ಲಂಡನ್: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತ ತಂಡ ಪರಿಪಕ್ವಗೊಂಡಿದೆ ಎಂಬು ದಾಗಿ ನಾಯಕ ವಿರಾಟ್ ಕೊಹ್ಲಿ ಅಭಿ ಪ್ರಾಯಪಟ್ಟಿದ್ದಾರೆ. ಅವರು ಲಂಡನ್‌ಗೆ ಬಂದಿಳಿದ ಬಳಿಕ ಪತ್ರಕರ್ತರ ಜತೆ ಮಾತಾಡುತ್ತಿದ್ದರು.
ಭಾರತ ಹಾಲಿ ಚಾಂಪಿಯನ್ ಆಗಿದ್ದು, 2013ರಲ್ಲಿ ಇಂಗ್ಲೆಂಡನ್ನೇ ಮಣಿಸಿ ಪ್ರಶಸ್ತಿ ಜಯಿಸಿತ್ತು. ಅಂದು ಮಹೇಂದ್ರ ಸಿಂಗ್ ಭಾರತ ತಂಡದ ನಾಯಕರಾಗಿದ್ದರು. ಅಂದಿನ ತಂಡದ 8 ಮಂದಿ ಆಟಗಾರರು ಈ ತಂಡದಲ್ಲೂ ಇದ್ದಾರೆಂಬುದು ವಿಶೇಷ. ಆದ್ದರಿಂದಲೇ ವಿರಾಟ್ ಕೊಹ್ಲಿ ಇದನ್ನೊಂದು ಪರಿಪಕ್ವ ತಂಡ ಎಂದು ಹೇಳಿದ್ದು.
“4 ವರ್ಷಗಳ ಹಿಂದೆ ನಮ್ಮದೊಂದು ಯುವ ಪಡೆಯಾಗಿತ್ತು. ಆದರೆ ಈ ಬಾರಿ ಹೆಚ್ಚು ಮಾಗಿದ ತಂಡವಾಗಿದೆ. ಹೆಚ್ಚು ಸಂತುಲಿತ ತಂಡವೂ ಹೌದು. ಈ 4 ವರ್ಷಗಳ ಅವಧಿಯಲ್ಲಿ ಆಟಗಾರರೆಲ್ಲ ಹೆಚ್ಚು ಅನುಭವಿಗಳಾಗಿದ್ದಾರೆ. ನಾವು ಈ ಪಂದ್ಯಾವಳಿಯಲ್ಲಿ ಮುನ್ನಡೆಯಲು ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದೇವೆ…’ ಎಂದು ಕೊಹ್ಲಿ ಹೇಳಿದರು.
“ಬಿ’ ವಿಭಾಗದಲ್ಲಿರುವ ಭಾರತ ಜೂ. 4ರಂದು ಸಾಂಪ್ರದಾಯಿಕ ಎದುರಾಳಿ ಪಾಕಿ ಸ್ಥಾನದ ವಿರುದ್ಧ ತನ್ನ ಮೊದಲ ಪಂದ್ಯ ವಾಡಲಿದೆ. ಬಳಿಕ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
“ಈ ಪಂದ್ಯಾವಳಿಯನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಏಕೆಂದರೆ ಇದು ಅತ್ಯಂತ ಸವಾಲಿನ ಪಂದ್ಯಾವಳಿ. ಐಸಿಸಿ ವಿಶ್ವಕಪ್‌ನಷ್ಟೇ ಮಹತ್ವ ಪಡೆದಿದೆ. ಆದರೆ ಅಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಲಾಗುತ್ತದೆ. ಇಲ್ಲಿ ಕೆಲವೇ ಪಂದ್ಯಗಳಲ್ಲಿ ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು. 3 ಪಂದ್ಯ ಆಡುವಷ್ಟರಲ್ಲಿ ಸೆಮಿಫೈನಲ್ ಎದುರಾಗುತ್ತದೆ. ಹೀಗಾಗಿ ಲೀಗ್ ಹಂತದಲ್ಲಿ ಸ್ವಲ್ಪ ಜಾರಿದರೂ ಕೂಟ ದಿಂದ ಹೊರಬೀಳಬೇಕಾಗುತ್ತದೆ. ಹೀಗಾಗಿ ಗೆಲುವೊಂದೇ ಪ್ರತಿ ತಂಡದ ಮೂಲ ಮಂತ್ರವಾಗಿರುತ್ತದೆ. ಪೈಪೋಟಿಯೂ ಜಾಸ್ತಿ ಇರುತ್ತದೆ…’ ಎಂದರು.
“ಹಾಗೆಯೇ ಆಟಗಾರರು ತಮ್ಮ ಸಾಮರ್ಥ್ಯವನ್ನು ಕಾರ್ಯರೂಪಕ್ಕೆ ಇಳಿಸು ವುದು ಬಹಳ ಮುಖ್ಯ. ನಿಮ್ಮದು ವಿಶ್ವ ದರ್ಜೆಯ ತಂಡವೇ ಆಗಿರಬಹುದು, ಆದರೆ ಆಟಗಾರರು ತಮ್ಮ ಸಾಮರ್ಥ್ಯವನ್ನು ಕಾರ್ಯರೂಪಕ್ಕೆ ಇಳಿಸದಿದ್ದರೆ ಪ್ರಯೋಜನವಿಲ್ಲ. ಇಂಥ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ನಿರ್ದಿಷ್ಟ ದಿನ ನಿಮ್ಮ ನೈಜ ಆಟ ಅನಾವರಣಗೊಳ್ಳುವುದು ಅತ್ಯಗತ್ಯ…’ ಎಂಬುದು ಟೀಮ್ ಇಂಡಿಯಾ ಕಪ್ತಾನನ ಅನಿಸಿಕೆ.
ಧೋನಿ ಮೇಲೆ ಒತ್ತಡವಿಲ್ಲ
“ಕೆಳ-ಮಧ್ಯಮ ಹಂತದ ಸಾಮರ್ಥ್ಯವನ್ನು ನಾವು ಹೆಚ್ಚು ಬಲ ಪಡಿಸಬೇಕು. ಧೋನಿ ಇಲ್ಲಿದ್ದಾರೆ. ಕಳೆದ ಒಂದೆರಡು ವರ್ಷಗಳಲ್ಲಿ ಧೋನಿ ಮೇಲೆ ಭಾರೀ ಒತ್ತಡ ಬೀಳುತ್ತಿತ್ತು. ಇವರ ಫಿನಿಶಿಂಗ್ ಕೆಲಸಕ್ಕೆ ಯಾರಿಂದಲೂ ನೆರವು ಲಭಿಸುತ್ತಿರಲಿಲ್ಲ. ಆದರೆ ಇದೀಗ ಯುವ ಆಟಗಾರರು ಮ್ಯಾಚ್ ಫಿನಿಶಿಂಗ್ ವೇಳೆ ಧೋನಿಗೆ ನೆರವು ನೀಡುತ್ತಿದ್ದಾರೆ. ಧೋನಿ ಮೇಲಿನ ಒತ್ತಡ ಕಡಿಮೆಯಾಗಿದೆ. ತಂಡ ಹೆಚ್ಚು ಸಂತುಲಿತವಾಗಿದೆ…’ ಎಂಬುದಾಗಿ ಕೊಹ್ಲಿ ಹೇಳಿದರು.