ದುಬಾೖ,: ಮುಂದಿನ 8 ವರ್ಷಗಳ ಆವೃತ್ತದಲ್ಲಿ ನಡೆಯಲಿರುವ ಐಸಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯಕ್ಕೆ ಭಾರತ, ಆಸ್ಟ್ರೇಲಿಯ ಸೇರಿದಂತೆ 17 ದೇಶಗಳು ಆಸಕ್ತಿ ತೋರಿವೆ ಎಂದು ಐಸಿಸಿ ಸೋಮವಾರ ತಿಳಿಸಿದೆ. ಈ ಆವೃತ್ತ 2024ರಿಂದ ಮೊದಲ್ಗೊಂಡು 2031ಕ್ಕೆ ಮುಗಿಯಲಿದೆ.
ಎರಡು ಏಕದಿನ ವಿಶ್ವಕಪ್ ಹಾಗೂ 4 ಟಿ20 ವಿಶ್ವಕಪ್ ಸೇರಿದಂತೆ ಪುರುಷರ 8 ಏಕದಿನ ಹಾಗೂ ಟಿ20 ಟೂರ್ನಿ, ಎರಡು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಈ ಅವಧಿಯಲ್ಲಿ ನಡೆಯಲಿವೆ.
ಬಿಸಿಸಿಐ ಮೂಲದ ಪ್ರಕಾರ ಭಾರತ ಒಂದು ಚಾಂಪಿಯನ್ಸ್ ಟ್ರೋಫಿ, ಒಂದು ಟಿ20 ವಿಶ್ವಕಪ್ ಹಾಗೂ ಒಂದು ಏಕದಿನ ವಿಶ್ವಕಪ್ ಆತಿಥ್ಯಕ್ಕೆ ಮುಂದಾಗುವ ಸಾಧ್ಯತೆ ಇದೆ. 2017ರ ಬಳಿಕ ನಡೆಯದ ಚಾಂಪಿಯನ್ಸ್ ಟ್ರೋಫಿ ಮುಂದಿನ ಆವೃತ್ತದಲ್ಲಿ ಮತ್ತೆ ಆರಂಭಗೊಳ್ಳಲಿದ್ದು, ಇದಕ್ಕೆ ಭಾರತ ಬಿಡ್ ಸಲ್ಲಿಸಲಿದೆ ಎನ್ನಲಾಗಿದೆ.
ಪಾಕ್, ಅಫ್ಘಾನ್, ನಮೀಬಿಯಾ, ಸ್ಕಾಟ್ಲೆಂಡ್ ಕೂಡ ಆತಿಥ್ಯಕ್ಕೆ ಮುಂದಾಗಿವೆ ಎಂಬುದಾಗಿ ಐಸಿಸಿಯ ಉಸ್ತುವಾರಿ ಸಿಇಒ ಜೆಫ್ ಅಲಡೈìಸ್ ಹೇಳಿದ್ದಾರೆ.
ಆತಿಥ್ಯದ ಆಸಕ್ತಿಯ 17 ದೇಶಗಳು
ಐಸಿಸಿ ಕ್ರಿಕೆಟ್ ಪಂದ್ಯಾವಳಿಗಳ ಆತಿಥ್ಯಕ್ಕೆ ಆಸಕ್ತಿ ತೋರಿರುವ ದೇಶಗಳೆಂದರೆ ಆಸ್ಟ್ರೇಲಿಯ, ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ಮಲೇಶ್ಯ, ನಮೀಬಿಯಾ, ನ್ಯೂಜಿಲ್ಯಾಂಡ್, ಒಮಾನ್, ಪಾಕಿಸ್ಥಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಯುಎಇ, ಯುಎಸ್‌ಎ ಮತ್ತು ಜಿಂಬಾಬ್ವೆ.