ನವದೆಹಲಿ: ಒಟಿಟಿ ಮತ್ತು ಡಿಜಿಟಲ್ ನ್ಯೂಸ್ ವೆಬ್‌ಸೈಟ್‌ಗಳ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ “ಸ್ವಯಂ ನಿಯಂತ್ರಣ ಕಾನೂನು’ ರಚಿಸಲು ಮುಂದಾಗಿದೆ. ಈ ವೇದಿಕೆಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಕಾನೂನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮುದ್ರಣ ಮಾಧ್ಯಮಗಳಿಗೆ ಪ್ರಸ್ ಕೌನ್ಸಿಲ್ ಆಫ್ ಇಂಡಿಯಾ, ಚಲನಚಿತ್ರಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಮತ್ತು ಟಿವಿ ಚಾನೆಲ್‌ಗಳನ್ನು ದಿ ಕೇಬಲ್ ಟೆಲಿವಿಜನ್ ನೆಟ್‌ವರ್ಕ್ ರೆಗ್ಯುಲೇಶನ್ ಆ್ಯಕ್ಟ್ ನಿಯಂತ್ರಿಸುತ್ತಿದೆ. ಆದರೆ, ಒಟಿಟಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಇಂಥ ಯಾವುದೇ ಕಾನೂನುಗಳು ಇದುವರೆಗೆ ಇರಲಿಲ್ಲ.
ದೂರುಗಳೇನಿದ್ದವು?: ಅಶ್ಲೀಲ ಸಂದೇಶ, ಅಶ್ಲೀಲ ಭಾಷಾ ಪ್ರಯೋಗದ ಕುರಿತು ಒಟಿಟಿ ಪ್ಲಾಟ್‌ಫಾರಂಗಳ ವಿರುದ್ಧ ದೂರುಗಳು ಬಂದಿದ್ದವು. ನಕಲಿ ಸುದ್ದಿ, ಸುಳ್ಳು ವಿಡಿಯೊ ಪ್ರಸಾರ ಬಗ್ಗೆ ಡಿಜಿಟಲ್ ನ್ಯೂಸ್‌ಗಳು ಆರೋಪ ಎದುರಿಸುತ್ತಿದ್ದವು. ಸ್ವಯಂ ನಿಯಂತ್ರಣ ಕಾಯ್ದೆ ಜಾರಿಯಾದರೆ, ಈ ಮಾಧ್ಯಮಗಳು ಕೂಡ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲು ಸಾಧ್ಯ ಎನ್ನುವುದು ಸರ್ಕಾರದ ಆಶಯ.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪ್ರಯೋಗ; ಕೋವಿಡ್ ನಿರ್ಮೂಲನೆಯತ್ತ ಪ್ರಥಮ ಹೆಜ್ಜೆ
ಪ್ರಸ್ತುತ ಭಾರತದಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್ ಸೇರಿ ಕನಿಷ್ಠ 40 ಒಟಿಟಿ ಪ್ಲಾಟ್‌ಫಾರಂಗಳು ಮತ್ತು ನೂರಾರು ನ್ಯೂಸ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟಿಟಿಯೊಂದಕ್ಕೇ 20 ಕೋಟಿ ಬಳಕೆದಾರರಿದ್ದು, ಭಾರತದಲ್ಲಿ ಇದು ಅಂದಾಜು 1 ಸಾವಿರ ಕೋಟಿ ರೂ. ಮಾರುಕಟ್ಟೆ ಆದಾಯ ಹೊಂದಿದೆ.