Advertisement

ಪಾಕ್ ಅಣು ನೆಲೆಗಳ ಧ್ವಂಸ ಮಾಡುತ್ತೇವೆ; ಏ|ಮಾ|ಧಾನೋವಾ

06:00 AM Oct 06, 2017 | Team Udayavani |

ನವದೆಹಲಿ: ಭಾರತೀಯ ವಾಯುಸೇನೆಯ ಶಕ್ತಿ, ಸಾಮರ್ಥ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಬೇಕಾದಲ್ಲಿ ಪಾಕಿಸ್ತಾನದಲ್ಲಿರುವ ಅಣ್ವಸ್ತ್ರ ನೆಲೆಗಳನ್ನು ಹುಡುಕಿ, ಅವುಗಳ ನಾಶ ಪಡಿಸುವ ತಾಕತ್ತು ನಮಗಿದೆ,ಎಂದು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಏರ್‌ ಮಾರ್ಷಲ್‌ ಬಿ.ಎಸ್‌. ಧಾನೋವಾ ಖಡಕ್ಕಾಗಿ ಹೇಳಿದ್ದಾರೆ. 

Advertisement

ಏರ್‌ ಫೋರ್ಸ್‌ ದಿನದ ಅಂಗವಾಗಿ ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದ ಅವರು, ನೆರೆಯ ದೇಶಗಳ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಉಗ್ರರ ಕೈಗೆ ಸಿಕ್ಕರೆ ಗತಿಯೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಯಾಗಿ, ಸರ್ಕಾರ ಒಮ್ಮೆ ಒಪ್ಪಿಗೆ ಕೊಟ್ಟರೆ ನಾವು ಆ ದೇಶದೊಳಗೇ ನುಗ್ಗಿ ಅಣು ನೆಲೆಗಳ ಧ್ವಂಸ ಮಾಡುತ್ತೇವೆ ಎಂದಿದ್ದಾರೆ. 

ದೇಶದ ರಕ್ಷಣೆಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧವಿದ್ದೇವೆ. ಅದು ಪಾಕಿಸ್ತಾನವಿರಲಿ ಅಥವಾ ಚೀನಾವಿರಲಿ, ನಮ್ಮ ಮೇಲೆ ಕಾಲು ಕೆದರಿಕೊಂಡು ಯುದ್ಧಕ್ಕೆ ಬಂದರೂ ಪರ್ವಾಗಿಲ್ಲ. ನಾವು ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಏರ್‌ ಮಾರ್ಷಲ್‌ ಧಾನೋವಾ ಅವರು ಸ್ಪಷ್ಟ ಮಾತುಗಳಲ್ಲಿಯೇ ನೆರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು. 

ನಾವು ಕರಡು ಅಣು ಸಿದ್ಧಾಂತವನ್ನು ಒಳಗೊಂಡಿದ್ದೇವೆ. ಅಂದರೆ, ನಮ್ಮ ಶತ್ರುಗಳು ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡಲು ಮುಂದಾದಲ್ಲಿ ನಾವು, ಆ ದೇಶದೊಳಗೆ ಇರಿಸಲಾಗಿರುವ ಪರಮಾಣು ಅಸ್ತ್ರಗಳ ನೆಲೆಗಳನ್ನು ಪತ್ತೆ ಮಾಡಿ ನಾಶ ಪಡಿಸುತ್ತೇವೆ. ಈ ಸಾಮರ್ಥ್ಯ ಭಾರತೀಯ ವಾಯು ಸೇನೆಗೆ ಇದೆ ಎಂದು ಹೇಳಿದರು. 

ಸರ್ಜಿಕಲ್‌ ಸ್ಟ್ರೈಕ್‌ಗೂ ಸಿದ್ಧ
ಕೇವಲ ಇಷ್ಟೇ ಅಲ್ಲ, ಕೇಂದ್ರ ಸರ್ಕಾರ ಸರ್ಜಿಕಲ್‌ ದಾಳಿಗೆ ನಿರ್ಧಾರ ತೆಗೆದುಕೊಂಡರೆ ನಾವು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಧಾನೋವಾ ಹೇಳಿದ್ದಾರೆ. ಬೇಕಾದಲ್ಲಿ ಗಡಿಯುದ್ದಕ್ಕೂ ಇಂಥ ದಾಳಿ ನಡೆಸುತ್ತೇವೆ. ಜತೆಗೆ ಭೂಸೇನಾ ಮತ್ತು ನೌಕಾ ಪಡೆಯ ಜತೆಯಲ್ಲಿ ಯಾವ ಕಾರ್ಯಾಚರಣೆ ಬೇಕಾದರೂ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಅಲ್ಲದೆ ನಮಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ 40 ಸ್ಕ್ವಾಡ್ರನ್‌ನ ಅವಶ್ಯಕತೆ ಇದೆ. ಹಾಗಂತ ನಮಗೆ ದಾಳಿ ಮಾಡಲು ಶಕ್ತಿಯೇ ಇಲ್ಲ ಎಂಬರ್ಥವಲ್ಲ. ಬೇಕಾದಲ್ಲಿ ದೇಶದ ಎರಡು ಕಡೆಯ ಗಡಿಗಳಲ್ಲಿ ಆತಂಕ ಎದುರಾದರೂ ಎದುರಿಸುತ್ತೇವೆ ಎಂದರು. 

Advertisement

ವಾಪಸ್‌ ಹೋಗದ ಚೀನಾ
ಭಾರತ ಮತ್ತು ಚೀನಾ ನಡುವಿನ ಡೋಕ್ಲಾಂ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಅಲ್ಲಿಂದ ನಾವಷ್ಟೇ ವಾಪಸ್‌ ಬಂದೆವು. ಆದರೆ ಚೀನಾದ ಸೇನೆ ಇನ್ನೂ ಅಲ್ಲೇ ಇದೆ. ಅವರು ಭವಿಷ್ಯದಲ್ಲಾದರೂ ವಾಪಸ್‌ ಹೋಗುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. 

ಹಿಂದೆ 70 ದಿನಗಳ ಅವಧಿಯಲ್ಲಿ ಎರಡು ಸೇನೆಯ ನಡುವೆ ಯಾವುದೇ ದೈಹಿಕ ಘರ್ಷಣೆ ನಡೆದಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

ಡೋಕ್ಲಾಂನಲ್ಲಿ ರಸ್ತೆ ನಿರ್ಮಾಣ
ಭಾರತ ಮತ್ತು ಚೀನಾದ ನಡುವೆ ವಿರಸಕ್ಕೆ ಕಾರಣವಾಗಿದ್ದ ಡೋಕ್ಲಾಂನಲ್ಲೇ 500 ಚೀನಾ ಯೋಧರ ರಕ್ಷಣೆಯಲ್ಲಿ ಮತ್ತೆ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ ವಿರಸಕ್ಕೆ ಕಾರಣವಾಗಿದ್ದ ಪ್ರದೇಶದಿಂದ 10 ಕಿ.ಮೀ. ಆಚೆಗೆ ಈ ಕಾರ್ಯಾಚರಣೆಯಾಗುತ್ತಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ. ಡೋಕ್ಲಾಂ ಪ್ರದೇಶವನ್ನು ಚೀನಾ ಮತ್ತು ಭೂತಾನ್‌ ತಮ್ಮದೇ ಎಂದು ವಾದಿಸುತ್ತಿವೆ. ಈ ಜಗಳದಲ್ಲಿ ಭಾರತ, 
ಭೂತಾನ್‌ಗೆ ಬೆಂಬಲ ನೀಡಿತ್ತು. 

ಇದೀಗ ಮತ್ತೆ ಭಾರತದ ಜತೆ ವಿರಸ ಕಟ್ಟಿಕೊಳ್ಳಬಾರದು ಎಂಬ ಉದ್ದೇಶದಿಂದ ಚೀನಾ 10 ಕಿ.ಮೀ. ಆಚೆಗೆ ರಸ್ತೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಡೋಕ್ಲಾಂನಲ್ಲಿ ರಸ್ತೆ ನಿರ್ಮಿಸಲು ತಂದಿದ್ದ ಪರಿಕರಗಳನ್ನೇ ಇಲ್ಲಿ ಬಳಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next