ಕೋಲಾರ: ಇಡೀ ಭಾರತದಲ್ಲಿ ಹೆಚ್ಚು ದಲಿತರಿರುವ 2ನೇ ಲೋಕಸಭಾ ಕ್ಷೇತ್ರ ಕೋಲಾರವಾಗಿದ್ದು, ಕಳೆದ ಸೋಮವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಪರಿಶಿಷ್ಟರ ಸಭೆಯಲ್ಲಿ ಜಿಲ್ಲೆಗೆ ಐಎಎಸ್, ಕೆಎಎಸ್ ಕೋಚಿಂಗ್ ಕೇಂದ್ರವನ್ನು ಆರಂಭಿಸುವಂತೆ ತಾವು ಮಾಡಿದ ಮನವಿಗೆ ಸಿಎಂ ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ದಲಿತ ಉದ್ಯಮಿದಾರರ (ಡಿಕ್ಕಿ) ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಂದಿಗೆ ಸಾಲಸೌಲಭ್ಯ ಕಲ್ಪಿಸಿದ್ದು, ಉದ್ದಿಮೆದಾರರಾಗಲು ಜಿಲ್ಲೆಯವರು ಮುಂದೆ ಬಂದರೆ ಸಹಾಯ ಮಾಡುವುದಾಗಿ ಸಂಸದರು ಭರವಸೆ ನೀಡಿದರು. ದಲಿತ ಉದ್ಯಮಿಗಳು ಸೇರಿ ಡಿಕ್ಕಿ ಎಂದು ಸಂಘವನ್ನು ಸ್ಥಾಪನೆ ಮಾಡಿಕೊಂಡಿದ್ದೀರಿ. ದೇಶದಲ್ಲಿ 10 ಸಾವಿರ, ರಾಜ್ಯದಲ್ಲಿ 1 ಸಾವಿರ ಮಂದಿ ಸದಸ್ಯರಿದ್ದು, ಕೋಲಾರ ಜಿಲ್ಲೆಯಲ್ಲಿ 40 ಮಂದಿ ಇದ್ದೀರಿ. ನಾನು ಸಂಸದನಾಗಿ ಆಯ್ಕೆಗೊಂಡು 4 ವರ್ಷಗಳಾಗಿದೆ. ಈವರೆಗೂ ನನ್ನ ಬಳಿ ಬಂದು ಏನಾದರೂ ಸಮಸ್ಯೆಗಳನ್ನು ಹೇಳಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಇದೆಲ್ಲವನ್ನು ನೋಡುತ್ತಿದ್ದರೆ ನಿಮ್ಮಲ್ಲಿ ಒಗ್ಗಟ್ಟು ಇಲ್ಲ ಅನ್ನೋದು ಗೊತ್ತಾಗುತ್ತಿದೆ. ಜಿ.ಶ್ರೀನಿವಾಸ್ ಎಂಬುವವರು ಅವರದ್ದೂ ಒಂದು ಸಂಸ್ಥೆ ಮಾಡಿ ಒಂದೇ ಸಮುದಾಯಕ್ಕೆ 23 ಎಕರೆ ಮಂಜೂರು ಮಾಡಿರುವುದು ತಿಳಿದುಬಂದಿದೆ. ಜಿಲ್ಲೆಯನ್ನು ಹಾಳು ಮಾಡಲು 4-5 ಜನ ಹುಟ್ಟಿಕೊಂಡಿದ್ದಾರೆ. ನೀವೆಲ್ಲರೂ ಒಗ್ಗಟ್ಟಾಗಬೇಕು ಎಂದರು.
ಕೆಐಡಿಬಿಯಲ್ಲಿ ಜಾಗ ಮಾಡಿಕೊಂಡು ಬೇರೆ ಕಂಪನಿಯವರಿಗೆ ನೀಡುವುದು ಕಂಡುಬರುತ್ತಿದೆ. ಕೆಲಸ ಕೊಡುವುದಾಗಿ ಜಾಗ ಪಡೆದು 10 ವರ್ಷವಾದರೂ ಉದ್ಯಮ ಆರಂಭಿಸದಿರುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಳ್ಳಿ. ಸಿಲ್ಕ್ ಟೆಕ್ಸ್‌ಟೆ„ಲ್ ಪಾರ್ಕ್ ಮಾಡುತ್ತೇವೆ. ಕೈಗಾರಿಕೆಗಳಿಗೆ ಭೂಮಿ ನೀಡುವವರಿಗೆ ಕಸ ಗುಡಿಸುವುದು, ಸೆಕ್ಯೂರಿಟಿ ಕೆಲಸ ಕೊಟ್ಟು ಅನ್ಯಾಯ ಮಾಡುವುದು ನಿಲ್ಲಬೇಕು. ಮುಂದಿನ ಪೀಳಿಗೆಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬೇಕು. ದಲಿತರಿಗೆ ನೀಡಿದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಉದ್ಯಮಿಗಳಾಗಲು ಆಸಕ್ತಿ ಇರುವವರು ಮುಂದೆ ಬನ್ನಿ. 25-30 ಕೈಗಾರಿಕೆಯವರನ್ನು ಕೋಲಾರಕ್ಕೆ ಕರೆಯಿಸುವೆ. ಅನುಕೂಲ ಮಾಡಿಕೊಳ್ಳಿ, ಮಾ.4ರ ಶನಿವಾರ ಮತ್ತೂಮ್ಮೆ ಸಭೆ ಮಾಡೋಣ, ನಿಮ್ಮ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ತನ್ನಿ, ನಿಮ್ಮೊಂದಿಗೆ ನಾನು ಸದಾ ಇರುವೆ ಎಂದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ರಾಚೂರಿ, ಮಾಜಿ ಶಾಸಕ ಎಂ.ನಾರಾಯಸ್ವಾಮಿ, ಡಿಕ್ಕಿ ರಾಷ್ಟ್ರೀಯ ಉಪಾಧ್ಯಕ್ಷ ರಾಜಾನಾಯಕ್, ಜಿಲ್ಲಾಧ್ಯಕ್ಷ ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಸದಸ್ಯ ಕಿರಣ್, ಜಿಲ್ಲಾ ಜಾಗೃತಿ ಸಭೆಯ ಸದಸ್ಯ ಬೆಳಮಾರನಹಳ್ಳಿ ಆನಂದ್ ಇತರರಿದ್ದರು.