ಹೊಸದಿಲ್ಲಿ: ಎಂಥ ವಿಷಮ ಸ್ಥಿತಿಯಲ್ಲೂ ನಾಗರಿಕರ ರಕ್ಷಣೆಗೆ ದೌಡಾಯಿಸುವ ದೇಶದ ಸೇನಾಪಡೆಗಳು ದೇಶ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಯೋಧರ ಬೆನ್ನಿಗೆ ನಿಲ್ಲದಿರಲು ಸಾಧ್ಯವೇ? ಸೇನೆಯ ಇಂಥ ಸಾಹಸಮಯ ಕಾರ್ಯಾಚರಣೆಗೆ ಹೊಸ ಸೇರ್ಪಡೆ ಇತ್ತೀಚೆಗೆ ಲಡಾಖ್‌ನ ಹಿಮಮಯ ಗಡಿಯಲ್ಲಿ ನಡೆದ ಐಎ ಫ್ ನ “ಡಾರ್ಕ್ ನೈಟ್ ಏರ್‌ಲಿಫ್ಟ್’.
ಹೌದು, ಎ. 9ರಂದು ಲಡಾಖ್‌ನ ಗಡಿ ಪ್ರದೇಶದಲ್ಲಿ ಯಂತ್ರವೊಂದನ್ನು ನಿರ್ವಹಿಸುತ್ತಿದ್ದಾಗ ಯೋಧರೊಬ್ಬರ ಕೈ ತುಂಡರಿಸಲ್ಪಟ್ಟಿತ್ತು. 6ರಿಂದ 8 ಗಂಟೆಗಳ ಒಳಗೆ ಶಸ್ತ್ರಚಿಕಿತ್ಸೆ ನಡೆದರೆ ಮಾತ್ರ ಅವರಿಗೆ ಕೈಯನ್ನು ಜೋಡಿಸಲು ಸಾಧ್ಯವೆಂದು ವೈದ್ಯರು ಹೇಳಿದ್ದರು.
ಒಂದೆಡೆ ಆಪತ್ತಿನಲ್ಲಿರುವ ಯೋಧ, ಮತ್ತೂಂದೆಡೆ ವಿಪರೀತ ಹಿಮಗಾಳಿಯಿಂದ ತುಂಬಿರುವ ಗಡಿ, ತಡರಾತ್ರಿ, ಕ್ಲಿಷ್ಟಕರ ವಾತಾವರಣ… ಆದರೆ ಇದ್ಯಾವುದಕ್ಕೂ ಜಗ್ಗದ ಭಾರತೀಯ ವಾಯುಪಡೆಯು ತತ್‌ಕ್ಷಣವೇ ಕಾರ್ಯಾಚರಣೆಗೆ ಇಳಿಯಿತು.
ಭಾರತೀಯ ಸೇನೆಯ ಜತೆಗೆ ಸಂವಹನ ನಡೆಸಿ ಕೈ ಕತ್ತರಿಸಲ್ಪಟ್ಟ ಯೋಧನನ್ನು ಲಡಾಖ್‌ನಿಂದ ಲೇಹ್ ವಾಯುನೆಲೆಗೆ ಕರೆತರಲಾಯಿತು. ಬಳಿಕ ವಾಯುಪಡೆಯ ಅತ್ಯಾಧುನಿಕ ಸಿ-130 ಜೆ ಸೂಪರ್ ಹರ್ಕ್ಯುಲಸ್ ವಿಮಾನವು ನೈಟ್ ವಿಷನ್ ಗಾಗಲ್ಸ್ ನೆರವಿನಿಂದ ಲೇಹ್ ವಾಯುನೆಲೆಯಲ್ಲಿ ಇಳಿಯಿತು.
ಅನಂತರ ಯೋಧನನ್ನು 4 ತಾಸುಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಲೇಹ್‌ನಿಂದ ಹೊಸದಿಲ್ಲಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಬಳಿಕ ಹೊಸದಿಲ್ಲಿಯ ಆರ್ಮಿ ರಿಸರ್ಚ್ ರೆಫರಲ್ ಆಸ್ಪತ್ರೆಗೆ ಯೋಧನನ್ನು ದಾಖಲಿಸಿ, ಅಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಸಲ್ಪಟ್ಟ ಕೈಯನ್ನು ಮರಳಿ ಜೋಡಿಸಲಾಗಿದೆ.
ಈ ಮೂಲಕ ಸ್ಥಳ, ಪರಿಸ್ಥಿತಿ ಏನೇ ಇದ್ದರೂ ದೇಶ ರಕ್ಷಣೆ ಮತ್ತು ದೇಶ ಕಾಯುವ ಯೋಧರ ರಕ್ಷಣೆಗೆ ಭಾರತೀಯ ಭದ್ರತ ಪಡೆಗಳು ಸದಾ ಸಿದ್ಧ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
ಜಾಲತಾಣದಲ್ಲಿ ಪ್ರಶಂಸೆ ಲೇಹ್‌ನಲ್ಲಿ ನಡೆದ ರಾತೋರಾತ್ರಿ ಕಾರ್ಯಾಚರಣೆ ಬಗ್ಗೆ ವಾಯು ಪಡೆ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುರ್ಗಮ ಪ್ರದೇಶದಲ್ಲಿ, ತಡರಾತ್ರಿಯಲ್ಲೂ ಐಎಎಫ್ ತೋರಿದ ಬದ್ಧತೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.