Advertisement

ಪೂರ್ವ ಲಡಾಖ್‌ನ ಕಾರ್ಯಾಚರಣೆ ಐಎಎಫ್ ಕ್ಷಮತೆಗೆ ಸಾಕ್ಷಿ

01:41 AM Oct 09, 2021 | Team Udayavani |

ಹಿಂಡನ್‌: ಪೂರ್ವ ಲಡಾಖ್‌ನಲ್ಲಿ ಕಳೆದ ವರ್ಷ ಸೃಷ್ಟಿಯಾಗಿದ್ದ ಪರಿಸ್ಥಿತಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಭಾರತೀಯ ವಾಯುಪಡೆ (ಐಎಎಫ್)ಯ ಕಾರ್ಯಾಚರಣೆಗಳು, ಐಎಎಫ್ ಯುದ್ಧಕ್ಕೆ ಸದಾ ಸಿದ್ಧವಿರುವ ಚುರುಕುತನ ಹಾಗೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವ ವಾಯುಪಡೆಯ ಶಕ್ತಿ – ಕ್ಷಮತೆಗೆ ಸೂಕ್ತ ಉದಾಹರಣೆಯಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ವಿ.ಆರ್‌. ಚೌಧರಿ ತಿಳಿಸಿದ್ದಾರೆ.

Advertisement

ಐಎಎಫ್ 89ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ, ಉತ್ತರ ಪ್ರದೇಶದ ಹಿಂಡನ್‌ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ವಾಯುಪಡೆಯ ಕ್ಷಮತೆ ಮತ್ತಷ್ಟು ಹೆಚ್ಚಾಗಬೇಕು. ಇದಕ್ಕಾಗಿ ಐಎಎಫ್ ಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಹಿರಿಯ ಅಧಿಕಾರಿಗಳು, ತಮ್ಮ ಕಿರಿಯ ಅಧಿಕಾರಿಗಳ ಕರ್ತವ್ಯ ಪರತೆಯನ್ನು ಪೋಷಿಸುವ ಹಾಗೂ ಅವರ ಅಂತಃಶಕ್ತಿಯನ್ನು ಹೆಚ್ಚಿಸಲೂ ತಮ್ಮ ಗಮನ ಹರಿಸಬೇಕು ಎಂದರು.

ಗೌರವ: ಪೂರ್ವ ಲಡಾಖ್‌ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಾಯುಪಡೆಯ ಮೂರು ಸ್ಕ್ವಾಡ್ರಾನ್‌ಗಳಿಗೆ ವಾಯುಪಡೆಯ ಮುಖ್ಯಸ್ಥರಿಂದ ನೀಡಲಾಗುವ ಯೂನಿಟ್‌ ಸೈಟೇಶನ್‌ ಗೌರವ ನೀಡಲಾಯಿತು. ಮಿಗ್‌-29 ವಿಮಾನಗಳನ್ನು ಹೊಂದಿರುವ ಐಎಎಫ್ ನಂ. 47 ಸ್ಕ್ವಾಡ್ರಾನ್‌, 116 ಹೆಲಿಕಾಪ್ಟರ್‌ ಯೂನಿಟ್‌ ಹಾಗೂ “2255 ಸ್ಕ್ವಾಡ್ರನ್‌’ಗಳಿಗೆ ಈ ಗೌರವ ಸಿಕ್ಕಿದೆ.

ಮೋದಿ ಶುಭಾಶಯ
ವಾಯುಪಡೆಯ ಸಂಸ್ಥಾಪನ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, “”ಭಾರತೀಯ ವಾಯುಪಡೆಯು ಧೈರ್ಯ, ಶ್ರದ್ಧೆ ಹಾಗೂ ವೃತ್ತಿಪರತೆಯ ಪ್ರತೀಕವಾಗಿದೆ. ಅತ್ಯಂಕ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದೇಶದ ಸುರಕ್ಷತೆಗಾಗಿ ಚಾಣಾಕ್ಷ ಸೇವೆಯನ್ನು ಮಾಡಿರುವ ಈ ಪಡೆ, ಈ ಮೂಲಕ ತನ್ನ ಹೆಗ್ಗುರುತನ್ನು ಸ್ಥಾಪಿಸಿದೆ” ಎಂದಿದ್ದಾರೆ.

ಇದನ್ನೂ ಓದಿ:ಉಪ ಚುನಾವಣೆ: ಎರಡೂ ಕ್ಷೇತ್ರಗಳಲ್ಲಿ 37 ಅಭ್ಯರ್ಥಿಗಳಿಂದ 57 ನಾಮಪತ್ರ ಸಲ್ಲಿಕೆ

Advertisement

ಹಿಂಡನ್‌ನಲ್ಲೂ ಪ್ರದರ್ಶನ
ಲೇಹ್‌ನಲ್ಲಿ ಗಾಂಧಿ ಜಯಂತಿ ದಿನದಂದು ಅನಾವರಣಗೊಳಿಸಿದ್ದ 1 ಸಾವಿರ ಕೆ.ಜಿ. ತೂಕದ ಖಾದಿ ಧ್ವಜವನ್ನು ಶುಕ್ರವಾರ ಐಎಎಫ್ ದಿನದಂದು ಮತ್ತೆ ಪ್ರದರ್ಶಿಸಲಾಗಿದೆ. ಅದು 225 ಅಡಿ ಉದ್ದ, 150 ಅಡಿ ಅಗಲ ಇದೆ. ಐಎಎಫ್ 75 ವಿಮಾನಗಳು ಆ ಧ್ವಜದ ಸುತ್ತ ಗೌರವಪೂರ್ವಕ ಹಾರಾಟ ನಡೆಸಿದವು. ಭದ್ರವಾದ ಲೋಹದ ಸ್ತಂಭದ ಮೂಲಕ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಅದರ ಪಕ್ಕದಲ್ಲಿಯೇ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಲಾಗಿತ್ತು ಮತ್ತು ವಿಶ್ವದ ಅತ್ಯಂತ ದೊಡ್ಡ ಖಾಕಿ ರಾಷ್ಟ್ರ ಧ್ವಜ ಎಂದು ಬರೆಯಲಾಗಿತ್ತು. ಅದನ್ನು ಲೇಹ್‌ನಿಂದ ಹಿಂಡನ್‌ಗೆ ತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next