Advertisement

ಐಸಿಸಿ ವಾರ್ಷಿಕ ಪ್ರಶಸ್ತಿ: ಸ್ಟೋಕ್ಸ್‌ ವರ್ಷದ ಕ್ರಿಕೆಟಿಗ

10:02 AM Jan 17, 2020 | Team Udayavani |

ದುಬಾೖ: 2019ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅತ್ಯಧಿಕ ಮೂರು ಗೌರವಗಳಿಗೆ ಪಾತ್ರರಾಗಿದ್ದಾರೆ. ಭಾರತದ ಆರಂಭಕಾರ ರೋಹಿತ್‌ ಶರ್ಮ ವರ್ಷದ ಶ್ರೇಷ್ಠ ಏಕದಿನ ಆಟಗಾರನಾಗಿ ಮೂಡಿ ಬಂದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಗೌರವ ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ ಪಾಲಾಗಿದೆ. ಟಿ20 ಸಾಧಕ ಪ್ರಶಸ್ತಿ ದೀಪಕ್‌ ಚಹರ್‌ ಅವರಿಗೆ ಒಲಿದಿದೆ.

Advertisement

ಅತ್ಯುನ್ನತ ಪ್ರಶಸ್ತಿಯಾದ “ವರ್ಷದ ಕ್ರಿಕೆಟಿಗ’ ಗೌರವಕ್ಕೆ ಭಾಜನರಾದವರು ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌. ಇವರಿಗೆ “ಸರ್‌ ಗ್ಯಾರಿ ಸೋಬರ್’ ಟ್ರೋಫಿಯನ್ನು ಪ್ರದಾನ ಮಾಡಲಾಗುವುದು.

ಐಸಿಸಿ ಪ್ರಕಟಿಸಿದ ವರ್ಷದ ಟೆಸ್ಟ್‌ ಹಾಗೂ ಏಕದಿನ ತಂಡಗಳೆರಡಕ್ಕೂ ವಿರಾಟ್‌ ಕೊಹ್ಲಿ ಅವರೇ ನಾಯಕರಾಗಿರುವುದು ವಿಶೇಷ. ಈ ತಂಡಗಳಲ್ಲಿ ಭಾರತದ ಮಾಯಾಂಕ್‌ ಅಗರ್ವಾಲ್‌, ರೋಹಿತ್‌ ಶರ್ಮ, ಮೊಹಮ್ಮದ್‌ ಶಮಿ ಮತ್ತು ಕುಲದೀಪ್‌ ಯಾದವ್‌ ಕೂಡ ಇದ್ದಾರೆ.

ಸ್ಪಿರಿಟ್‌ ಆಫ್ ಕ್ರಿಕೆಟ್‌
ವಿರಾಟ್‌ ವಿಶ್ವಕಪ್‌ನಲ್ಲಿ ತೋರಿದ ಕ್ರೀಡಾಸ್ಫೂರ್ತಿಗಾಗಿ “ಸ್ಪಿರಿಟ್‌ ಆಫ್ ಕ್ರಿಕೆಟ್‌’ ಪ್ರಶಸ್ತಿಗೆ ಆಯ್ಕೆಯಾದರು. ಭಾರತ-ಆಸ್ಟ್ರೇಲಿಯ ನಡುವಿನ ಲೀಗ್‌ ಪಂದ್ಯದ ವೇಳೆ ವೀಕ್ಷಕ ವರ್ಗ ವೊಂದು ಆಸ್ಟ್ರೇಲಿಯದ ಸ್ಟೀವ್‌ ಸ್ಮಿತ್‌ ಅವರನ್ನು ಅಣಕಿಸುತ್ತಿದ್ದಾಗ, ದಯವಿಟ್ಟು ಈ ರೀತಿಯಾಗಿ ವರ್ತಿಸಬೇಡಿ ಎಂದು ಕೊಹ್ಲಿ ವೀಕ್ಷಕರಲ್ಲಿ ಮನವಿ ಮಾಡಿದ್ದರು. ಆಗಷ್ಟೇ ಸ್ಮಿತ್‌ “ಬಾಲ್‌ ಟ್ಯಾಂಪರಿಂಗ್‌’ ಪ್ರಕರಣದ ನಿಷೇಧದಿಂದ ಮುಕ್ತರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲಿಳಿದಿದ್ದರು.

ವಿಶ್ವಕಪ್‌ ಹೀರೋ ಸ್ಟೋಕ್ಸ್‌
ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡಿಗೆ ಮೊದಲ ವಿಶ್ವಕಪ್‌ ತಂದು ಕೊಡುವಲ್ಲಿ ಅಮೋಘ ಪಾತ್ರ ವಹಿಸಿದ್ದರು. ನ್ಯೂಜಿಲ್ಯಾಂಡ್‌ ಎದುರಿನ ಫೈನಲ್‌ನಲ್ಲಿ ಸ್ಟೋಕ್ಸ್‌ ವಹಿಸಿದ ಪಾತ್ರ ಸ್ಮರಣೀಯ. ಈ ಸಾಧನೆಗಾಗಿ ಅವರು ವರ್ಷದ ಕ್ರಿಕೆಟಿಗನಾಗಿ “ಸರ್‌ ಗ್ಯಾರಿ ಸೋಬರ್ ಟ್ರೋಫಿ’ಯನ್ನು ಎತ್ತಿಹಿಡಿಯಲಿದ್ದಾರೆ.

Advertisement

ರೋಹಿತ್‌, ಚಹರ್‌ಗೆ ಗೌರವ
ಭಾರತದ ಆರಂಭಕಾರ ರೋಹಿತ್‌ ಶರ್ಮ ಕೂಡ ವಿಶ್ವಕಪ್‌ ಹೀರೋ ಆಗಿ ಮೆರೆದಾಡಿದ್ದರು. ಸರ್ವಾಧಿಕ 5 ಶತಕ ಬಾರಿಸಿದ ವಿಶ್ವದಾಖಲೆ ಇವರದಾಗಿತ್ತು. 2019ರ 28 ಏಕದಿನ ಪಂದ್ಯಗಳಿಂದ 1,409 ರನ್‌ ಪೇರಿಸಿದ ಹೆಗ್ಗಳಿಕೆಗೆ ಪಾತ್ರರಾದ ರೋಹಿತ್‌, ಒಟ್ಟು 7 ಶತಕ ಬಾರಿಸಿದ್ದರು.

ದೀಪಕ್‌ ಚಹರ್‌ ಬಾಂಗ್ಲಾದೇಶ ವಿರುದ್ಧ ನಾಗ್ಪುರದಲ್ಲಿ ಆಡಲಾದ ಟಿ20 ಪಂದ್ಯದಲ್ಲಿ ಕೇವಲ 7 ರನ್‌ ನೀಡಿ 6 ವಿಕೆಟ್‌ ಉಡಾಯಿಸಿದ್ದರು. ಇದರಲ್ಲಿ ಹ್ಯಾಟ್ರಿಕ್‌ ಕೂಡ ಒಳಗೊಂಡಿತ್ತು.

ಕಮಿನ್ಸ್‌, ಲಬುಶೇನ್‌ ಪರಾಕ್ರಮ
12 ಟೆಸ್ಟ್‌ಗಳಿಂದ 59 ವಿಕೆಟ್‌ ಹಾರಿಸಿ ಮೆರೆದಾಡಿದ ಪರಾಕ್ರಮ ಆಸ್ಟ್ರೇಲಿಯದ ವೇಗಿ ಪ್ಯಾಟ್‌ ಕಮಿನ್ಸ್‌ ಅವರದಾಗಿತ್ತು. ಈ ಸಾಧನೆಯಿಂದಾಗಿ ಅವರು ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನೂ ಕಾಯ್ದುಕೊಂಡು ಬಂದರು.
ಆಸ್ಟ್ರೇಲಿಯದ ಮಾರ್ನಸ್‌ ಲಬುಶೇನ್‌ ಅವರ ಬ್ಯಾಟಿಂಗ್‌ ಪರಾಕ್ರಮ ಸಾಟಿಯಿಲ್ಲದ್ದು. 11 ಟೆಸ್ಟ್‌ಗಳಿಂದ 1,104 ರನ್‌ ಪೇರಿಸುವ ಮೂಲಕ ಜಾಗತಿಕ ಕ್ರಿಕೆಟಿನಲ್ಲಿ ಭಾರೀ ಸಂಚಲನ ಮೂಡಿಸಿದರು. ವರ್ಷಾರಂಭದಲ್ಲಿ 110ನೇ ರ್‍ಯಾಂಕಿಂಗ್‌ ಹೊಂದಿದ್ದ ಲಬುಶೇನ್‌, ಕೊನೆಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದ್ದರು.
ತೀರ್ಪುಗಾರನಾಗಿ ಶಿಸ್ತಿನ ಪ್ರದರ್ಶನ ಕಾಯ್ದುಕೊಂಡು ಬಂದ ಇಂಗ್ಲೆಂಡಿನ ರಿಚರ್ಡ್‌ ಇಲ್ಲಿಂಗ್‌ವರ್ತ್‌ “ಡೇವಿಡ್‌ ಶೆಫ‌ರ್ಡ್‌ ಟ್ರೋಫಿ’ಗೆ ಭಾಜನರಾದರು.

ಐಸಿಸಿ ವಾರ್ಷಿಕ ತಂಡಗಳಿಗೆ ಕೊಹ್ಲಿ ನಾಯಕ
2019ರ ಐಸಿಸಿ ವಾರ್ಷಿಕ ಟೆಸ್ಟ್‌ ಹಾಗೂ ಏಕದಿನ ತಂಡಗಳೆರಡಕ್ಕೂ ವಿರಾಟ್‌ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. 2019ರ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕ್ರಿಕೆಟಿಗರು ಈ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಹೊರತುಪಡಿಸಿ ಈ ತಂಡಗಳಲ್ಲಿ ಕಾಣಿಸಿಕೊಂಡ ಇತರ ಭಾರತೀಯರೆಂದರೆ ಮಾಯಾಂಕ್‌ ಅಗರ್ವಾಲ್‌, ರೋಹಿತ್‌ ಶರ್ಮ, ಮೊಹಮ್ಮದ್‌ ಶಮಿ ಮತ್ತು ಕುಲದೀಪ್‌ ಯಾದವ್‌.

ವಿರಾಟ್‌ ಕೊಹ್ಲಿ ಕಳೆದ ವರ್ಷ ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳೆರಡರಲ್ಲೂ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಸಾಧನೆಯನ್ನೂ ದಾಖಲಿಸಿದ್ದರು (254).
ಟೆಸ್ಟ್‌ ಆರಂಭಿಕನಾಗಿ ಟೀಮ್‌ ಇಂಡಿಯಾ ಪ್ರವೇಶಿಸಿದ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ 2 ದ್ವಿಶತಕಗಳ ಮೂಲಕ ಗಮನ ಸೆಳೆದಿದ್ದರು. ಏಕದಿನ ತಂಡದ ಉಪನಾಯಕ ರೋಹಿತ್‌ ಶರ್ಮ ಅವರದು ವಿಶ್ವಕಪ್‌ನಲ್ಲಿ ದಾಖಲೆಯ 5 ಶತಕ ಸಿಡಿಸಿದ ಪರಾಕ್ರಮ. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರದು ಅವಳಿ ಹ್ಯಾಟ್ರಿಕ್‌ ಸಾಧನೆಯಾಗಿತ್ತು. ಬುಮ್ರಾ ಗೈರಲ್ಲಿ ಭಾರತದ ಬೌಲಿಂಗ್‌ ದಾಳಿಯ ಹೊಣೆ ಹೊತ್ತ ಶಮಿ ಏಕದಿನದಲ್ಲಿ 42 ವಿಕೆಟ್‌ ಹಾರಿಸಿ ಮೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next