ನವದೆಹಲಿ: ರಕ್ಷಣಾ ಪಡೆಗಳ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ದೇಶಿಯ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ 2.23 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಗುರುವಾರ ಅನುಮೋದನೆ ನೀಡಿದೆ. ಭಾರತದ ಇತಿಹಾಸದಲ್ಲೇ ದೇಶಿಯ ಸಂಸ್ಥೆಗಳು ಸ್ವೀಕರಿಸಿರುವ ಅತಿದೊಡ್ಡ ಖರೀದಿ ಪ್ರಸ್ತಾಪ ಇದಾಗಿದೆ ಎಂದೂ ಹೇಳಲಾಗಿದೆ.
ಇದರಲ್ಲಿ 97 ತೇಜಸ್ ಯುದ್ಧ ವಿಮಾನಗಳು ಹಾಗೂ 156 ಪ್ರಚಂಡ್ ಯುದ್ಧ ಕಾಪ್ಟರ್‌ಗಳ ಖರೀದಿಯೂ ಸೇರಿದೆ. ಜತೆಗೆ, ಎಸ್‌ಯು-30 ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲೂ ಡಿಎಸಿ ಅನುಮತಿ ನೀಡಿದೆ.
ಅನುಮೋದನೆ ನೀಡಲಾಗಿರುವ 2.23 ಲಕ್ಷ ಕೋಟಿ ರೂ.ಮೌಲ್ಯದ ಉತ್ಪನ್ನಗಳಲ್ಲಿ ಶೇ.98 ಅನ್ನು ದೇಶೀಯ ಕೈಗಾರಿಕೆಗಳಿಂದಲೇ ಖರೀದಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಹೆಜ್ಜೆಗೆ ಮತ್ತಷ್ಟು ಬಲ ಒದಗಿಸಲಿದ್ದು, ಅಪಾರ ಉದ್ಯೋಗ ಸೃಷ್ಟಿಗೂ ನೆರವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ದೇಶಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ , ಉತ್ಪನ್ನಗಳ ಅಂತಿಮ ಬೆಲೆಯನ್ನು ನಿಗದಿಪಡಿಸಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದೂ ಸಚಿವಾಲಯ ಹೇಳಿದೆ.
ಏನೆಲ್ಲಾ ಖರೀದಿಗೆ ಅನುಮೋದನೆ?
– ಟೈಪ್-2/ಟೈಪ್-3 ಟ್ಯಾಂಕ್‌ನಿಗ್ರಹ ಶಸ್ತ್ರ
– ಮಧ್ಯಮ ಶ್ರೇಣಿಯ ನೌಕೆ ನಿಗ್ರಹ ಕ್ಷಿಪಣಿ
– ಸ್ವಯಂಚಾಲಿತ ಟಾರ್ಗೆಟ್ ಟ್ರ್ಯಾಕರ್
– ಡಿಜಿಟಲ್ ಬಸ್ಟಾಲಿಕ್ ಕಂಪ್ಯೂಟರ್‌ಗಳು
– ಐಎಎಫ್ಗಾಗಿ 97 ತೇಜಸ್ ಯುದ್ಧವಿಮಾನ
– ಸೇನೆ/ನೌಕಾಪಡೆಗಾಗಿ 156 ಕಾಪ್ಟರ್