ರಾಯಚೂರು: ಕೃಷಿ ವಿವಿಯ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ನಡೆಸಿದ ಐಸಿಎಆರ್ ಅಖೀಲ ಭಾರತದ ಪ್ರವೇಶ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ಮರುಪರೀಕ್ಷೆ ನಡೆಸಬೇಕು ಎಂದು ಆಲ್ ಇಂಡಿಯಾ ಅಗ್ರಿಕಲ್ಚರಲ್ ಸ್ಟೂಡೆಂಟ್ಸ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಪ್ರವೀಣ ಕೋಟೆ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ವರ್ಷಗಳ ಬಳಿಕ ಮೊದಲ ಬಾರಿಗೆ ಆನ್‌ಲೈನ್ ಪರೀಕ್ಷೆ ನಡೆಸಿದ್ದು, ದೇಶಾದ್ಯಂತ ಸುಮಾರು 90 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, ಪರೀಕ್ಷಾ ಮಂಡಳಿ ಸಾಕಷ್ಟು ಯಡವಟ್ಟುಗಳನ್ನು ಮಾಡಿದ್ದು, ವರ್ಷಗಟ್ಟಲೇ ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇನ್ನೂ ನಾಲ್ಕು ದಿನಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಕೂಡಲೇ ಮರುಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಜೂ.22ರಂದು ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳಿಗೆ, 23ರಂದು ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಪರೀಕ್ಷಾ ಕೇಂದ್ರ ನೀಡಿದ್ದಲ್ಲದೇ ಕೇವಲ ಮೂರು ದಿನ ಮುಂಚಿತವಾಗಿ ಹಾಲ್ ಟಿಕೆಟ್ ನೀಡಲಾಗಿದೆ. ಅದೂ ಅಲ್ಲದೇ ಪರೀಕ್ಷಾ ಕೇಂದ್ರಗಳ ವಿಳಾಸವೇ ಸರಿಯಾಗಿಲ್ಲ. ಅದನ್ನು ಹುಡುಕುವಷ್ಟರಲ್ಲಿ ವಿದ್ಯಾರ್ಥಿಗಳು ಸುಸ್ತಾಗಿದ್ದರು. ಮೊದಲ ಬಾರಿಗೆ ಆನ್‌ಲೈನ್ ಪರೀಕ್ಷೆ ಕೈಗೊಂಡ ಮಂಡಳಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವ್ಯವಸ್ಥೆ ಮಾಡಿಲ್ಲ. ಒಬ್ಬರ ನಂತರ ಒಬ್ಬರು ಪರೀಕ್ಷೆ ಬರೆಯುವಂತಾಗಿದೆ. ಒಂದೇ ವಿಷಯದ ವಿದ್ಯಾರ್ಥಿಗಳು ಪಕ್ಕ ಪಕ್ಕ ಕುಳಿತು ಪರೀಕ್ಷೆ ಬರೆದಿದ್ದಾರೆ.
ಕೆಲವೆಡೆ ಮೊಬೈಲ್ ಬಳಕೆಗೆ ಅವಕಾಶ ನೀಡಿದರೆ, ಕೆಲವೆಡೆ, ಪರೀಕ್ಷಾ ನಿರ್ವಾಹಕರೇ ನೆರವಾಗಿದ್ದಾರೆ. ಇಂಥ ಹತ್ತಾರು ಸಮಸ್ಯೆಗಳು ದೇಶದ ಎಲ್ಲೆಡೆ ನಡೆದಿದ್ದು, ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದರೆ ವೃಥಾ ಆರೋಪ ಮಾಡದೇ ದಾಖಲೆ ಕೊಡಿ ಎನ್ನುತ್ತಿದ್ದಾರೆ. ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಬೇಕಿದ್ದರೆ ಅವರೇ ದಾಖಲೆ ಪರಿಶೀಲನೆ ಮಾಡಬಹುದು. ಈ ಕುರಿತು ದೇಶದ ಎಲ್ಲೆಡೆಯಿಂದ ಮಾಹಿತಿ ಸಂಗ್ರಹಿಸಿದ್ದು, ಇಂಥ ಸಮಸ್ಯೆ ಎದುರಿಸಿದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಮೇಲ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. ಇದಕ್ಕಿಂತ ಉತ್ತಮ ದಾಖಲೆ ನೀಡಲು ಸಾಧ್ಯವಿಲ್ಲ ಎಂದರು.
ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಮಾಡಿ ಒತ್ತಾಯಿಸಿದ್ದು, ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ದೇಶವ್ಯಾಪಿ ನಡೆದ ಪರೀಕ್ಷೆಯಾದ್ದರಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ. ಅಲ್ಲದೇ, ಪರೀಕ್ಷಾ ಅಕ್ರಮವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಸಂತೋಷಕುಮಾರ, ಅಮರೇಶ, ಅಕ್ಷತಾ, ಮೇಘರಾಜ್, ಸಂಜನಾ ಜೋಶಿ ಪರೀಕ್ಷೆಯಲ್ಲಿ ತಮಗಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.