ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ವರ್ಷದಿಂದ “ಐಸಿಸಿ ತಿಂಗಳ ಆಟಗಾರ’ (ಐಸಿಸಿ ಪ್ಲೇಯರ್ ಆಫ್ ದ ಮಂತ್) ಎಂಬ ನೂತನ ಪ್ರಶಸ್ತಿಯನ್ನು ನೀಡಲಿದ್ದು, ಇದಕ್ಕಾಗಿ ಆಟಗಾರರ ಹೆಸರನ್ನು ಸೂಚಿಸುವ ಪ್ರಕ್ರಿಯೆ ಮೊದಲ್ಗೊಂಡಿದೆ. ಭಾರತದಿಂದ ಹಿರಿಯ ಆಫ್ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಹಾರ್ಡ್ ಹಿಟ್ಟಿಂಗ್ ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಹೆಸರು ಜನವರಿ ತಿಂಗಳ ಆಯ್ಕೆಗೆ ನಾಮ ನಿರ್ದೇಶನಗೊಂಡಿದೆ.
ಇವರಿಬ್ಬರ ಜತೆಗೇ ಮೊಹಮ್ಮದ್ ಸಿರಾಜ್ ಮತ್ತು ಟಿ. ನಟರಾಜನ್ ಹೆಸರನ್ನೂ ಸೂಚಿಸಲಾಗಿದೆ. ಇವರೆಲ್ಲರೂ ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತದ ಟೆಸ್ಟ್ ಸರಣಿ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದರು.
ಉಳಿದಂತೆ ಇಂಗ್ಲೆಂಡ್ ನಾಯಕ ಜೋ ರೂಟ್, ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್, ಅಫ್ಘಾನಿಸ್ಥಾನದ ರೆಹಮಾನುಲ್ಲ ಗುರ್ಬಜ್, ವನಿತಾ ವಿಭಾಗದಿಂದ ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್, ನಾಡಿನ್ ಡಿ ಕ್ಲರ್ಕ್, ಪಾಕಿಸ್ಥಾನದ ನಿದಾ ದರ್ ಹೆಸರು ನಾಮ ನಿರ್ದೇಶನಗೊಂಡಿದೆ.
ತಿಂಗಳ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಿಕೆಟಿಗರ ಸಾಧನೆಯನ್ನು ಪರಿಗಣಿಸಿ, ಪುರುಷರ ಹಾಗೂ ವನಿತಾ ವಿಭಾಗಗಳೆರಡರಲ್ಲೂ ಅತ್ಯುತ್ತಮ ಆಟಗಾರನನ್ನು ಆರಿಸಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಆಯ್ಕೆ ವಿಧಾನ :
ಐಸಿಸಿಯ ಸ್ವತಂತ್ರ ವೋಟಿಂಗ್ ಅಕಾಡೆಮಿ ಮತ್ತು ಅಭಿಮಾನಿಗಳ ಮತಗಳನ್ನು ಪರಿಗಣಿಸಿ ತಿಂಗಳ ಕ್ರಿಕೆಟಿಗರ ಆಯ್ಕೆ ನಡೆಸಲಾಗುವುದು. ಐಸಿಸಿ ವೋಟಿಂಗ್ ಅಕಾಡೆಮಿಯಲ್ಲಿ ವಿಶ್ವದ ಮಾಜಿ ಆಟಗಾರರು, ಪತ್ರಕರ್ತರು, ಪ್ರಸಾರಕರು ಮೊದಲಾದವರು ಇರುತ್ತಾರೆ. ಪ್ರತೀ ತಿಂಗಳ ದ್ವಿತೀಯ ಸೋಮವಾರ ಐಸಿಸಿಯ ಡಿಜಿಟಲ್ ಚಾನೆಲ್‌ಗಳಲ್ಲಿ ವಿಜೇತರ ಹೆಸರು ಪ್ರಕಟಗೊಳ್ಳಲಿದೆ.