ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯು ಇಂದು 2023ರ ವರ್ಷದ ಟಿ20 ತಂಡವನ್ನು ಪ್ರಕಟಿಸಿದೆ. ಭಾರತದ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ತಂಡದ ನಾಯಕನಾಗಿ ಹೆಸರಿಸಲಾಗಿದೆ.
ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರು ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಾರಣ 2023ರಲ್ಲಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡದೇ ಇರುವುದು.
11 ಜನರ ತಂಡದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಜತೆಗೆ ಯಶಸ್ವಿ ಜೈಸ್ವಾಲ್, ಬೌಲರ್ ಗಳಾದ ರವಿ ಬಿಷ್ಣೋಯಿ ಮತ್ತು ಅರ್ಶದೀಪ್ ಸಿಂಗ್ ವರ್ಷದ ತಂಡದಲ್ಲಿದ್ದಾರೆ.
ಜಿಂಬಾಬ್ವೆಯ ಟಿ20 ನಾಯಕ ಸಿಕಂದರ್ ರಾಜಾ, ಉಗಾಂಡಾದ ಅಲ್ಪೇಶ್ ರಂಜಾನಿ ಮತ್ತು ಐರ್ಲೆಂಡ್ ನ ಮಾರ್ಕ್ ಅಡೈರ್ ಅವರು ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ರಂಜಾನಿ ಅವರು ಒಟ್ಟಾರೆ 2023ರಲ್ಲಿ 30 ಟಿ20 ಪಂದ್ಯಗಳಲ್ಲಿ ಕೇವಲ 4.77ರ ಎಕಾನಮಿಯಲ್ಲಿ 50 ವಿಕೆಟ್ ಕಬಳಿಸಿದ್ದಾರೆ. ಮಾರ್ಕ್ ಅಡೈರ್ ಅವರು 26 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಐಸಿಸಿ ಟಿ20 ತಂಡ 2023: ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪೂರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಜಾ, ಅಲ್ಪೇಶ್ ರಂಜಾನಿ, ಮಾರ್ಕ್ ಅಡೈರ್, ರವಿ ಬಿಷ್ಣೋಯಿ, ರಿಚರ್ಡ್ ಎನ್ ಗರವ, ಅರ್ಶದೀಪ್ ಸಿಂಗ್.