Advertisement

ಛಲ, ಪರಿಶ್ರಮವಿದ್ದರೆ ಐಎಎಸ್‌, ಐಪಿಎಸ್‌ ಹುದ್ದೆ

10:07 PM Jul 19, 2019 | Lakshmi GovindaRaj |

ಮೈಸೂರು: ವಿದ್ಯಾರ್ಥಿಗಳು ಕನಸು ಕಾಣುವ ಜೊತೆಗೆ ಕನಸನ್ನು ಸಾಕರ ಮಾಡಿಕೊಳ್ಳುವ ಇಚ್ಛಾಶಕ್ತಿಯನ್ನು ಹೊಂದಿರಬೇಕು ಎಂದು ಕರ್ನಾಟ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿದ್ಯಾಶಂಕರ್‌ ಹೇಳಿದರು.

Advertisement

ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 2019ರ ಐಎಎಸ್‌/ಕೆಎಎಸ್‌ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದ ಶುಭಹಾರೈಕೆ ಸಮಾರಂಭದಲ್ಲಿ ಮಾತನಾಡಿದರು.

ಐಎಎಸ್‌, ಐಪಿಎಸ್‌ನಂತಹ ಪರೀಕ್ಷೆಗಳನ್ನು ಎದುರಿಸಲು ತರಬೇತಿಗಾಗಿ ದೆಹಲಿಗೆ ತೆರಳಬೇಕು ಎಂದೇನಿಲ್ಲ. ನಮ್ಮಲ್ಲಿ ಓದುವ ಛಲ ಮತ್ತು ಪರಿಶ್ರಮ ಇದ್ದರೆ, ಎಲ್ಲಿಯಾದರೂ ಕುಳಿತು ಓದಬಹುದು. ಸಾಕಷ್ಟು ಮಂದಿ ಮನೆಯಲ್ಲಿ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ಕೋಚಿಂಗ್‌ ಸೆಂಟರ್‌ಗಳಲ್ಲಿ ಓದಿ ಯಶಸ್ಸುಗಳಿಸಿದ್ದಾರೆ ಎಂದು ಹೇಳಿದರು.

ನಗರದ ಪ್ರದೇಶದ ಬಹಳಷ್ಟು ವಿದ್ಯಾರ್ಥಿಗಳಿಗೆ ಎಲ್ಲವೂ ಸುಲಭವಾಗಿ ಸಿಗಬೇಕು ಎಂಬ ಮನೋಭಾವವಿದೆ. ಆದರೆ, ಇದು ಸರಿಯಾದುದ್ದಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಕಲಿಯಬೇಕು, ಹುನ್ನತ ಹುದ್ದೆ ಪಡೆಯಬೇಕು ಎಂಬ ಆಸೆ, ಕನಸು ಹಾಗೂ ಧಾವಂತ ಇರುತ್ತದೆ. ಈ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಹಂತದಲ್ಲಿರುವಾಗಲೆ ಸಿಗುವ ಪ್ರೇರಣೆ ಬಹಳ ಮುಖ್ಯವಾಗಿರುತ್ತದೆ. ಪ್ರೇರಣೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಮ್ಮ ಎದುರಿಗೆ ಸಾಕಷ್ಟು ನಕರಾತ್ಮಕ ಅಂಶಗಳು ಇದ್ದರೂ, ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ, ನಮ್ಮ ಗುರಿಯತ್ತ ಹೆಚ್ಚು ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಸಾಧನೆಗೆ ಯಾವುದೇ ಅಡ್ಡ ಮಾರ್ಗಗಳು ಇರುವುದಿಲ್ಲ. ಬದಲಿಗೆ ಕಠಿಣ ಪರಿಶ್ರಮ, ಶ್ರದ್ಧೆ, ಆತ್ಮವಿಶ್ವಾಸ ಇರಬೇಕು. ನಾನು ಸಾಧನೆ ಮಾಡುತ್ತೇನೆ, ಸಾಧಿಸುತ್ತೇನೆ ಎಂಬ ದೃಢ ನಿಲುವು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಉಂಟಾಗಿದ್ದು, ಎಲ್ಲಾ ಕ್ಷೇತ್ರಗಳ್ಲಲಿಯೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇರುವ ಅವಕಾಶಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು ಇಲ್ಲಿಯವರೆಗೆ ಶಿಕ್ಷಣ ತಲುಪಬೇಕಾದ ಎತ್ತರವನ್ನು ತಲುಪಿಲ್ಲ. ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮಿಗಿಲಾದುದು ಎಂಬ ಮನೋಭಾವ ಜನರಲ್ಲಿ ಬರುವಂತಾಗಬೇಕು. ಆಗ ಮಾತ್ರ ಶಿಕ್ಷಣ ಕ್ರಾಂತಿಯಾದಂತಾಗುತ್ತದೆ ಎಂದರು.

ದೇಶದಲ್ಲಿ ನಿರುದ್ಯೋಗ ಎನ್ನುವುದೇ ತಮಾಷೆ ವಿಚಾರ. ಸಾಕಷ್ಟು ಕ್ಷೇತ್ರಗಳಲ್ಲಿ ಕೆಲಸ ಮಾಡುವವರೆ ಇಲ್ಲ ಎಂಬ ದೂರುಗಳಿವೆ. ಜೊತೆಗೆ ನಿರುದ್ಯೋಗವೂ ಇದೆ ಎಂಬ ಮಾತುಗಳೂ ಇವೆ. ಇದು ದೇಶದ ವಿಚಿತ್ರ. ನಾವು ನಿಗಧಿಪಡಿಸಿಕೊಂಡ ಗುರಿಗೆ ಹೆಚ್ಚು ಗಮನ ನೀಡಬೇಕು. ಜ್ಞಾನ ಮತ್ತು ಕೌಶಲವನ್ನು ಬೆಳೆಸಿಕೊಳ್ಳದಿದ್ದರೆ ನಾವು ಎಲ್ಲಿಯೂ ಸಲ್ಲುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೆಎಸ್‌ಒಯುನ ಸಹಾಯಕ ಕುಲಸಚಿವ ರಾ. ರಾಮಕೃಷ್ಣ, ಪ್ರೊ. ದೇವರಾಜ್‌, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಎಚ್‌. ಬಾಲಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next