ದುಬಾೖ: ಜನವರಿ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಿಇಒ ಆಗಿ ಆಯ್ಕೆಯಾಗಿದ್ದ ಮನು ಸಾಹ್ನಿ, ಕೇವಲ ಎರಡು ವರ್ಷ ತುಂಬುವುದರೊಳಗೆ ಈ ಹುದ್ದೆಯನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಗಂಭೀರ ಆರೋಪದಡಿ ಐಸಿಸಿ ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಸ್ವತಂತ್ರ ಲೆಕ್ಕ ಪರಿಶೋಧನಾ ಸಂಸ್ಥೆಯೊಂದಕ್ಕೆ ಮನು ಸಾಹ್ನಿಯ ಕಾರ್ಯಾಚರಣೆ ಶೈಲಿಯನ್ನು ಪರಿಶೀಲಿಸಲು ಐಸಿಸಿ ಸೂಚಿಸಿತ್ತು. ಅದು ನೀಡಿರುವ ವರದಿ ಪ್ರಕಾರ, ಮನು ಸಾಹ್ನಿ ವಿರುದ್ಧ ಗಂಭೀರ ಆಪಾದನೆಗಳಿವೆ.
ಅಹಂಕಾರದಂತಹ ಸಣ್ಣ ಸಮಸ್ಯೆಯಿಂದ ಹಿಡಿದು, ಎಲ್ಲ ಕೆಲಸಗಳಲ್ಲೂ ಮೂಗು ತೂರಿಸುವುದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ಕೆಲಸದಿಂದ ತೆಗೆಯುವುದು, ಸೇರಿಸಿ ಕೊಳ್ಳುವುದನ್ನು ಮಾಡಿದ್ದಾರೆ. ಒಟ್ಟಾರೆ ಅವರ ಕಾರ್ಯಶೈಲಿ ಐಸಿಸಿ ಪದ್ಧತಿಗೆ ತಕ್ಕಂತೆ ಇರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ :ಚೆಕ್ ಬೌನ್ಸ್ ಪ್ರಕರಣ ತ್ವರಿತ ಇತ್ಯರ್ಥಕ್ಕೆ ಸುಪ್ರೀಂನಿಂದ ಸಮಿತಿ
ಇದಕ್ಕೆ ಇನ್ನೊಂದು ಮುಖವೂ ಇದೆ. ಸಾಹ್ನಿ ಐಸಿಸಿ ಸಿಇಒ ಆದ ಮೇಲೆ 2023ರಿಂದ 31ರ ವರೆಗೆ ವರ್ಷಕ್ಕೊಂದು ವಿಶ್ವ ಮಟ್ಟದ ಕ್ರಿಕೆಟ್ ಕೂಟ ನಡೆಸಲು ಅವರು ಶಿಫಾರಸು ಮಾಡಿದ್ದರು. ಮಾತ್ರವಲ್ಲ, ಇದಕ್ಕಾಗಿ ಪ್ರಬಲ ಯತ್ನವನ್ನೂ ನಡೆಸಿದ್ದರು.
ಇದು ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳನ್ನು ಕೆರಳಿಸಿತ್ತು. ಹೀಗೆ ಮಾಡುವುದರಿಂದ ದ್ವಿಪಕ್ಷೀಯ ಸರಣಿಗಳಿಗೆ, ಐಪಿಎಲ್‌ನಂತಹ ಶ್ರೀಮಂತ ಟಿ20 ಲೀಗ್‌ಗಳಿಗೆ ಸಮಸ್ಯೆಯಾಗುತ್ತದೆ ಎನ್ನುವುದು ಈ ಸಂಸ್ಥೆಗಳ ನಿಲುವು. ಈ ತಿಕ್ಕಾಟವೂ ಸಾಹ್ನಿಯ ಇಂದಿನ ಪರಿಸ್ಥಿತಿಗೆ ಕಾರಣವಾಗಿರಬಹುದೆಂಬ ಊಹೆಯೂ ಇದೆ.