ದುಬಾೖ: ಬುಧವಾರ ಮಧ್ಯಾಹ್ನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದ್ದ ಭಾರತ ತಂಡದ ಸಂತೋಷವುಳಿದಿದ್ದು ಕೇವಲ 4 ಗಂಟೆಗಳು ಮಾತ್ರ!
ಇದ್ದಕ್ಕಿದ್ದಂತೆ ಐಸಿಸಿ ವೆಬ್‌ಸೈಟ್‌ನಲ್ಲಿ ಬದಲಾವಣೆ ಸಂಭವಿಸಿ ಮತ್ತೆ ಆಸ್ಟ್ರೇಲಿಯಕ್ಕೇ ನಂ.1 ಸ್ಥಾನ ನೀಡಲಾಯಿತು. ಇದಕ್ಕೆ ಐಸಿಸಿ ಲೆಕ್ಕಾಚಾರದಲ್ಲಾದ ತಾಂತ್ರಿಕ ದೋಷವೇ ಕಾರಣ ಎನ್ನಲಾಗಿದೆ. ಹಾಗಾಗಿ ಈ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿವೆ.
ಎಲ್ಲಕ್ಕಿಂತ ಮುಖ್ಯವಾಗಿದ್ದು 15 ಅಂಕಗಳನ್ನು ಕಳೆದುಕೊಂಡಿದ್ದ ಆಸೀಸ್ ಮತ್ತೆ ಮೇಲೇರಿದ್ದು ಹೇಗೆಂಬ ಪ್ರಶ್ನೆ. ಮಧ್ಯಾಹ್ನ 2.30ರ ಹೊತ್ತಿಗೆ ಭಾರತ ನಂ. 1 ಎಂದು ಐಸಿಸಿ ತೋರಿಸಿತ್ತು. ರಾತ್ರಿ 7ರ ಹೊತ್ತಿಗೆ ಆಸ್ಟ್ರೇಲಿಯ 126 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತ್ತು. ಭಾರತ 115 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿಯಿತು. ಈ 2ನೇ ತಿದ್ದುಪಡಿಯೂ ತಪ್ಪು ಎಂದು ಕೆಲವರು ಹೇಳಿದ್ದಾರೆ. ಮೊದಲ ಟೆಸ್ಟನ್ನು ಇನ್ನಿಂಗ್ಸ್ ಅಂತರದಿಂದ ಸೋತಿರುವುದರಿಂದ ಆಸ್ಟ್ರೇಲಿಯ 4 ಅಂಕಗಳನ್ನು ಕಳೆದುಕೊಂಡು 122ಕ್ಕೆ ಇಳಿಯುತ್ತದೆ. ಆದರೆ ಐಸಿಸಿ 2ನೇ ತಿದ್ದುಪಡಿಯಲ್ಲಿ 126 ಅಂಕ ಎಂದು ತೋರಿಸಲಾಗಿದೆ. ಭಾರತ ಗೆದ್ದಿರುವುದರಿಂದ 120 ಅಂಕ ಗಳಿಸಬೇಕಾಗುತ್ತದೆ. ವೆಬ್‌ನಲ್ಲಿ 115 ಅಂಕಗಳಿವೆ. ಇವೆಲ್ಲ ಐಸಿಸಿ ಲೆಕ್ಕಾಚಾರದಲ್ಲೇ ದೋಷವಿರುವುದನ್ನು ತೋರಿಸುತ್ತದೆ ಎಂದು ಟೀಕಿಸಲಾಗಿದೆ.
ಇಷ್ಟೆಲ್ಲದರ ಪರಿಣಾಮ ಭಾರತ ತನ್ನ ಐತಿಹಾಸಿಕ ಸಂತೋಷವನ್ನು ಕೆಲವೇ ಗಂಟೆಗಳಲ್ಲಿ ಕಳೆದುಕೊಂಡಿತು. ಈ ಮೊದಲು ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರೂ ಮಾದರಿಗಳಲ್ಲಿ ವಿಶ್ವದ ನಂ. 1 ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.