ದುಬಾೖ: ಇಂಗ್ಲೆಂಡ್ ಎದುರಿನ ಅಹ್ಮದಾಬಾದ್ ಪಿಂಕ್ ಟೆಸ್ಟ್ ಪಂದ್ಯವನ್ನು ಎರಡೇ ದಿನದಲ್ಲಿ ಗೆದ್ದ ಭಾರತವೀಗ ಚೊಚ್ಚಲ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ. ಗೆಲುವಿನ ಪ್ರತಿಶತನ ಸಾಧನೆ (71.0) ಮತ್ತು ಅಂಕ ಗಳಿಕೆಗಳೆರಡರಲ್ಲೂ (490) ಮೊದಲ ಸ್ಥಾನ ಅಲಂಕರಿಸಿದೆ. ಇದರೊಂದಿಗೆ ಟೀಮ್ ಇಂಡಿಯಾದ ಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ. ಕೊಹ್ಲಿ ಪಡೆ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು, ನ್ಯೂಜಿಲ್ಯಾಂಡ್ ವಿರುದ್ಧ ಲಾರ್ಡ್ಸ್ ಫೈನಲ್‌ನಲ್ಲಿ ಸೆಣಸಲಿದೆ.
ಇನ್ನೊಂದೆಡೆ ಸರಣಿಯಲ್ಲಿ ಹಿಂದುಳಿದ ಇಂಗ್ಲೆಂಡ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. 64.1 ಗೆಲುವಿನ ಪ್ರತಿಶತ ಸಾಧನೆ ಮತ್ತು 442 ಅಂಕ ಹೊಂದಿರುವ ಆಂಗ್ಲ ಪಡೆ 4ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯ 3ನೇ ಸ್ಥಾನಕ್ಕೆ ಏರಿದೆ. ಆಸೀಸ್ 69.2 ಗೆಲುವಿನ ಪರ್ಸಂಟೇಜ್ ಹಾಗೂ 332 ಅಂಕಗಳನ್ನು ಹೊಂದಿದೆ. ಆದರೆ ಫೈನಲ್ ಹಾದಿಯಲ್ಲಿ ಅಂಕ ಗಣನೆಗೆ ಬರುವುದಿಲ್ಲ. ಇಲ್ಲಿ ಗೆಲುವಿನ ಪ್ರತಿಶತ ಸಾಧನೆಯೊಂದೇ ಮಾನದಂಡ.
ಆಸ್ಟ್ರೇಲಿಯಕ್ಕೆ ಕ್ಷೀಣ ಅವಕಾಶ :
ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಇಂಗ್ಲೆಂಡನ್ನು ಫೈನಲ್ ರೇಸ್‌ನಿಂದ ಹೊರದಬ್ಬಿದೆ. ಇಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಜೋ ರೂಟ್ ಬಳಗದ ಮುಂದಿದೆ. ಅದು ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಕ್ಕೆ ತಂದದ್ದೇ ಆದಲ್ಲಿ ಭಾರತ ಫೈನಲ್ ಅವಕಾಶದಿಂದ ವಂಚಿತವಾಗಲಿದೆ. ಆದರೆ ಆಗ ಇಂಗ್ಲೆಂಡಿಗೇನೂ ಫೈನಲ್ ಟಿಕೆಟ್ ಲಭಿಸದು. ಈ ಅವಕಾಶ ಆಸ್ಟ್ರೇಲಿಯದ್ದಾಗಲಿದೆ (69.2). ಆಸೀಸ್ ಆಗ ದ್ವಿತೀಯ ಸ್ಥಾನಕ್ಕೆ ಏರಲಿದ್ದು, ಭಾರತ ಮೂರಕ್ಕೆ ಇಳಿಯಲಿದೆ.
ನ್ಯೂಜಿಲ್ಯಾಂಡ್ ಸುರಕ್ಷಿತ :
70.0 ಗೆಲುವಿನ ಪರ್ಸಂಟೇಜ್ ಸಾಧನೆಯೊಂದಿಗೆ ನ್ಯೂಜಿಲ್ಯಾಂಡ್ ಈಗಾಗಲೇ ಫೈನಲ್ ಪ್ರವೇಶಿಸಿದೆ. ಅಹ್ಮದಾಬಾದ್‌ನ ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶ ಕಿವೀಸ್ ಮೇಲೆ ಯಾವುದೇ ಪರಿಣಾಮ ಬೀರದು. ಅದೀಗ ದ್ವಿತೀಯ ಸ್ಥಾನದಲ್ಲಿದ್ದು, ಭಾರತ ಸೋತರಷ್ಟೇ ಅಗ್ರಸ್ಥಾನಕ್ಕೆ ನೆಗೆಯಲಿದೆ.