ಮುಂಬಯಿ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ಆಟಗಾರರನ್ನು ಉಗ್ರರು ಕೊಲೆ ನಡೆಸುವ ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯುಳ್ಳ ಇ-ಮೇಲ್ ಸಂದೇಶವೊಂದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಆ. 16ರಂದು ಅನಾಮಿಕ ಸಂದೇಶವೊಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕೃತ ಇ-ಮೇಲ್‌ಗೆ ಬಂದಿದೆ. ಸಂಭಾವ್ಯ ದಾಳಿಯ ಬಗ್ಗೆ ಪಿಸಿಬಿ ತಕ್ಷಣ ಐಸಿಸಿ ಗಮನಕ್ಕೆ ತಂದಿದೆ. ಮಾತ್ರವಲ್ಲ ಬಿಸಿಸಿಐಗೂ ಸಂದೇಶ ತಲುಪಿಸಿದೆ. ಬಿಸಿಸಿಐ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ವಿಷಯವನ್ನು ಮುಟ್ಟಿಸಿದೆ.
ಈ ನಿಟ್ಟಿನಲ್ಲಿ ಗೃಹ ಸಚಿವಾಲಯ ಕಾರ್ಯಪ್ರವೃತ್ತರಾಗಿದ್ದು, ಆ್ಯಂಟಿಗುವಾದಲ್ಲಿರುವ ಭಾರತ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಭದ್ರತೆ ಹೆಚ್ಚಿಸಲು ತಿಳಿಸಿದೆ. ಸದ್ಯ ವಿಂಡೀಸ್‌ನಲ್ಲಿ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಭಾರತ ತಂಡದ ಭದ್ರತೆಯನ್ನು ಐಸಿಸಿ ಬಿಗಿಗೊಳಿಸಿದೆ.
ಆಟಗಾರರು ತಂಗಿರುವ ಹೊಟೇಲ್, ಅಭ್ಯಾಸಕ್ಕೆ ತೆರಳುವ ಹಾದಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರು ಭಾರತ ಆಟಗಾರರ ಕೊಲೆ ಬೆದರಿಕೆ ಸಂದೇಶವನ್ನು ಪಿಸಿಬಿಗೆ ಏಕೆ ಕಳುಹಿಸಿದರು ಎನ್ನುವುದು ಕುತೂಹಲ ಕೆರಳಿಸಿದೆ.