Advertisement

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

01:14 AM Nov 29, 2024 | Team Udayavani |

ದುಬಾೖ: ಮುಂದಿನ ವರ್ಷ ಫೆ. 19ರಿಂದ ಮಾ. 9ರ ವರೆಗೆ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮಗೊಳಿಸಲು ಶುಕ್ರವಾರ ಐಸಿಸಿ ಆನ್‌ಲೈನ್‌ ಸಭೆ ನಡೆಸಲಿದೆ. ಹೆಸರಿಗೆ ಇದು ವೇಳಾಪಟ್ಟಿ ಇತ್ಯರ್ಥ ಮಾಡುವ ಸಭೆಯಾಗಿದ್ದರೂ, ಹೈಬ್ರಿಡ್‌ ಮಾದರಿಗೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಯನ್ನು ಒಪ್ಪಿಸುವುದೇ ದೊಡ್ಡ ಕಸರತ್ತಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Advertisement

ಇದೇ ವೇಳೆ ಇಸ್ಲಾಮಾಬಾದ್‌ನಲ್ಲಿ ಸಂಘರ್ಷಮಯ ವಾತಾವರಣವಿರುವುದನ್ನು ಪ್ರಸ್ತಾವಿಸಿ ಪಾಕ್‌ ಅನ್ನು ಹೈಬ್ರಿಡ್‌ಗೆ ಒಪ್ಪಿಸಲೂ ಯತ್ನ ಸಾಗಿದೆ ಎನ್ನಲಾಗಿದೆ. ಪಾಕ್‌ನಲ್ಲಿನ ಆಂತರಿಕ ಸಂಘರ್ಷ ಆ ದೇಶಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ಭಾರತ ಪಾಕಿಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಭಾರತ ಆಡುವ ಮೂರು ಪಂದ್ಯಗಳು, ಸೆಮಿಫೈನಲ್‌, ಫೈನಲ್‌ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸುವುದು ಹೈಬ್ರಿಡ್‌ ಮಾದರಿಯಾಗಿದೆ. ಇದು ಸಾಧ್ಯವಿಲ್ಲ, ಪೂರ್ಣ ಕೂಟ ಪಾಕಿಸ್ಥಾನದಲ್ಲೇ ನಡೆಯಬೇಕು ಎಂದು ಪಿಸಿಬಿ ಹಠ ಹಿಡಿದಿದೆ. ಕೂಟವನ್ನು ಪಾಕ್‌ನಲ್ಲೇ ನಡೆಸುವುದಾದರೆ ಭಾರತ ಭಾಗವಹಿಸುವುದಿಲ್ಲ, ಆಗ ಐಸಿಸಿಗೆ ದೊಡ್ಡ ನಷ್ಟ ಉಂಟಾಗುತ್ತದೆ. ಇದನ್ನು ಹೊರಲು ಐಸಿಸಿ ಸಿದ್ಧವಿಲ್ಲ ಎಂದು ವರದಿಗಳು ಹೇಳುತ್ತವೆ.

ಹೈಬ್ರಿಡ್‌ ಮಾದರಿಗೆ ಮತದಾನ?
ಐಸಿಸಿ ಸಭೆಯಲ್ಲಿ ಹಲವು ಆಯ್ಕೆಗಳನ್ನು ಪ್ರಸ್ತಾವಿಸಲಾಗುತ್ತದೆ. 1. ಭಾರತದ 3 ಪಂದ್ಯಗಳು, ಸೆಮಿಫೈನಲ್‌-ಫೈನಲ್‌ ಪಂದ್ಯಗಳನ್ನು ತಟಸ್ಥ ತಾಣದಲ್ಲಿ (ಯುಎಇಯಲ್ಲಿ) ನಡೆಸುವುದು. 2. ಭಾರತ ಸೆಮಿಫೈನಲ್‌ಗೇರದಿದ್ದರೆ, ಸೆಮೀಸ್‌, ಫೈನಲ್‌ ಪಂದ್ಯಗಳನ್ನೂ ಪಾಕ್‌ನಲ್ಲೇ ನಡೆಸುವುದು.
ಇದೇ ವೇಳೆ ಹೈಬ್ರಿಡ್‌ ಮಾದರಿಗಾಗಿ ಮತದಾನ ನಡೆಸುವ ಸಾಧ್ಯತೆಯೂ ಇದೆ. ಹೈಬ್ರಿಡ್‌ಗೆ ಬೆಂಬಲ ಬಂದರೆ, ಆಗ ನಿರ್ಧಾರ ಮಾಡುವುದು ಪಾಕಿಸ್ಥಾನದ ಹೊಣೆಯಾಗುತ್ತದೆ. ಇದಕ್ಕೆ ಒಪ್ಪದೇ ಹೋದರೆ ಕೂಟವನ್ನು ಪಾಕಿಸ್ಥಾನದಿಂದ ಅನ್ಯರಾಷ್ಟ್ರಕ್ಕೆ ಸ್ಥಳಾಂತರ ಮಾಡಲೂಬಹುದು. ಹೀಗಾದರೆ ಪಾಕ್‌ಗೆ
ಪೂರ್ಣವಾಗಿ ಆರ್ಥಿಕ ನಷ್ಟವಾಗುತ್ತದೆ, ಈ ಮಟ್ಟಕ್ಕೆ ಪಾಕ್‌ ಹೋಗಲಾರದು ಎಂದು ಮೂಲಗಳು ಹೇಳಿವೆ.

ಭಾರತ ಪಾಕಿಸ್ಥಾನಕ್ಕೆ ಬಾರದಿದ್ದರೆ, ಪಾಕ್‌ ಭಾರತಕ್ಕೆ ಹೋಗಲ್ಲ: ನಖ್ವಿ
ಐಸಿಸಿ ಕೂಟಗಳಲ್ಲಿ ಆಡಲು ಭಾರತವೇನಾದರೂ ಪಾಕಿಸ್ಥಾನಕ್ಕೆ ಬಾರದಿದ್ದರೆ, ಭಾರತದಲ್ಲಿ ನಡೆಯುವ ಕೂಟಗಳಲ್ಲಿ ಆಡಲು ಪಾಕ್‌ ಕೂಡ ತೆರಳುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ, ಪಾಕ್‌ ಗೃಹಸಚಿವ ಮೊಹ್ಸಿನ್‌ ನಖ್ವಿ ಹೇಳಿದ್ದಾರೆ. ನಾವು ಮಾತ್ರ ಭಾರತಕ್ಕೆ ಹೋಗುವುದು, ಅವರು ತಂಡ ಕಳುಹಿಸುವುದಿಲ್ಲವೆಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಹೈಬ್ರಿಡ್‌ ಮಾಡೆಲ್‌ ಬಗ್ಗೆ ನಖೀÌ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಖಡಾಖಂಡಿತವಾಗಿ ಹೈಬ್ರಿಡ್‌ ಮಾಡೆಲ್‌ ಅನ್ನು ಒಪ್ಪುವುದಿಲ್ಲ ಎನ್ನುತ್ತಿದ್ದ ಅವರು, ಈ ಬಾರಿ ಐಸಿಸಿ ಸಭೆಯಲ್ಲಿ ಒಳ್ಳೆಯ ಸುದ್ದಿಯೇ ಹೊರಬೀಳಲಿದೆ. ನಿರ್ಧಾರವನ್ನು ನಮ್ಮ ಜನ ಒಪ್ಪಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ಪಾಕ್‌ ಹೈಬ್ರಿಡ್‌ ಮಾದರಿಗೆ ಒಪ್ಪಲಿದೆಯಾ ಎಂಬ ಅನುಮಾನ ಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next