Advertisement

ಮುಂದುವರಿದ ಮಹಿಳಾಧಿಕಾರಿಗಳ ರಂಪಾಟ

12:40 AM Feb 23, 2023 | Team Udayavani |

ಬೆಂಗಳೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ನಡುವಿನ ಬಹಿರಂಗ ರಂಪಾಟ ಬುಧವಾರ ಮತ್ತೂಂದು ಮಜಲು ಪಡೆದಿದೆ. ಇತ್ತ ರೂಪಾ ಅವರ ಮಾನಹಾನಿಕಾರಕ ಹೇಳಿಕೆಗಳಿಗೆ ನಿರ್ಬಂಧಕಾಜ್ಞೆ ಕೋರಿ ರೋಹಿಣಿ ಸಿಂಧೂರಿ ನ್ಯಾಯಾಲಯದ ಬಾಗಿಲು ಬಡಿದಿದ್ದಾರೆ.

Advertisement

ಇನ್ನೊಂದೆಡೆ ಸಾಮಾಜಿಕ ಮಾಧ್ಯಮಗಳಿಗೆ ಹೋಗುವುದರ ವಿರುದ್ಧ ಸರಕಾರ ಅಧಿಕೃತ ಎಚ್ಚರಿಕೆ ನೀಡಿದ್ದರೂ, ಅದನ್ನು ಲೆಕ್ಕಿಸದೇ ರೂಪಾ, ರೋಹಿಣಿ ಅವರ ಭ್ರಷ್ಟಾಚಾರದತ್ತ ಗಮನ ಕೇಂದ್ರೀಕರಿಸುವಂತೆ ಮಾಧ್ಯಮಗಳಿಗೆ ವಿನಂತಿಸಿದ್ದಾರೆ. ಇದೆಲ್ಲದರ ಮಧ್ಯೆ ಗಂಗರಾಜು ಎನ್ನುವ ಆರ್‌ಟಿಐ ಕಾರ್ಯಕರ್ತ ತಾವು ರೂಪಾ ಅವರೊಂದಿಗೆ ದೂರವಾಣಿ ಮೂಲಕ ನಡೆಸಿರುವ ಸಂವಾದ ಎಂದು ಸುಮಾರು 2 ನಿಮಿಷಗಳ ಆಡಿಯೋ ತುಣುಕೊಂದನ್ನು ಹರಿಯಬಿಟ್ಟಿದ್ದಾರೆ.

ರೂಪಾ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ರೋಹಿಣಿ ಮನವಿ ಮಾಡಿದ್ದು ವಿಚಾರಣೆ ನಡೆಸಿ ಮಧ್ಯಂತರ ಆದೇಶವನ್ನು 74ನೇ ಸಿಟಿ ಸಿವಿಲ್‌ ಕೋರ್ಟ್‌ ಕಾಯ್ದಿರಿಸಿದೆ. ತಡೆಯಾಜ್ಞೆ ನೀಡಬೇಕೇ, ಬೇಡವೇ ಎಂದು ಗುರುವಾರ ತೀರ್ಪು ಪ್ರಕಟಿಸಲಿದೆ.

ರೋಹಿಣಿ ತಮ್ಮ ದೂರಿನಲ್ಲಿ ರೂಪಾ ಮೌದ್ಗಿಲ್‌ ಸೈಬರ್‌ ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದರು. ಐಪಿಎಸ್‌ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಯಿದೆ. ಮೊಬೈಲ್ ನಲ್ಲಿನ ಮಾಹಿತಿ ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದಾರೆ. ಅವರ ಕ್ರಮ ಸಂಪೂರ್ಣ ಕಾನೂನು ಬಾಹಿರ ಎಂದು ವಾದಿಸಿದ್ದಾರೆ.

ಸೂಕ್ತ ಪ್ರಾಧಿಕಾರದಲ್ಲಿ ರೂಪಾ ವಿರುದ್ಧ ದೂರು ನೀಡಬಹುದಿತ್ತು ಎಂದು ವಿಚಾರಣೆ ಸಂದರ್ಭದಲ್ಲಿ ರೋಹಿಣಿ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ರೋಹಿಣಿ ಪರ ವಕೀಲರು ಪ್ರತಿಕ್ರಿಯಿಸಿ, ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿರುವುದಾಗಿ ಉತ್ತರಿಸಿದರು. ನಾಗರಿಕ ಸೇವೆಗಳ ನಿಯಮಾವಳಿ ಅನುಸಾರ ದೂರು ನೀಡಿದ್ದೇನೆ. ಪೊಲೀಸರಿಗೂ ರೂಪಾ ಮೌದ್ಗಿಲ್‌ ವಿರುದ್ಧ ದೂರು ದಾಖಲಿಸಿದ್ದೇವೆ.

Advertisement

ಸರಕಾರದ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ಅವರು ಪಾಲಿಸುತ್ತಿಲ್ಲ . ಸರಕಾರದ ಸುತ್ತೋಲೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ ಎಂದು ರೋಹಿಣಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.ಇನ್ನು ಈ ಪ್ರಕರಣದಲ್ಲಿ ರೋಹಿಣಿ ಅವರು ಸಾಮಾಜಿಕ ಜಾಲತಾಣ, ಮಾಧ್ಯಮಗಳನ್ನೂ ಪ್ರತಿವಾದಿಯನ್ನಾಗಿಸಲಾಗಿದೆ. ರೂಪಾ ಅವರನ್ನು 60ನೇ ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

ಮತ್ತೆ ಫೇಸ್‌ಬುಕ್‌ನಲ್ಲಿ ರೂಪಾ ಆರೋಪ
ಮಾಧ್ಯಮ ಬಳಕೆಯ ಬಗ್ಗೆ ಸರಕಾರ ನೀಡಿದ ಎಚ್ಚರಿಕೆಗೆ ಸೊಪ್ಪು ಹಾಕದ ರೂಪಾ ಮೌದ್ಗಿಲ್‌ ಬುಧವಾರ ಫೇಸ್‌ಬುಕ್‌ನಲ್ಲಿ ಮತ್ತೆ ರೋಹಿಣಿ ವಿರುದ್ಧ ಕಿಡಿ ಕಾರಿದ್ದಾರೆ. ನಾನು ರೋಹಿಣಿ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಮಾಧ್ಯಮಗಳು ದಯಮಾಡಿ ಗಮನ ಕೇಂದ್ರಿಕರಿಸಬೇಕು. ಜನಸಾಮಾನ್ಯರಿಗೆ ಅತಿ ಹೆಚ್ಚು ಬಾಧೆ ಕೊಡುವ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ಯಾರನ್ನೂ ತಡೆದಿಲ್ಲ. ಇದೇ ವೇಳೆ ಕರ್ನಾಟಕದಲ್ಲಿ ಒಬ್ಬ ಐಎಎಸ್‌ ಅಧಿಕಾರಿ ಸತ್ತಿದ್ದು, ತಮಿಳುನಾಡಿನಲ್ಲಿ ಒಬ್ಬ ಐಪಿಎಸ್‌ ಅಧಿಕಾರಿ ಸತ್ತಿದ್ದು, ಕರ್ನಾಟಕದಲ್ಲಿ ಈಗಾಗಲೇ ಒಂದು ಐಎಎಸ್‌ ದಂಪತಿ ವಿಚ್ಚೇದನ ಪಡೆದಿರುವ ಕ್ರಮದ ಬಗ್ಗೆ ವಿಚಾರಣೆ ನಡೆಸಬೇಕು. ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ದಯಮಾಡಿ ಸಂಸಾರಕ್ಕೆ ಅಡ್ಡಿಯಾಗುವ ನಡೆಯನ್ನು ಪ್ರದರ್ಶಿಸುವ ಅತಿಕ್ರಮಿಯನ್ನು ಪ್ರಶ್ನಿಸಿ. ಇಲ್ಲದೆ ಹೋದರೆ, ಇನ್ನೂ ಅನೇಕ ಕುಟುಂಬಗಳು ನಾಶಗೊಳ್ಳುತ್ತವೆ. ನಾನು ಬಲಿಷ್ಠ ಮಹಿಳೆ. ನಾನು ಹೋರಾಟ ನಡೆಸುತ್ತೇನೆ. ನಾನು ಎಲ್ಲ ಮಹಿಳಾ ಬಲಿಪಶುಗಳ ಪರವಾಗಿ ಹೋರಾಟ ಮಾಡುತ್ತೇನೆ. ಎಲ್ಲ ಮಹಿಳೆಯರಿಗೆ ಹೋರಾಡುವ ಶಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ದಯಮಾಡಿ ಧ್ವನಿಯಾಗಿ. ಧನ್ಯವಾದಗಳು ಎಂದು ಹೇಳಿದ್ದಾರೆ.

ಆಡಿಯೋ ಬಿಡುಗಡೆ
ಈ ಮಧ್ಯೆ ಗಂಗರಾಜು ಅವರು ತಾವು ರೂಪಾ ಅವರ ಜತೆ ನಡೆಸಿದ ಸಂಭಾಷಣೆ ಎಂದು ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ರೋಹಿಣಿ ಅವರನ್ನು ರೂಪಾ ಅವರು ಕ್ಯಾನ್ಸರ್‌ ಇದ್ದಂತೆ, ಅವರಿಂದ ನನ್ನ ಸಂಸಾರವೇ ಸರಿ ಇಲ್ಲ ಎಂದು ಹೇಳಿದ್ದಾರೆ. ಹಾಗೆಯೇ ರೋಹಿಣಿ ಅವರು ತನ್ನ ಗಂಡನ ರಿಯಲ್‌ ಎಸ್ಟೇಟ್‌ ವ್ಯವಹಾರ ಪ್ರಮೋಟ್‌ ಮಾಡಲು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಜಾಗ ತೆಗೆದುಕೊಳ್ಳಲು ಮನೀಶ್‌ ಮೌದ್ಗಿಲ್‌ ಅವರ ನೆರವು ಪಡೆದಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಈ ಮಧ್ಯೆ ಗಂಗರಾಜು ಅವರು ನಿಮ್ಮದು ಒಂದು ಪೋಟೋ ನಿನ್ನೆ ನನಗೆ ಬಂದಿದೆ, ನಾನು ಅದನ್ನು ಬಿಡುಗಡೆ ಮಾಡಲು ಆಗುತ್ತಾ? ನಿಮ್ಮ ಮೊಬೈಲ್‌ನಿಂದ ಈ ಪೋಟೋವನ್ನು ಯಾರಿಗೋ ಕಳುಹಿಸಿದ್ದೀರಿ ಎಂದು ರೂಪಾ ಅವರಿಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next