Advertisement
ಅಪ್ಪ ಆಟೋ ಡ್ರೈವರ್. ಅಮ್ಮಂದು ಕೂಲಿ ಕೆಲಸ. ಮನೆ ತುಂಬ ಮಕ್ಕಳು. ಬಡತನವೇ ಹೊದ್ದುಕೊಂಡಿರುವ ಕುಟುಂಬ. ಆಗಷ್ಟೇ ಡಿಗ್ರಿ ಪೂರೈಸಿದ್ದ ಅನ್ಸಾರ್ ಶೇಕ್, ಒಂದು ದಿನ ಓಡೋಡಿ ಬಂದು “ಅಮ್ಮಾ ನಾನು ಪಾಸಾಗ್ಬಿಟ್ಟೆ’ ಎಂದು ಬಿಕ್ಕಳಿಸಿದಾಗ, ಆತ ಡಿಗ್ರಿ ರಿಸಲ್ಟ್ ಹೇಳುತ್ತಿದ್ದಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅವನು ಪಾಸ್ ಮಾಡಿದ್ದು ಬರೀ ಪದವಿ ಆಗಿರಲಿಲ್ಲ; ಈ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಯಾದ ಐಎಎಸ್ ಆಗಿತ್ತು!
Related Articles
Advertisement
ಬದ್ಧತೆಯ ಅಗ್ನಿಪರೀಕ್ಷೆ: “ಎಲ್ಲ ಕಾಂಪಿಟೀಟಿವ್ ಎಕ್ಸಾಂ ಗಳನ್ನೂ ಬರೀತಿ ದ್ದೀನಿ. ಐಎಎಸ್ ನನ್ನ ಅಂತಿಮ ಗುರಿ’ ಎನ್ನುವವರಿಗೆ ಅದು ದಕ್ಕುವ ಹಣ್ಣಲ್ಲ. ಅದೊಂದನ್ನೇ ಗಮ್ಯವಾಗಿಟ್ಟುಕೊಂಡು ಮುನ್ನಡೆಯುವವರ ಮುಡಿಗಷ್ಟೇ ಏರುವ ಯಶಸ್ಸಿನ ಕಿರೀಟ. ಅಂಥದ್ದೊಂದು ಬದ್ಧತೆ ಸಿವಿಲ್ ಸರ್ವಿಸ್ ಪರೀಕ್ಷೆಗಳ ಮೂಲಮಂತ್ರ.
ಯಾರು ಬರೆಯಬಹುದು?: 21 ವರ್ಷ ವಯಸ್ಸಿನವರು ಅಂದರೆ ಪದವಿಯ ಅಂತಿಮ ವರ್ಷದಲ್ಲಿರುವವರು ಐಎಎಸ್ ಪರೀಕ್ಷೆ ಬರೆಯಲು ಅರ್ಹರು. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಎಸ್‌ಡಬ್ಲೂ, ಇಂಜಿನಿಯರಿಂಗ್, ಮೆಡಿಕಲ್- ಯಾವ ಡಿಗ್ರಿ ಓದಿದವರೂ ಐಎಎಸ್ ಬರೆಯಬಹುದು. ಹಾಗೆಂದು ಡಿಗ್ರಿ ಮುಗಿಯುತ್ತಿದ್ದಂತೆ ಒಂದು ಅಟೆಂಪ್ಟ್ ಮಾಡಿಬಿಡೋಣ ಎನ್ನುವುದು ಜಾಣತನವಲ್ಲ. ಏಕೆಂದರೆ, ಐಎಎಸ್‌ನಲ್ಲಿ ಪ್ರತಿ ಪ್ರಯತ್ನವೂ ಅಮೂಲ್ಯ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ತಮ್ಮ 32ನೇ ವಯಸ್ಸಿನವರೆಗೆ 6 ಬಾರಿ ಮಾತ್ರ ಪರೀಕ್ಷೆ ಬರೆಯಬಹುದು. ಹಿಂದುಳಿದ ವರ್ಗಕ್ಕೆ ಸೇರಿದವರು 35 ವರ್ಷದವರೆಗೆ 9 ಬಾರಿ ಬರೆಯಬಹುದು. ಎಸ್‌ಸಿ/ ಎಸ್‌ಟಿ ಸಮುದಾಯದ ಅಭ್ಯರ್ಥಿಗಳು 37 ವರ್ಷದವರೆಗೆ ಮಾತ್ರ ಐಎಎಸ್ ಬರೆಯಬಹುದು, ಪ್ರಯತ್ನದ ಮಿತಿ ಇಲ್ಲ.
ಏನನ್ನು ಓದಬೇಕು?: ಮೊದಲನೆಯ ಹಂತದ ಪರೀಕ್ಷೆಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನ, ಭಾರತ ಹಾಗೂ ಸ್ವಾತಂತ್ರ ಹೋರಾಟದ ಇತಿಹಾಸ, ಭಾರತೀಯ ಮತ್ತು ಜಾಗತಿಕ ಭೂಗೋಳಶಾಸ್ತ್ರ, ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ, ಸಂವಿಧಾನ, ಪಂಚಾಯತ್‌ರಾಜ್, ಆರ್ಥಿಕತೆ, ಬಡತನ, ಪರಿಸರ, ಜೀವ ವೈವಿಧ್ಯತೆ, ಹವಾಮಾನ ಬದಲಾವಣೆ, ಸಾಮಾನ್ಯ ಜ್ಞಾನ ಮುಂತಾದ ವಿಷಯಗಳ ಬಗ್ಗೆ ಓದಿಕೊಳ್ಳಬೇಕು. ಹಾಗೆಯೇ, ವಿಷಯಗ್ರಹಿಕೆ, ಸಂವಹನ ಕಲೆ, ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಪರಿಹಾರ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಪ್ರಾಥಮಿಕ ಗಣಿತಜ್ಞಾನ, ದತ್ತಾಂಶ ವಿಶ್ಲೇಷಣೆ ಮುಂತಾದ ವಿಷಯಗಳ ತಿಳಿವಳಿಕೆಯೂ ಇರಬೇಕು.
ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ಮತ್ತು ಯಾವುದಾದರೂ ಭಾರತೀಯ ಭಾಷೆ (ಉದಾ: ಕನ್ನಡ) ಕುರಿತ ಪ್ರತ್ಯೇಕ ಪತ್ರಿಕೆಗಳಿರುತ್ತವೆ. ಮೂರನೆಯ ಪತ್ರಿಕೆ ಪ್ರಬಂಧ ಬರವಣಿಗೆ. ಮುಂದಿನ ನಾಲ್ಕು ಪತ್ರಿಕೆಗಳು ಸಾಮಾನ್ಯ ಅಧ್ಯಯನದ ಬಗ್ಗೆ ಇರುತ್ತವೆ. ಪೂರ್ವಭಾವಿ ಪರೀಕ್ಷೆಗೆ ಹೇಳಿದ ವಿಷಯಗಳೇ ಇಲ್ಲಿ ಹೆಚ್ಚು ಆಳ ಮತ್ತು ವಿಸ್ತಾರವಾಗಿ ಇರುತ್ತವೆ. ಕೊನೆಯ ಎರಡು ಪತ್ರಿಕೆಗಳು ನಮ್ಮ ಐಚ್ಛಿಕ ವಿಷಯದ ಬಗ್ಗೆ ಇರುತ್ತವೆ. ಯುಪಿಎಸ್ಸಿ ಸೂಚಿಸುವ 26 ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ನಾವು ಪದವಿಯಲ್ಲಿ ಓದಿದ ಯಾವುದಾದರೊಂದು ವಿಷಯ ಇದ್ದೇ ಇರುತ್ತದೆ.
ತಯಾರಿ ಹೇಗಿರಬೇಕು?: ಐಎಎಸ್ ಪರೀಕ್ಷೆಗೆ ಗಂಭೀರವಾಗಿ ತಯಾರಿ ಮಾಡುವವರೆಲ್ಲ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಓದುವುದರಿಂದ ಆರಂಭಿಸುವುದು ಸಾಮಾನ್ಯ. ಐಎಎಸ್ ಪರೀಕ್ಷೆಗೆ ಓದಬೇಕಾಗಿರುವ ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಈ ಪಠ್ಯಪುಸ್ತಕಗಳಲ್ಲಿ ಲಭ್ಯರುವುದರಿಂದ 6ನೇ ತರಗತಿಯಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳನ್ನೂ ಒಮ್ಮೆ ಓದಿಕೊಳ್ಳುವುದು ಸೂಕ್ತ. ಅದಾದ ಬಳಿಕ ಆಯಾ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪುಸ್ತಕಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.
ಈ ಹಂತದಲ್ಲಿ ಐಎಎಸ್ ಪರೀಕ್ಷೆಯ ವಿಸ್ತೃತ ಸಿಲೆಬಸ್ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಯುಪಿಎಸ್‌ಸಿಯ ವೆಬ್‌ಸೈಟ್ https://upsc.gov.inನಿಂದ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೇಲೆ ತಿಳಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳು ಹಾಗೂ ಎಲ್ಲ ವಿಷಯಗಳೂ ಇರುವ ಸಿದ್ಧ ಅಧ್ಯಯನ ಸಾಮಗ್ರಿಗಳು ಈಗ ಪುಸ್ತಕದಂಗಡಿಗಳಲ್ಲಿ ಹೇರಳವಾಗಿ ಲಭ್ಯ. ಆದರೆ, ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಪ್ರಯೋಜನವಿಲ್ಲ. ಅದರಿಂದ ಗೊಂದಲವೇ ಹೆಚ್ಚು. ಪುಸ್ತಕ ಆಯ್ಕೆ ಮಾಡುವಾಗ ಗುಣಮಟ್ಟದ ಬಗ್ಗೆ ಎಚ್ಚರ ಅಗತ್ಯ.
ಇಂಗ್ಲಿಷ್ ಚೆನ್ನಾಗಿ ಬಲ್ಲವರಿಗೆ ಮಾತ್ರ ಐಎಎಸ್ ಒಲಿಯುತ್ತದೆ ಎಂಬೊಂದು ತಪ್ಪು ತಿಳಿವಳಿಕೆ ಬಹುಮಂದಿಯಲ್ಲಿದೆ. ಇಂಗ್ಲಿಷ್ ತಿಳಿವಳಿಕೆ ಇರುವುದರಿಂದ ಉತ್ತಮ ಪುಸ್ತಕಗಳನ್ನು ಓದಿ ಒಳ್ಳೆಯ ನೋಟ್ಸ್ ಮಾಡಿಕೊಳ್ಳಬಹುದು. ಆದರೆ, ಅದೇ ಮುಖ್ಯವಲ್ಲ. ಕನ್ನಡದಲ್ಲೇ ಮುಖ್ಯ ಪರೀಕ್ಷೆಯನ್ನು ಬರೆಯುವುದಕ್ಕೆ ಹಾಗೂ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ಐಎಎಸ್ ಪಾಸಾಗಲು ದೆಹಲಿ, ಹೈದರಾಬಾದ್‌ನಂಥ ಮಹಾನಗರಗಳಲ್ಲಿ ಕೋಚಿಂಗ್ ಪಡೆಯುವುದು ಅನಿವಾರ್ಯ ಎಂದು ತಿಳಿದುಕೊಂಡಿರುವವರೂ ಬಹಳ.
ಆರ್ಥಿಕವಾಗಿ ಹಿಂದುಳಿದಿರುವವರು ಸಾವಿರಾರು ರೂ. ಖರ್ಚು ಮಾಡಿ ಇಂಥ ತರಬೇತಿ ಪಡೆಯುವುದು ಹೇಗೆ ಎಂಬ ಆತಂಕವೂ ಇದೆ. ಆದರೆ, ಇವೆಲ್ಲ ನಿಜವಲ್ಲ. ಸ್ವಂತ ಅಧ್ಯಯನದಿಂದ ಯಶಸ್ಸು ಸಾಧಿಸಿದ ನೂರಾರು ಮಂದಿ ನಮ್ಮೊಂದಿಗಿದ್ದಾರೆ. ಅತ್ಯುತ್ತಮ ಅಧ್ಯಯನ ಸಾಮಗ್ರಿಗಳಲ್ಲದೆ, ಸುಲಭವಾಗಿ ಕೈಗೆಟುಕುವ ಆನ್‌ಲೈನ್ ವೇದಿಕೆಗಳಿಂದ ಅನೇಕ ಬಡಹುಡುಗರ ಕನಸು ನನಸಾಗಿದೆ. ಸಾಧಿಸುವ ಛಲವಿದ್ದರೆ ಯಶಸ್ಸಿನ ಬಲ ತಾನಾಗಿಯೇ ಒಲಿದುಬರುತ್ತದೆ. ಕನಸು ಕಂಡರೆ ಸಾಲದು, ಅದಕ್ಕೆ ಕಸುವು ತುಂಬುವ ದೃಢ ನಿರ್ಧಾರವೂ ಬೇಕು.
ಹೇಗಿರುತ್ತದೆ, ಐಎಎಸ್ ಪರೀಕ್ಷೆ?: ಸ್ಕ್ರೀನಿಂಗ್ ಟೆಸ್ಟ್… ವಸ್ತುನಿಷ್ಠ ಮಾದರಿಯ ಎರಡು ಪತ್ರಿಕೆಗಳಿರುತ್ತವೆ. ತಲಾ ಎರಡು ಗಂಟೆ ಅವಧಿಯವು. ಇವುಗಳ ಅಂಕಗಳನ್ನು ರ್‍ಯಾಂಕಿಗೆ ಪರಿಗಣಿಸುವುದಿಲ್ಲವಾದರೂ ಮುಖ್ಯ ಪರೀಕ್ಷೆ ಬರೆಯಲು ಇದರಲ್ಲಿ ತೇರ್ಗಡೆಯಾಗಬೇಕು. ಮುಖ್ಯ ಪರೀಕ್ಷೆ ವಿಸ್ತೃತ ಉತ್ತರ ಮಾದರಿಯದ್ದು. ಇಲ್ಲಿ 9 ಪತ್ರಿಕೆಗಳನ್ನು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದ ಮೇಲೆ ಅತ್ಯಂತ ನಿರ್ಣಾಯಕವಾದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ. ವಿವಿಧ ವಿಷಯಗಳ ಕುರಿತ ಅಭ್ಯರ್ಥಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ, ಬದ್ಧತೆ, ನಾಯಕತ್ವ, ದೂರದರ್ಶಿತ್ವ ಮುಂತಾದವುಗಳನ್ನು ತಜ್ಞರ ಸಮಿತಿಯೊಂದು ಒರೆಗಲ್ಲಿಗೆ ಹಚ್ಚುತ್ತದೆ. ಈ ಹಂತವನ್ನೂ ದಾಟಿ ಗೆಲ್ಲುವವನೇ ಐಎಎಸ್ ಶೂರ.
* ಸಿಬಂತಿ ಪದ್ಮನಾಭ ಕೆ.ವಿ.