ಲಕ್ನೋ : ಕರ್ನಾಟಕ ಆಹಾರ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಗುರುವಾರ ಮಹತ್ವದ ತಿರುವು ದೊರಕಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೇಲೆ ಸಾಯುವ ಮುನ್ನ ಹಲ್ಲೆ ನಡೆದಿರುವುದು ಕಂಡು ಬಂದಿದೆ.
ತಿವಾರಿ ಅವರ ಸಾವು ಸಹಜ ಸಾವಲ್ಲ. ಅವರು ಹಲ್ಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
ತಿವಾರಿ ನಿಗೂಢ ಸಾವಿನ ಸುತ್ತ ಹುಟ್ಟಿರುವ ಸಂಶಯಗಳು ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು,ತಿವಾರಿ ಅವರ ಮೃತದೇಹ ಹಜರತ್‌ಗಂಜ್ ಪ್ರದೇಶದ ರಸ್ತೆ ಬದಿ ಪತ್ತೆಯಾದ 7 ದಿನಗಳ ಬಳಿಕ ಈ ಬೆಳವಣಿಗೆಗಳು ನಡೆದಿವೆ.
ಸೋಮವಾರ ತಿವಾರಿ ಅವರ ತಾಯಿ ಮತ್ತು ಸಹೋದರ ಮಾಯಾಂಕ್ ಅವರು ಸಿಎಂ ಯೋಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಉತ್ತರಪ್ರದೇಶ ಪೊಲೀಸ್ ತನಿಖೆ ತೃಪ್ತಿದಾಯಕವಾಗಿಲ್ಲ. ತನ್ನ ಇಲಾಖೆ ಯಲ್ಲಿನ ಅತೀ ದೊಡ್ಡ ಹಗರಣವನ್ನು ಬಯಲಿಗೆಳೆಯಲು ಮುಂದಾಗಿದ್ದುದ ರಿಂದ ತಿವಾರಿ ಅವರನ್ನು ಭ್ರಷ್ಟ ಅಧಿಕಾರಿಗಳೇ ಕೊಲೆ ಮಾಡಿಸಿರಬಹುದು ಎಂಬ ಶಂಕೆಯಿದೆ ಎಂದು ಅವರು ಆರೋಪಿಸಿದ್ದರು. ಕುಟುಂಬ ಸದಸ್ಯರ ಮಾತುಗಳನ್ನು ಆಲಿಸಿದ ಬಳಿಕ ಸರಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.
ಇದೀಗ ಪ್ರಕರಣ ಗಂಭೀರ ಸ್ವರೂಪ ಮತ್ತು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿರುವ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸುವ ಎಲ್ಲಾ ಸಾಧ್ಯತೆಗಳಿವೆ.