ಹೊಸದಿಲ್ಲಿ: ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಭಾರತ ಗೆದ್ದ ಕಾರಣ ನೂತನ ಐಸಿಸಿ ಟ್ವೆಂಟಿ20 ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನ ಮತ್ತೆ ನಂಬರ್ ವನ್ ಸ್ಥಾನಕ್ಕೇರಿತು. ಸರಣಿ ಗೆದ್ದರೂ ಭಾರತ ಐದನೇ ಸ್ಥಾನದಲ್ಲಿಯೇ ಉಳಿಯಿತು.
ಒಟ್ಟು 124 ಅಂಕ ಹೊಂದಿರುವ ಪಾಕಿಸ್ಥಾನ ಅಗ್ರಸ್ಥಾನ ಪಡೆದರೆ ಒಂದಂಕ ಕಡಿಮೆ ಹೊಂದಿರುವ ನ್ಯೂಜಿಲ್ಯಾಂಡ್ ದ್ವಿತೀಯ ಸ್ಥಾನದಲ್ಲಿದ್ದರೆ ವೆಸ್ಟ್‌ಇಂಡೀಸ್ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮತ್ತು ಭಾರತ ಅನುಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟ್ವೆಂಟಿ20 ಪಂದ್ಯ ಗೆದ್ದಾಗ ಪಾಕಿಸ್ಥಾನ ಮೊದಲ ಬಾರಿ ನಂಬರ್ ವನ್ ಸ್ಥಾನಕ್ಕೇರಿತ್ತು. ಇದೀಗ ಭಾರತ ಸರಣಿ ಗೆದ್ದಾಗ ಮತ್ತೆ ನಂಬರ್ ವನ್ ಪಟ್ಟ ಅಲಂಕರಿಸಿತು. ಸಫìರಾಜ್ ಅಹ್ಮದ್ ನಾಯಕತ್ವದ ಪಾಕಿಸ್ಥಾನ ತಂಡ ಕಳೆದ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ವೆಸ್ಟ್‌ಇಂಡೀಸ್ ತಂಡವನ್ನು ಕೆರಿಬಿಯನ್‌ನಲ್ಲಿ 3-1 ಅಂತರದಿಂದ ಸೋಲಿಸಿದ ಬಳಿಕ ಪಾಕಿಸ್ಥಾನವು ವಿಶ್ವ ಇಲೆವೆನ್ ತಂಡವನ್ನು 2-1ರಿಂದ ಮತ್ತು ಶ್ರೀಲಂಕಾವನ್ನು 3-0 ಅಂತರದಿಂದ ಕೆಡಹಿತ್ತು.