ಚೆನ್ನೈ : ಇಲ್ಲಿ ಸೋಮವಾರ ನಡೆದ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿಅಫ್ಘಾನಿಸ್ಥಾನ ತಂಡ ಪಾಕಿಸ್ಥಾನ ತಂಡಕ್ಕೆ ಆಘಾತಕಾರಿ ಸೋಲುಣಿಸಿದೆ.
5 ನೇ ಪಂದ್ಯದ 2 ನೇ ಭಾರೀ ಗೆಲುವಿನಿಂದ ಅಫ್ಘಾನ್ ಹೊಸ ಹುಮ್ಮಸ್ಸು ಪಡೆದಿದ್ದು, ಪಾಕ್ 5 ನೇ ಪಂದ್ಯದಲ್ಲಿ 3 ನೇ ಸೋಲಿಗೆ ಸಿಲುಕಿ ಮುಂದಿನ ಹಾದಿ ದುರ್ಗಮ ಮಾಡಿಕೊಂಡಿದೆ. ಈಗ ಹೊಸ ಹೊಸ ಲೆಕ್ಕಾಚಾರಗಳು ಆರಂಭವಾಗಿದೆ.
ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ 58 ರನ್ ಮತ್ತು ನಾಯಕ ಬಾಬರ್ ಆಜಮ್(74 ರನ್ ) ಅರ್ಧಶತಕಗಳು ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಸೌದ್ ಶಕೀಲ್ 25, ಶಾದಾಬ್ ಖಾನ್ 40,ಇಫ್ತಿಕರ್ ಅಹಮದ್ 40 ರನ್ ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತು. ಇಮಾಮ್-ಉಲ್-ಹಕ್ 17, ಮೊಹಮ್ಮದ್ ರಿಜ್ವಾನ್ 8 ರನ್ ಗಳಿಸಿದ್ದ ವೇಳೆ ಔಟಾದರು.
ಅಫ್ಘಾನ್ ಬೌಲರ್ ಗಳ ಪೈಕಿ ನೂರ್ ಅಹ್ಮದ್ 3 ವಿಕೆಟ್ ಪಡೆದರು. ನವೀನ್-ಉಲ್-ಹಕ್ 2 ವಿಕೆಟ್, ನಬಿ ಮತ್ತು ಅಜ್ಮತುಲ್ಲಾ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಅಫ್ಘಾನ್ ಅಮೋಘ ಆರಂಭ ಪಡೆಯಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಅತ್ಯಾಕರ್ಷಕ ಜತೆಯಾಟವಾಡಿದರು.ಮೊದಲ ವಿಕೆಟ್ ಗೆ 130 ರನ್ ಜತೆಯಾಟವಾಡಿ ಪಾಕ್ ಗೆ ಹೆದರಿಕೆ ಹುಟ್ಟಿಸಿದರು. ಗುರ್ಬಾಜ್ 65 ರನ್ ಗಳಿಸಿ ಔಟಾದರು. 53 ಎಸೆತಗಳಲ್ಲಿ ಅಬ್ಬರಿಸಿದ ಅವರ 65 ರನ್ ಳಲ್ಲಿ 9 ಆಕರ್ಷಕ ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಇಬ್ರಾಹಿಂ ಸಮಯೋಚಿತ ತಾಳ್ಮೆಯ ಆಟವಾಡಿ 87 ರನ್ ಗಳಿಸಿ ಔಟಾದರು.113 ಎಸೆತಗಳನ್ನು ಎದುರಿಸಿದ್ದ ಅವರು 10 ಆಕರ್ಷಕ ಬೌಂಡರಿ ಬಾರಿಸಿದರು.
ಬ್ಯಾಟಿಂಗ್ ಬಲ ತೋರಿದ ರಹಮತ್ ಶಾ (77 ರನ್ಮ)ತ್ತು ನಾಯಕ ಹಶ್ಮತುಲ್ಲಾ ಶಾಹಿದಿ (48 ರನ್) ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. 49 ಓವರ್ ಗಳಲ್ಲಿ ಕೇವಲ 2 ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡ ಅಫ್ಘಾನ್ 286 ರನ್ ಗಳಿಸಿ 8 ವಿಕೆಟ್ ಗಳ ಅಂತರದ ಭಾರೀ ಜಯಭೇರಿ ಬಾರಿಸಿತು.
ಪಾಕ್ ವೇಗಿಗಳು ಮತ್ತು ಸ್ಪಿನ್ನರ್ ಗಳು ವಿಕೆಟ್ ಬೀಳಿಸುವಲ್ಲಿ ವಿಫಲರಾದುದು ಸೋಲಿನಲ್ಲಿ ಎದ್ದು ಕಂಡಿತು. ಕೊನೆಯಲ್ಲಿ ಪಾಕ್ ಆಟಗಾರರು ಸಂಪೂರ್ಣವಾಗಿ ಹತಾಶರಾದುದು ಕಂಡು ಬಂದಿತು.