ದುಬಾೖ: ಕೋವಿಡ್-19 ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪುನರಾರಂಭಗೊಳ್ಳಲಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲವೊಂದು ಬದಲಾವಣೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಪ್ಪಿಗೆ ಸೂಚಿಸಿದೆ.
ಆದರೆ ಚೆಂಡು ಹೊಳೆಯಲು ಲಾಲಾರಸದ ಬಳಕೆಯನ್ನು ನಿಷೇಧಿಸಿದೆ.
ಅನಿಲ್ ಕುಂಬ್ಳೆ ಅಧ್ಯಕ್ಷತೆಯ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಮಿತಿ ಅನುಮೋದಿಸಿದ ಐದು ಹೊಸ ನಿಯಮಗಳಿಗೆ ಐಸಿಸಿ ಒಪ್ಪಿಗೆ ಸೂಚಿಸಿದೆ.
ಹೆಚ್ಚುವರಿ ಡಿಆರ್‌ಎಸ್ ಕರೆ ಮತ್ತು ದ್ವಿಪಕ್ಷೀಯ ಟೆಸ್ಟ್ ಸರಣಿ ವೇಳೆ ತವರಿನ ಅಂಪಾಯರ್‌ಗಳು ಕರ್ತವ್ಯ ನಿರ್ವಹಿಸಲು ಐಸಿಸಿ ಒಪ್ಪಿಗೆ ನೀಡಿದೆ.
ಟೆಸ್ಟ್ ಪಂದ್ಯದ ವೇಳೆ ಆಟಗಾರರಿಗೆ ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದರೆ ಆಟಗಾರರನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಬದಲಿ ಆಟಗಾರರ ಸಂಬಂಧ ಮ್ಯಾಚ್ ರೆಫರಿ ಒಪ್ಪಿಗೆ ನೀಡಲಿದ್ದಾರೆ. ಮಾತ್ರವಲ್ಲದೇ ಆಟಗಾರರ ಜರ್ಸಿಯಲ್ಲಿ 32 ಇಂಚಿನ ಹೆಚ್ಚುವರಿ ಲಾಂಛನ ಹಾಕಲು ಅನುಮತಿ ನೀಡಲಾಗಿದೆ. ಈ ಮೂಲಕ ಮಂಡಳಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಸಾಧ್ಯವಾಗಲಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.
ಆದರೆ ಕೋವಿಡ್-19 ಬದಲಾವಣೆಗಳು ಏಕದಿನ ಮತ್ತು ಟಿ20 ಪಂದ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಐಸಿಸಿ ತಿಳಿಸಿದೆ.