Advertisement

ರ್‍ಯಾಂಕಿಂಗ್‌: ಕೊಹ್ಲಿಯೇ ನಂಬರ್‌ ವನ್‌

06:00 AM Dec 12, 2018 | Team Udayavani |

ದುಬಾೖ: ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್‌ ಟೆಸ್ಟ್‌ ಪಂದ್ಯದ ಬಳಿಕ ಐಸಿಸಿ ರ್‍ಯಾಂಕಿಂಗ್‌ ಯಾದಿಯನ್ನು ಪರಿಷ್ಕರಿಸಲಾಗಿದ್ದು, ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಯಾದಿಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲ್ಯಾಂಡಿನ ನಾಯಕ ಕೇನ್‌ ವಿಲಿಯಮ್ಸನ್‌ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. 

Advertisement

ವಿರಾಟ್‌ ಕೊಹ್ಲಿ 920 ಹಾಗೂ ವಿಲಿಯಮ್ಸನ್‌ 913 ಅಂಕ ಹೊಂದಿದ್ದಾರೆ. ನ್ಯೂಜಿಲ್ಯಾಂಡಿನ ಬ್ಯಾಟ್ಸ್‌ಮನ್‌ ಓರ್ವ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ 900 ಅಂಕ ಸಂಪಾದಿಸಿದ ಮೊದಲ ದೃಷ್ಟಾಂತ ಇದಾಗಿದೆ. ಇದಕ್ಕೂ ಮುನ್ನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಕಿವೀಸ್‌ನ ರಿಚರ್ಡ್‌ ಹ್ಯಾಡ್ಲಿ 900 ಪ್ಲಸ್‌ ಅಂಕ ಗಳಿಸಿದ ಸಾಧನೆಗೈದಿದ್ದರು (909). ವಿರಾಟ್‌ ಕೊಹ್ಲಿ ಅಡಿಲೇಡ್‌ನ‌ಲ್ಲಿ ಗಳಿಸಿದ್ದು 37 ರನ್‌ ಮಾತ್ರ. ಇದರಿಂದ ಅವರು 15 ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ಕೊಹ್ಲಿ-ವಿಲಿಯಮ್ಸನ್‌ ನಡುವೆ ಕೇವಲ 7 ಅಂಕಗಳ ಅಂತರವಿದೆ. 

ಇತ್ತೀಚೆಗಷ್ಟೇ ನ್ಯೂಜಿಲ್ಯಾಂಡ್‌ ತಂಡ ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ 2-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದಿತ್ತು. 49 ವರ್ಷಗಳ ಬಳಿಕ ಏಶ್ಯನ್‌ ತಂಡದ ವಿರುದ್ಧ ವಿದೇಶದಲ್ಲಿ ಟೆಸ್ಟ್‌ ಸರಣಿ ಗೆದ್ದ ಹಿರಿಮೆ ಕಿವೀಸ್‌ ತಂಡದ್ದಾಗಿತ್ತು. ಈ ಸರಣಿಯೊಂದಿಗೆ ನ್ಯೂಜಿಲ್ಯಾಂಡಿನ ಈ ವರ್ಷದ ಟೆಸ್ಟ್‌ ಆಟ ಮುಗಿದಿದೆ. ಕೇನ್‌ ವಿಲಿಯಮ್ಸನ್‌ ಈ ವರ್ಷದ 5 ಟೆಸ್ಟ್‌ಗಳಿಂದ 63.75ರ ಸರಾಸರಿಯಲ್ಲಿ 510 ರನ್‌ ಗಳಿಸಿದ್ದಾರೆ. ಇದರಲ್ಲಿ 228 ರನ್‌ ಪಾಕ್‌ ಎದುರಿನ ಕಳೆದ 3 ಪಂದ್ಯಗಳ ಸರಣಿಯಲ್ಲಿ ದಾಖಲಾಗಿತ್ತು.

ಪೂಜಾರ 4 ಸ್ಥಾನ ಜಿಗಿತ
ಅಡಿಲೇಡ್‌ನ‌ಲ್ಲಿ ಒಟ್ಟು 194 ರನ್‌ ಬಾರಿಸಿದ ಚೇತೇಶ್ವರ್‌ ಪೂಜಾರ ಆರರಿಂದ ಮೇಲೇರಿ 4ನೇ ಸ್ಥಾನಕ್ಕೆ ಬಂದಿದ್ದಾರೆ. ಅಜಿಂಕ್ಯ ರಹಾನೆ 2 ಸ್ಥಾನಗಳ ಪ್ರಗತಿ ಸಾಧಿಸಿದ್ದು, 17ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ. ರಿಷಬ್‌ ಪಂತ್‌ 7 ಸ್ಥಾನ ಮೇಲೇರಿ 59ನೇ ಸ್ಥಾನ ತಲುಪಿದ್ದಾರೆ. ಕೆ.ಎಲ್‌. ರಾಹುಲ್‌ (26), ಮುರಳಿ ವಿಜಯ್‌ (45), ರೋಹಿತ್‌ ಶರ್ಮ (53) ಅವರ ರ್‍ಯಾಂಕಿಂಗ್‌ನಲ್ಲಿ ಕುಸಿತ ಸಂಭವಿಸಿದೆ. ಆಸ್ಟ್ರೇಲಿಯದ ಉಸ್ಮಾನ್‌ ಖ್ವಾಜಾ (13), ಆರನ್‌ ಫಿಂಚ್‌ (89), ಶಾನ್‌ ಮಾರ್ಷ್‌ (38), ಟಿಮ್‌ ಪೇನ್‌ (55), ಟ್ರ್ಯಾವಿಸ್‌ ಹೆಡ್‌ (17) ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡಿನ ಹೆನ್ರಿ ನಿಕೋಲ್ಸ್‌  ಪ್ರಗತಿ ಸಾಧಿಸಿದ್ದಾರೆ.

ಬುಮ್ರಾ ಜೀವನಶ್ರೇಷ್ಠ “33′
ಬೌಲಿಂಗ್‌ ರ್‍ಯಾಂಕಿಂಗ್‌ನ ಟಾಪ್‌-10 ಯಾದಿಯಲ್ಲಿ ವಿಶೇಷ ಬದಲಾವಣೆ ಸಂಭವಿಸಿಲ್ಲ. ಅಡಿಲೇಡ್‌ನ‌ಲ್ಲಿ 6 ವಿಕೆಟ್‌ ಕಿತ್ತ ಜಸ್‌ಪ್ರೀತ್‌ ಬುಮ್ರಾ ಜೀವನಶ್ರೇಷ್ಠ 33ನೇ ರ್‍ಯಾಂಕಿಂಗ್‌ ಗಳಿಸಿದ್ದಾರೆ. ಕಾಗಿಸೊ ರಬಾಡ, ಜೇಮ್ಸ್‌ ಆ್ಯಂಡರ್ಸನ್‌ ಮತ್ತು ವೆರ್ನನ್‌ ಫಿಲಾಂಡರ್‌ ಮೊದಲ 3 ಸ್ಥಾನದಲ್ಲಿದ್ದಾರೆ. ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು (116), ಪರಾಜಿತ ಆಸ್ಟ್ರೇಲಿಯ 5ರಲ್ಲಿದೆ (102).

Advertisement
Advertisement

Udayavani is now on Telegram. Click here to join our channel and stay updated with the latest news.

Next