಕೆ 5, ಶಿವ ಂ ಮವಿ 16ಕ್ಕೆ 2); ಭಾರತ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 67 (ಪೃಥ್ವಿ ಶಾ 57 ಔಟಾಗದೆ).