ದುಬೈ: ಐಸಿಸಿ ಟಿ 20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್, ಮಾಜಿ ನಾಯಕ ವಿರಾಟ್ ಕೊಹ್ಲಿ 14 ಸ್ಥಾನ ನೆಗೆತ ಸಾಧಿಸಿದ್ದು, 15 ನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಕೊಹ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಐದು ಪಂದ್ಯಗಳಲ್ಲಿ 276 ರನ್ ಕಲೆ ಹಾಕಿದ್ದರು. ಮೂರು ವರ್ಷಗಳ ನಂತರ ಮೊದಲ ಅಂತಾರಾಷ್ಟ್ರೀಯ ಶತಕವನ್ನು ದಾಖಲಿಸಿದ್ದರು.
ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ಥಾನ ವಿರುದ್ಧ 60 ರನ್ ಗಳಿಸಿ ನಾಲ್ಕು ಸ್ಥಾನಗಳನ್ನು ಗಳಿಸಿ ಪಟ್ಟಿಯಲ್ಲಿ 29 ನೇ ಸ್ಥಾನದಲ್ಲಿದ್ದರು.
ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್ (810) ಮೊದಲ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಅವರು 755 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡು ಅತ್ಯುತ್ತಮ ಸ್ಥಾನದಲ್ಲಿರುವ ಭಾರತೀಯ ಆಟಗಾರನಾಗಿ ಮುಂದುವರಿದಿದ್ದಾರೆ. ರೋಹಿತ್ ಶರ್ಮ 14 ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ನಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ 7 ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಇನ್ನೂ 792 ಅಂಕಗಳೊಂದಿಗೆ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅಗ್ರಸ್ಥಾನದಲ್ಲಿದ್ದಾರೆ, ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ (716) ಮತ್ತು ಇಂಗ್ಲೆಂಡ್‌ನ ಆದಿಲ್ ರಶೀದ್ (702) ನಂತರದ ಸ್ಥಾನದಲ್ಲಿದ್ದಾರೆ.
ಅಫ್ಘಾನಿಸ್ಥಾನದ ಮೊಹಮ್ಮದ್ ನಬಿ ಆಲ್‌ರೌಂಡರ್ ಅಗ್ರ ಸ್ಥಾನವನ್ನು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್‌ಗೆ ಬಿಟ್ಟುಕೊಟ್ಟಿದ್ದಾರೆ.