ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಗೆ ಮುಯ್ಯಿ ತೀರಿಸುವ ರೀತಿಯಲ್ಲಿ ಇಂದು ನಸುಕಿನ ವೇಳೆ ಭಾರತೀಯ ವಾಯು ಪಡೆ ಪಾಕ್ ಎಲ್‌ಓಸಿ ದಾಟಿ ಪಾಕಿಸ್ಥಾನದ ಬಾಲಕೋಟ್‌ನಲ್ಲಿನ ಬೃಹತ್ ಜೈಶ್ ಉಗ್ರ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿ 300ಕ್ಕೂ ಅಧಿಕ ಉಗ್ರರನ್ನು ಬಲಿಪಡೆದಿರುವುದನ್ನು ಭಾರತದ ವಿವಿಧ ರಾಜಕೀಯ ಪಕ್ಷಗಳು ಪ್ರಶಂಸಿಸಿ ಸ್ವಾಗತಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ತೋರಿರುವ ದೃಢ ಸಂಕಲ್ಪದ ಫಲವಾಗಿಯೇ ಭಾರತೀಯ ವಾಯು ಪಡೆಯಿಂದ ಈ ದಾಳಿಗಳು ನಡೆದಿದ್ದು ಪಾಕಿಸ್ಥಾನಕ್ಕೆ ತಕ್ಕುದಾದ ಪಾಠವನ್ನು ನಮ್ಮ ಸೇನೆ ಕಲಿಸಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಭಾರತೀಯ ವಾಯು ಪಡೆಯ ದಾಳಿಯನ್ನು ಪ್ರಶಂಸಿಸಿದ್ದಾರೆ.
“ನಮ್ಮ ಸೈನಿಕರು ಹುತಾತ್ಮರಾದ ನೋವು ಮತ್ತು ದುಃಖವನ್ನು ಅನುಭವಿಸಿದ್ದ ಪ್ರತಿಯೋರ್ವ ಭಾರತೀಯನಿಗೆ ಇಂದು ಬೆಳಗ್ಗೆ ಭಾರೀ ನೆಮ್ಮದಿ ಉಂಟಾಗಿದೆ. ಅತ್ಯಂತ ನಿಖರ ಹಾಗೂ ಮಾರಕ ವೈಮಾನಿಕ ದಾಳಿ ನಡೆಸಿರುವ ನಮ್ಮ ವಾಯುಪಡೆಗೆ ಸಲಾಂ; ನಮ್ಮ ಸೇನೆ ವಿಶ್ವ ಮಟ್ಟದ್ದಾಗಿದೆ. ಪ್ರಧಾನಿಯವರ ರಾಜಕೀಯ ಸಂಕಲ್ಪದಿಂದಾಗಿ ಈ ಎಲ್ಲ ವ್ಯತ್ಯಾಸಗಳಾಗಿವೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಹೇಳಿದ್ದಾರೆ.
ಭಾರತೀಯ ವಾಯು ಪಡೆ ದಾಳಿ ನಡೆಸಿದ್ದು ಪಿಓಕೆಯಲ್ಲಿನ ಬಾಲಕೋಟ್ ಇರಬಹುದೇ ಅಥವಾ ಖೈಬರ್ ಫಖ್‌ತೂನ್ ಖ್ವಾ ಪ್ರಾಂತ್ಯದಲ್ಲಿ ಇರಬಹುದೇ ಎಂಬ ಶಂಕೆಗೆ ಉತ್ತರವಾಗಿ ಮಾಧವ್ ಅವರು, ದಾಳಿ ನಡೆದಿರುವುದು ಖೈಬರ್ ಫಖ್‌ತೂನ್‌ಖ್ವಾದಲ್ಲೇ ಮತ್ತು ಬಾಲಕೋಟ್ ಇರುವುದು ಈ ಪ್ರಾಂತ್ಯದ ಮನ್‌ಶೇರಾ ಜಿಲ್ಲೆಯಲ್ಲಿ ಎಂದು ಖಚಿತಪಡಿಸಿದ್ದಾರೆ.
ಭಾರತೀಯ ವಾಯು ಪಡೆಯ ನಿಖರ ಮತ್ತು ಮಾರಕ ದಾಳಿಯ ಶ್ಲಾಘನೆಗೈದಿರುವ ರಾಹುಲ್ ಗಾಂಧಿ, ಭಾರತೀಯ ವಾಯು ಪಡೆಯು ಭಾರತೀಯರನ್ನು ಸುರಕ್ಷಿತವಾಗಿರಿಸಿದೆ ಎಂದು ಹೊಗಳಿದ್ದಾರೆ.
ಪಾಕಿಸ್ಥಾನದ ಮೇಲಿನ ದಾಳಿಗಾಗಿ ಇಡಿಯ ದೇಶದ ಜನರೇ ನಮ್ಮ ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ; ಪ್ರಧಾನಿ ಮೋದಿ ಅವರ ದೃಢ ಸಂಕಲ್ಪದ ನಾಯಕತ್ವದಲ್ಲಿ ಜನರಿಗೆ ವಿಶ್ವಾಸವಿದೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಭಾರತೀಯ ವಾಯು ಪಡೆಯ ದಾಳಿಯನ್ನು ಸ್ವಾಗತಿಸಿ ಬೆಂಬಲಿಸಿರುವ ಇತರ ನಾಯಕರೆಂದರೆ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ – ಪಂಜಾಬ್ ಸಿಎಂ ಅಮರೀಂದರ್ ಸಿಂಗ್.